ಬೆಂಗಳೂರು.ಜುಲೈ.23: 2024, 2025 ಮತ್ತು 2026ನೇ ಸಾಲಿನಲ್ಲಿ ಪದವಿ (Graduate), ಸ್ನಾತಕೋತ್ತರ ಪದವಿ (Post Graduate) ಹಾಗೂ ಡಿಪ್ಲೋಮಾ ಮುಗಿಸಿ 6 ತಿಂಗಳು ಕಳೆದರೂ ಉದ್ಯೋಗ ಸಿಗದ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಸರ್ಕಾರದ ‘ಯುವನಿಧಿ’ ಯೋಜನೆಗೆ ಉಚಿತವಾಗಿ ಅರ್ಜಿ ಸಲ್ಲಿಸಲು ಅರ್ಹ ನಿರುದ್ಯೋಗಿ ಯುವಕ-ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
2024, 2025 ಅಥವಾ 2026ರಲ್ಲಿ ಪದವಿ, ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾ ಉತ್ತೀರ್ಣರಾಗಿರಬೇಕು. ಕೋರ್ಸ್ ಮುಗಿದು 6 ತಿಂಗಳಾಗಿದ್ದರೂ ಸರ್ಕಾರಿ, ಖಾಸಗಿ ಅಥವಾ ಸ್ವಯಂ ಉದ್ಯೋಗ ಹೊಂದಿರಬಾರದು.ಯಾವುದೇ ಉನ್ನತ ವಿದ್ಯಾಭ್ಯಾಸವನ್ನು (Higher Education) ಮುಂದುವರೆಸುತ್ತಿರಬಾರದು.

ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಪ್ರತಿ ತಿಂಗಳು ₹3,000 ನಿರುದ್ಯೋಗ ಭತ್ಯೆ ಸಿಗಲಿದೆ. ಡಿಪ್ಲೋಮಾ ಹೊಂದಿದವರಿಗೆ ಪ್ರತಿ ತಿಂಗಳು ₹1,500 ನಿರುದ್ಯೋಗ ಭತ್ಯೆ ಸಿಗಲಿದೆ. ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳವರೆಗೆ ಈ ಭತ್ಯೆ ದೊರೆಯಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಕರ್ನಾಟಕ ಒನ್ (Karnataka One), ಗ್ರಾಮ ಒನ್ (Grama One), ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
ಇದಲ್ಲದೆ, ಮನೆಯಲ್ಲೇ ಕುಳಿತು ಸೇವಾ ಸಿಂಧು ಅಧಿಕೃತ ಪೋರ್ಟಲ್ sevasindhugs.karnataka.gov.in ಮೂಲಕವೂ ನೇರವಾಗಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.
ಈಗಾಗಲೇ ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡು ಪ್ರತಿ ತಿಂಗಳು ಹಣ ಪಡೆಯುತ್ತಿರುವ ಫಲಾನುಭವಿಗಳು, ನಿಯಮಿತವಾಗಿ ಹಣ ಪಡೆಯಲು ಪ್ರತಿ ತಿಂಗಳು ತಪ್ಪದೇ ಸ್ವಯಂ ಘೋಷಣೆ (Self-Declaration) ಮಾಡಿಕೊಳ್ಳುವುದು ಕಡ್ಡಾಯವಾಗಿದೆ.











