ಸುದ್ದಿಒನ್,ಬೆಂಗಳೂರು,ಮೇ.25: ಕಿರುತೆರೆ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಖ್ಯಾತ ನಿರೂಪಕಿ ಜಾಹ್ನವಿ ಅವರು ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಕನ್ನಡಿಗರ ಮನಗೆದ್ದಿದ್ದ ಈ ಕಿರುತೆರೆ ತಾರೆ, ಈಗ ಬಣ್ಣದ ಲೋಕದಿಂದ ರಾಜಕೀಯದತ್ತ ಮುಖ ಮಾಡುವ ಮೂಲಕ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ.
ವರ್ಷಗಳ ಕಾಲ ಈಟಿವಿ ಸೇರಿದಂತೆ ವಿವಿಧ ಪ್ರಮುಖ ವಾಹಿನಿಗಳಲ್ಲಿ ಯಶಸ್ವಿ ಆ್ಯಂಕರ್ ಆಗಿ ಕೆಲಸ ನಿರ್ವಹಿಸಿದ್ದ ಜಾಹ್ನವಿ, ಆನಂತರ ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ತಮ್ಮ ಚಾಣಾಕ್ಷತನ ಮತ್ತು ಮಾತುಗಾರಿಕೆಯಿಂದ ಅಪಾರ ಜನಪ್ರಿಯತೆ ಗಳಿಸಿದ್ದ ಅವರು, ಆ ಬಳಿಕ ಹಲವು ಟಿವಿ ಶೋಗಳು ಹಾಗೂ ಸಿನಿಮಾಗಳಲ್ಲೂ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದರು.

ಮನರಂಜನಾ ರಂಗದಲ್ಲಿ ಸಕ್ರಿಯರಾಗಿದ್ದ ಜಾಹ್ನವಿ, ಇದೀಗ ಪ್ರಾದೇಶಿಕ ಪಕ್ಷವಾದ ಜನತಾದಳ (ಜಾತ್ಯತೀತ) ಸೇರ್ಪಡೆಯಾಗುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಅಧಿಕೃತವಾಗಿ ಪ್ರವೇಶಿಸಿದ್ದಾರೆ. ಬೆಂಗಳೂರಿನ ಜೆ.ಪಿ. ಭವನದಲ್ಲಿ ನಡೆದ ಪಕ್ಷದ ಅಧಿಕೃತ ಕಾರ್ಯಕ್ರಮದಲ್ಲಿ ಅವರು ಜೆಡಿಎಸ್ನ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡರು. ಕೇಂದ್ರ ಸಚಿವರು ಹಾಗೂ ಜೆಡಿಎಸ್ನ ಹಿರಿಯ ನಾಯಕರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜಾಹ್ನವಿ ಪಕ್ಷದ ಬಾವುಟ ಹಿಡಿದರು. ಕಾರ್ಯಕ್ರಮದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಜಾಹ್ನವಿ ಅವರಿಗೆ ಜೆಡಿಎಸ್ ಪಕ್ಷದ ಶಾಲು ಹೊದಿಸಿ, ಧ್ವಜವನ್ನು ಹಸ್ತಾಂತರಿಸುವ ಮೂಲಕ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.
ನಟಿ ಹಾಗೂ ಟಿವಿ ನಿರೂಪಕಿ ಶ್ರೀಮತಿ ಜಾಹ್ನವಿ ಅವರು ಇಂದು ಕೇಂದ್ರ ಸಚಿವರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ @hd_kumaraswamy ಅವರ ಸಮ್ಮುಖದಲ್ಲಿ ಬೆಂಗಳೂರಿನ ಜೆ.ಪಿ. ಭವನದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ರಾಜ್ಯ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಶ್ರೀಮತಿ ರಶ್ಮಿ ರಾಮೇಗೌಡ ಅವರು ಪಕ್ಷದ ಧ್ವಜವನ್ನು ನೀಡಿ ಜಾಹ್ನವಿ ಅವರನ್ನು… pic.twitter.com/i5Ry7XZ9rX
— Janata Dal Secular (@JanataDal_S) May 24, 2026











