ಕರ್ನಾಟಕ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ತಾರಕಕ್ಕೇರಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸ ‘ಕಾವೇರಿ’ಯಲ್ಲಿ ನಡೆದ ಉಪಹಾರ ಸಭೆ ಇದೀಗ ಭಾರೀ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಮಹತ್ವದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ನಿರ್ಧಾರವನ್ನು ಸಚಿವರಿಗೆ ತಿಳಿಸಿದ್ದು, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿದ್ದಾರೆ ಎಂದು ಸಚಿವ ಎಚ್ ಕೆ ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಗುರುವಾರ ಬೆಳಿಗ್ಗೆ ನಡೆದ ಈ ಉಪಹಾರ ಸಭೆಗೆ ಹಲವು ಸಚಿವರು ಹಾಗೂ ಕಾಂಗ್ರೆಸ್ನ ಪ್ರಮುಖ ನಾಯಕರು ಹಾಜರಾಗಿದ್ದರು. ಸಭೆಯಲ್ಲಿ ರಾಜ್ಯ ರಾಜಕೀಯದ ಮುಂದಿನ ಬೆಳವಣಿಗೆಗಳು, ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ಪುನರ್ರಚನೆ ಕುರಿತಾಗಿ ಗಂಭೀರ ಚರ್ಚೆ ನಡೆದಿರುವ ಮಾಹಿತಿ ಹೊರಬಿದ್ದಿದೆ.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, “ಪಕ್ಷದ ತೀರ್ಮಾನವನ್ನು ಗೌರವಿಸುತ್ತೇನೆ” ಎಂದು ಹೇಳಿ ತಮ್ಮ ಸ್ಥಾನ ತ್ಯಜಿಸುವ ನಿರ್ಧಾರವನ್ನು ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೇ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಸಂದೇಶವನ್ನೂ ಸಚಿವರಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಡೆಸಿದ ಸರಣಿ ಸಭೆಗಳ ಬಳಿಕ ನಾಯಕತ್ವ ಬದಲಾವಣೆ ಬಹುತೇಕ ಅಂತಿಮಗೊಂಡಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ನಡೆದ ಚರ್ಚೆಗಳ ಬಳಿಕ ಡಿಕೆ ಶಿವಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ಒಪ್ಪಿಗೆ ಸಿಕ್ಕಿದೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.
ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಆತ್ಮೀಯತೆ ಕೂಡ ವಿಶೇಷ ಗಮನ ಸೆಳೆಯಿತು. ಡಿಕೆಶಿ ಸಿಎಂ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ದೃಶ್ಯಗಳು ವೈರಲ್ ಆಗಿದ್ದು, ಇಬ್ಬರು ನಾಯಕರು ಪರಸ್ಪರ ಆಲಿಂಗಿಸಿಕೊಂಡ ಕ್ಷಣ ಕಾಂಗ್ರೆಸ್ ಪಾಳಯದಲ್ಲಿ ಭಾವನಾತ್ಮಕ ವಾತಾವರಣ ನಿರ್ಮಿಸಿತು.ಕೆಲ ಸಚಿವರು ಸಭೆಯಲ್ಲಿ ಭಾವುಕರಾಗಿದ್ದರೆ, ಸಿದ್ದರಾಮಯ್ಯ ಅವರು ಕಳೆದ ಮೂರು ವರ್ಷಗಳ ಆಡಳಿತದಲ್ಲಿ ನೀಡಿದ ಸಹಕಾರಕ್ಕೆ ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ ಎನ್ನಲಾಗಿದೆ.
ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಮತ್ತಷ್ಟು ವೇಗ ಪಡೆದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರವೇ ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಅಲ್ಲಿ ಕಾಂಗ್ರೆಸ್ ಹೈಕಮಾಂಡ್ ಜೊತೆ ಅಂತಿಮ ರಾಜಕೀಯ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ, ಡಿಕೆ ಶಿವಕುಮಾರ್ ನಿವಾಸದ ಮುಂದೆ ಅಭಿಮಾನಿಗಳು ಹಾಗೂ ಬೆಂಬಲಿಗರು ಜಮಾಯಿಸುತ್ತಿದ್ದು, “ಭವಿಷ್ಯದ ಮುಖ್ಯಮಂತ್ರಿ” ಎಂಬ ಘೋಷಣೆಗಳು ಕೇಳಿಬರುತ್ತಿವೆ. ರಾಜ್ಯ ರಾಜಕೀಯದ ಮುಂದಿನ ಕೆಲ ಗಂಟೆಗಳು ಭಾರೀ ಕುತೂಹಲಕ್ಕೆ ಕಾರಣವಾಗಿವೆ.













