Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್: ಇನ್ಮುಂದೆ ಮನೆಯಲ್ಲೇ ಕುಳಿತು ಮೀಟರ್ ಹೆಸರು ಬದಲಾವಣೆ; ಬೆಸ್ಕಾಂ ಸೇವೆ ಡಿಜಿಟಲೀಕರಣ

---Advertisement---

ಬೆಂಗಳೂರು, ಆ. 27: ವಿದ್ಯುತ್ ಗ್ರಾಹಕರು ಕಚೇರಿಗಳಿಗೆ ಅಲೆದಾಡುವುದು ಹಾಗೂ ಮಧ್ಯವರ್ತಿಗಳ ಮೊರೆ ಹೋಗುವುದನ್ನು ತಪ್ಪಿಸಲು ಬೆಸ್ಕಾಂ ಮಹತ್ವದ ಕ್ರಮ ಕೈಗೊಂಡಿದೆ. ವಿದ್ಯುತ್ ಸ್ಥಾವರ ಮತ್ತು ಮೀಟರ್‌ಗಳ ಹೆಸರು ಬದಲಾವಣೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿದ್ದು, ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳ ನಗರ ಪ್ರದೇಶಗಳಲ್ಲಿ ಈ ಸೇವೆ ಜಾರಿಗೆ ಬಂದಿದೆ.ಈ ಮೂಲಕ ಹೆಸರು ಬದಲಾವಣೆ ಸೇವೆಯನ್ನು ಸಂಪೂರ್ಣ ಡಿಜಿಟಲ್ ರೂಪದಲ್ಲಿ ಒದಗಿಸುತ್ತಿರುವ ದೇಶದ ಮೊದಲ ವಿದ್ಯುತ್ ವಿತರಣಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬೆಸ್ಕಾಂ ಪಾತ್ರವಾಗಿದೆ. ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರು ಹೊಸ ಡಿಜಿಟಲ್ ವ್ಯವಸ್ಥೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ಇನ್ನು ಮುಂದೆ ಅರ್ಹ ಗ್ರಾಹಕರು ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ವಿದ್ಯುತ್ ಸಂಪರ್ಕದ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಬಹುದು. ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಮ್ಯೂಟೇಷನ್ ಹೊಂದಿರುವವರು ಹಾಗೂ ಬೆಸ್ಕಾಂ ನಗರ ಪ್ರದೇಶಗಳಲ್ಲಿ ಆಸ್ತಿ ಇ-ಪಿಐಡಿ ಹೊಂದಿರುವ ಅಥವಾ ಇಲ್ಲದ ಗ್ರಾಹಕರಿಗೂ ಈ ಸೌಲಭ್ಯ ಲಭ್ಯವಿದೆ. ಶೀಘ್ರದಲ್ಲೇ ಸೇವೆಯನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗುವುದು ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಹಿಂದೆ ವಿದ್ಯುತ್ ಸಂಪರ್ಕದ ಹೆಸರು ಬದಲಾವಣೆಗೆ ಕ್ರಯಪತ್ರ, ಎನ್‌ಒಸಿ, ತೆರಿಗೆ ರಶೀದಿ, ನಷ್ಟ ಪರಿಹಾರ ಬಾಂಡ್ ಸೇರಿದಂತೆ ಹಲವು ದಾಖಲೆಗಳನ್ನು ತೆಗೆದುಕೊಂಡು ಬೆಸ್ಕಾಂ ಕಚೇರಿಗಳಿಗೆ ತೆರಳಬೇಕಾಗಿತ್ತು. ಆದರೆ ಹೊಸ ಡಿಜಿಟಲ್ ವ್ಯವಸ್ಥೆಯಲ್ಲಿ ಯಾವುದೇ ಭೌತಿಕ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ.ಬೆಸ್ಕಾಂನ ಅಧಿಕೃತ RAPDRP Web Self-Service (WSS) ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಿ, ಇ-ಸ್ಟಾಂಪಿಂಗ್ ಮತ್ತು ಇ-ಸೈನ್ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ.

ಅರ್ಜಿದಾರರು ₹100 ಅರ್ಜಿ ಶುಲ್ಕ ಹಾಗೂ ₹1,194 ಇ-ಸ್ಟಾಂಪ್/ಇ-ಸೈನ್ ಶುಲ್ಕ ಸೇರಿದಂತೆ ಒಟ್ಟು ಮೊತ್ತವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು. ಇನ್ನು ಮುಂದೆ ಈ ಸೇವೆಗೆ ಸಂಬಂಧಿಸಿದಂತೆ ಬೆಸ್ಕಾಂ ಕಚೇರಿಗಳಲ್ಲಿ ನಗದು ಸ್ವೀಕರಿಸುವುದಿಲ್ಲ.
ಡಿಜಿಟಲ್ ಸಹಿ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣವೇ ಅಧಿಕೃತ ದೃಢೀಕರಣ ಪತ್ರ (OM) ಆನ್‌ಲೈನ್‌ನಲ್ಲಿ ಲಭ್ಯವಾಗಲಿದ್ದು, ಗ್ರಾಹಕರು ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ಮಾತನಾಡಿ, ಪ್ರಾಯೋಗಿಕ ಹಂತದಲ್ಲಿಯೇ 31 ಸಾವಿರಕ್ಕೂ ಹೆಚ್ಚು ವಿದ್ಯುತ್ ಸಂಪರ್ಕಗಳ ಹೆಸರು ಬದಲಾವಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ವಾರಕ್ಕೆ 2 ಸಾವಿರಕ್ಕೂ ಹೆಚ್ಚು ಅರ್ಜಿಗಳು ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ವೇಗವಾಗಿ ವಿಲೇವಾರಿಯಾಗುತ್ತಿವೆ. ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಗ್ರಾಹಕರಿಗೆ ಪಾರದರ್ಶಕ ಮತ್ತು ಉತ್ತಮ ಸೇವೆ ಒದಗಿಸುವುದು ಇಲಾಖೆಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.ಮುಂದಿನ ದಿನಗಳಲ್ಲಿ ಈ ಡಿಜಿಟಲ್ ಸೌಲಭ್ಯವನ್ನು ಬೆಸ್ಕಾಂನ ಗ್ರಾಮೀಣ ಪ್ರದೇಶಗಳಿಗೂ ಹಾಗೂ ರಾಜ್ಯದ ಇನ್ನುಳಿದ ನಾಲ್ಕು ಎಸ್ಕಾಂಗಳಿಗೂ ವಿಸ್ತರಿಸಲಾಗುವುದು ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now