ಸುದ್ದಿಒನ್,ಕಲಬುರಗಿ,ಮೇ.23: ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಹತ್ತಿರ ಸಣ್ಣ ಕಣ್ಣಿನ ರೆಪ್ಪೆ ಮುಚ್ಚುವಷ್ಟರಲ್ಲಿ ದೊಡ್ಡ ದುರಂತವೊಂದು ಸಂಭವಿಸಿದೆ. ಲಾರಿ ಹಾಗೂ ಕ್ರೂಸರ್ ವಾಹನದ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐದು ಜನ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಜವರಾಯನ ಈ ಕ್ರೂರ ಅಟ್ಟಹಾಸ ಇಡೀ ಜಿಲ್ಲೆಯನ್ನೇ ನಡುಗಿಸಿದೆ.
ಮೃತಪಟ್ಟ ದುರ್ದೈವಿಗಳನ್ನು ತೋಲಾ ಸಾಬ್ ಕಾಶ್ವಾರ್ (27), ಹುಸೇನ್ ಷಾ (48), ಮೆಹಬೂಬ್ ಅಲಿ (45), ರಸೂಲ್ ಬೀ (42) ಮತ್ತು ಫಾತಿಮಾ ಅಲಿ (38) ಎಂದು ಗುರುತಿಸಲಾಗಿದೆ. ಈ ಕುಟುಂಬದ ಸದಸ್ಯರೆಲ್ಲರೂ ಕ್ರೂಸರ್ ವಾಹನದಲ್ಲಿ ಯಾದಗಿರಿಗೆ ತೆರಳಿದ್ದರು. ಅಲ್ಲಿಂದ ತಮ್ಮೂರಿಗೆ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬಂದ ಲಾರಿ ಯಮಸ್ವರೂಪಿಯಾಗಿ ಅಪ್ಪಳಿಸಿದೆ.

ಲಾರಿ ಮತ್ತು ಕ್ರೂಸರ್ ನಡುವಿನ ಡಿಕ್ಕಿ ಎಷ್ಟು ಪ್ರಬಲವಾಗಿತ್ತೆಂದರೆ, ಕ್ರೂಸರ್ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ ವಾಹನದ ಮುಂಭಾಗ ಗುರುತು ಸಿಗದಂತೆ ಜಜ್ಜಿಕೊಂಡಿದ್ದು, ಒಳಗಿದ್ದವರು ಹೊರಬರಲಾರದ ಸ್ಥಿತಿಯಲ್ಲಿದ್ದರು. ಅಪಘಾತದ ಭೀಕರತೆ ಸ್ಥಳೀಯರನ್ನು ಕಂಗೆಡಿಸಿದೆ.

ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೃತರ ಕುಟುಂಬಸ್ಥರ ಕ್ರಂದನ ಮುಗಿಲು ಮುಟ್ಟಿದೆ.









