Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ

---Advertisement---

ಸುದ್ದಿಒನ್,ಬೆಂಗಳೂರು,ಜೂನ್.03: ಡಿ.ಕೆ.ಶಿವಕುಮಾರ್ ಅವರು ಇಂದು (ಬುಧವಾರ) ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ. ಸಂಜೆ 4.05ಕ್ಕೆ ಲೋಕಸೌಧದ ಭವ್ಯ ಗಾಜಿನಮನೆಯಲ್ಲಿ ಈ ಅದ್ಧೂರಿ ಪ್ರಮಾಣ ವಚನ ಸಮಾರಂಭ ನೆರವೇರಲಿದೆ.

ದೇಶದ ಮೂಲೆ ಮೂಲೆಗಳಿಂದ ಸುಮಾರು 500ಕ್ಕೂ ಅಧಿಕ ಗಣ್ಯಾತಿಗಣ್ಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ವಿವಿಐಪಿಗಳ ಆಗಮನದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲಾಗಿದೆ. ಲೋಕಸೌಧದ ಸುತ್ತಮುತ್ತ ಸಾರ್ವಜನಿಕರಿಗೆ ಪ್ರವೇಶವಿಲ್ಲದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಕೆಪಿಸಿಸಿ ಕಚೇರಿ ಹಾಗೂ ಶಾಂಗ್ರಿಲಾ ಹೋಟೆಲ್ ವ್ಯಾಪ್ತಿಯನ್ನು ‘ನೋ ಫ್ಲೈ ಜೋನ್’ (ಡ್ರೋನ್ ಹಾಗೂ ಹಾರಾಟ ನಿಷೇಧಿತ ವಲಯ) ಎಂದು ಘೋಷಿಸಲಾಗಿದೆ.

ಸಂಚಾರ ದಟ್ಟಣೆ ನಿಯಂತ್ರಿಸಲು ಲೋಕಭವನದ ಆಸುಪಾಸಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ಪಾದಚಾರಿ ಮಾರ್ಗಗಳ ಉದ್ದಕ್ಕೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ವಿಧಾನಸೌಧದ ಮುಂಭಾಗ, ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನ ಹಾಗೂ ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ಆವರಣದಲ್ಲಿ ದೈತ್ಯ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಸಮಾರಂಭದ ಪ್ರತಿಯೊಂದು ಕ್ಷಣವೂ ಈ ಸ್ಕ್ರೀನ್‌ಗಳಲ್ಲಿ ನೇರ ಪ್ರಸಾರವಾಗಲಿದ್ದು, ಸಾರ್ವಜನಿಕರು ಲೈವ್ ಆಗಿ ವೀಕ್ಷಿಸಬಹುದಾಗಿದೆ.

ನೂತನ ಸಿಎಂ ತವರು ಜಿಲ್ಲೆಯಾದ ರಾಮನಗರ, ಕನಕಪುರ ಸೇರಿದಂತೆ ಮಂಡ್ಯ, ಮೈಸೂರು ಹಾಗೂ ಮಾಗಡಿಯಿಂದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಜನರನ್ನು ರಾಜಧಾನಿಗೆ ಕರೆತರಲು ಸ್ಥಳೀಯ ಶಾಸಕರು 100ಕ್ಕೂ ಹೆಚ್ಚು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದ್ದು, ಬುಧವಾರ ಬೆಳಗ್ಗೆಯಿಂದಲೇ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಜನಸಾಗರ ಹರಿದುಬರುತ್ತಿದೆ.

ಹೈಕೋರ್ಟ್ ಆವರಣವನ್ನು ಹೊರತುಪಡಿಸಿ, ನಗರದಾದ್ಯಂತ ಡಿ.ಕೆ.ಶಿವಕುಮಾರ್ ಅವರ ಬೃಹತ್ ಫ್ಲೆಕ್ಸ್ ಮತ್ತು ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ. ರೇಸ್‌ಕೋರ್ಸ್ ರಸ್ತೆ, ಲೋಕಭವನ ಹಾಗೂ ವಿಧಾನಸೌಧದ ಸುತ್ತಮುತ್ತಲಿನ ಮಾರ್ಗಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಶುಭ ಕೋರಿ ತರಹೇವಾರಿ ಬ್ಯಾನರ್‌ ಗಳನ್ನು ಹಾಕಿದ್ದು, ರಾಜಧಾನಿಯಲ್ಲಿ ಸಂಪೂರ್ಣ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

Join WhatsApp

Join Now

Join Telegram

Join Now