ಸುದ್ದಿಒನ್,ಬೆಂಗಳೂರು,ಜೂನ್.1: ರಾಜ್ಯಾದ್ಯಂತ ಮುಂಗಾರು ಪೂರ್ವ ಮಾರುತಗಳು ಭರ್ಜರಿಯಾಗಿ ಬೀಸುತ್ತಿದ್ದು, ವರುಣನ ಅಬ್ಬರ ಜೋರಾಗಿದೆ. ಮುಂದಿನ ಕೆಲವು ದಿನಗಳ ಕಾಲ ಕರ್ನಾಟಕದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ವಿಶೇಷವಾಗಿ ದಕ್ಷಿಣ ಒಳನಾಡಿನ ಭಾಗಗಳಲ್ಲಿ ಮಳೆಯ ಆರ್ಭಟ ಜೋರಾಗಿರಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಒಟ್ಟು ಏಳು ಜಿಲ್ಲೆಗಳಿಗೆ ಈಗಾಗಲೆ ‘ಯೆಲ್ಲೋ ಅಲರ್ಟ್’ ಘೋಷಣೆ ಮಾಡಲಾಗಿದೆ.
ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲೆಗಳಾದ ಮೈಸೂರು, ಕೊಡಗು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಮಳೆಯ ಜೊತೆಗೆ ಗಂಟೆಗೆ ಸುಮಾರು 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಓಡಾಡದೆ ಸುರಕ್ಷಿತವಾಗಿರಲು ಕೋರಲಾಗಿದೆ.
ಇತ್ತ ಉತ್ತರ ಒಳನಾಡಿನ ಭಾಗದಲ್ಲೂ ಮೋಡ ಕವಿದ ವಾತಾವರಣವಿದ್ದು, ಮಳೆಯ ಮುನ್ಸೂಚನೆ ಸಿಕ್ಕಿದೆ. ಬೆಳಗಾವಿ, ಧಾರವಾಡ, ಕಲಬುರಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್‌ನಷ್ಟು ತೀವ್ರ ವೇಗದಲ್ಲಿ ಗಾಳಿ ಬೀಸಲಿದೆ. ಇದರೊಂದಿಗೆ ಈ ಜಿಲ್ಲೆಗಳ ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಹವಾಮಾನ ಎಂದಿನಂತೆ ಸಾಧಾರಣವಾಗಿರಲಿದೆ.
ಕರಾವಳಿ ತೀರ ಪ್ರದೇಶಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರವಾದ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಸದ್ಯಕ್ಕೆ ಕರಾವಳಿ ಭಾಗದಲ್ಲಿ ಭಾರೀ ಮಳೆಯ ಮುನ್ಸೂಚನೆ ಇಲ್ಲದಿದ್ದರೂ, ಮೋಡ ಕವಿದ ತಂಪಾದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















