ಸುದ್ದಿಒನ್, ಚಿತ್ರದುರ್ಗ, ಮೇ. 28: ಕರ್ತವ್ಯಲೋಪ, ಅನುದಾನ ದುರ್ಬಳಕೆ ಹಾಗೂ ಆಡಳಿತಾತ್ಮಕ ಅವ್ಯವಹಾರ ಆರೋಪಗಳ ಹಿನ್ನೆಲೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಸ್.ಪಿ. ರವೀಂದ್ರ ಅವರನ್ನು ರಾಜ್ಯ ಸರ್ಕಾರ ಸೇವೆಯಿಂದ ಅಮಾನತುಗೊಳಿಸಿ ಬುಧವಾರ ಆದೇಶ ಹೊರಡಿಸಿದೆ.ಜಿಲ್ಲಾಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಸಮರ್ಪಕ ಶುಚಿತ್ವ ಕಾಪಾಡದೇ ಇರುವುದು, ರೋಗಿಗಳು ಹಾಗೂ ಸಂದರ್ಶಕರ ದಟ್ಟಣೆ ನಿಯಂತ್ರಣದಲ್ಲಿ ವಿಫಲವಾಗಿರುವುದು, ರೋಗಿಗಳಿಗೆ ಸಕಾಲದಲ್ಲಿ ಆರೋಗ್ಯ ಸೇವೆ ಒದಗಿಸದಿರುವುದು ಸೇರಿದಂತೆ ಹಲವು ಆರೋಪಗಳು ಅವರ ವಿರುದ್ಧ ಕೇಳಿಬಂದಿದ್ದವು.
ಇದಲ್ಲದೆ, ಕಳೆದ ಸೆಪ್ಟೆಂಬರ್ 6ರಂದು ಆಸ್ಪತ್ರೆ ಸಿಬ್ಬಂದಿಗೆ ಸಾಮೂಹಿಕ ರಜೆ ಮಂಜೂರು ಮಾಡಿರುವುದು, ಕ್ಲಿನಿಕಲ್ ಹಾಗೂ ನಾನ್-ಕ್ಲಿನಿಕಲ್ ಸಿಬ್ಬಂದಿಯ ದೈನಂದಿನ ಕಾರ್ಯನಿರ್ವಹಣೆಯಲ್ಲಿ ಸಮರ್ಪಕ ಮೇಲ್ವಿಚಾರಣೆ ವಹಿಸದೇ ಇರುವುದು ಮತ್ತು ಅನುದಾನದ ಸಮರ್ಪಕ ಬಳಕೆಯಲ್ಲಿ ವಿಫಲವಾಗಿರುವ ಆರೋಪಗಳೂ ದಾಖಲಾಗಿದ್ದವು. ಈ ಎಲ್ಲ ವಿಚಾರಗಳು ಕಳೆದ ಸೆಪ್ಟೆಂಬರ್ 8ರಂದು ನಡೆದ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಡಾ. ರವೀಂದ್ರ ವಿರುದ್ಧ ಅಸಮಾಧಾನ ವ್ಯಕ್ತವಾಗಿತ್ತು.
ಅದೇ ರೀತಿ, ಜಿಲ್ಲಾಸ್ಪತ್ರೆಗೆ ಸಂಬಂಧಿಸಿದ ಔಷಧಗಳನ್ನು ನೇರ ಖರೀದಿ ಮೂಲಕ ಅಕ್ರಮವಾಗಿ ವ್ಯವಹರಿಸಿರುವುದು ಹಾಗೂ ಮೇಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಪತ್ರಿಕಾಗೋಷ್ಠಿ ನಡೆಸಿರುವ ಆರೋಪಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ತಕ್ಷಣದಿಂದಲೇ ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.










