ಚಿತ್ರದುರ್ಗ. ಮೇ.21: ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮದುವೆ ಮಾಡಿಸಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾಮಟ್ಟದ ಸಮನ್ವಯ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ಒಂದು ಬಾಲ್ಯವಿವಾಹ ಪ್ರಕರಣ ಬೆಳಕಿಗೆ ಬಂದಾಗ, ಅದಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರು ತನಿಖೆ ನಡೆಸಿದ್ದಾರೆ? ಪ್ರಕರಣ ಯಾವ ಹಂತದಲ್ಲಿದೆ? ಯಾರಿಗೆ ಶಿಕ್ಷೆಯಾಗಿದೆ ಎಂಬ ಸಂಪೂರ್ಣ ವಿವರ ಇರಬೇಕು. ಈ ನಿಟ್ಟಿನಲ್ಲಿ ಚಾಲ್ತಿಯಲ್ಲಿರುವ ಪ್ರಕರಣಗಳ ಬಗ್ಗೆ ನಿಖರವಾದ ಚಾರ್ಟ್ ಸಿದ್ಧಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಏಪ್ರಿಲ್ನಿಂದ ಮಾರ್ಚ್ ಅವಧಿಯಲ್ಲಿ ಒಟ್ಟು 202 ಬಾಲ್ಯವಿವಾಹಗಳ ಕುರಿತು ಮಾಹಿತಿ ಲಭ್ಯವಾಗಿತ್ತು. ಈ ಪೈಕಿ ಅಧಿಕಾರಿಗಳು ಸಕಾಲದಲ್ಲಿ ಭೇಟಿ ನೀಡಿ 117 ವಿವಾಹಗಳನ್ನು ಮುಂಚಿತವಾಗಿಯೇ ತಡೆದಿದ್ದಾರೆ. ಆದರೆ, ಕಣ್ಣು ತಪ್ಪಿಸಿ ಬೇರೆ ಬೇರೆ ಕಡೆ ವಿವಾಹವಾಗಿದ್ದ 85 ಪ್ರಕರಣಗಳನ್ನು ಪತ್ತೆ ಹಚ್ಚಿ, ಎಲ್ಲದರ ಮೇಲೂ ಎಫ್ಐಆರ್ ದಾಖಲಿಸಲಾಗಿದೆ ಎಂದು ಸಭೆಗೆ ವಿವರಿಸಿದರು.
ಬಾಲ್ಯವಿವಾಹ ತಡೆಗೆ ಜಿಲ್ಲೆಯಾದ್ಯಂತ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳು ಹಾಗೂ ಬಾಲ್ಯವಿವಾಹದ ಸಾಧ್ಯತೆ ಹೆಚ್ಚಿರುವ ಸೂಕ್ಷ್ಮ ಪ್ರದೇಶಗಳ ಗುರುತಿಸಿ, ಅಲ್ಲಿನ ಶಾಲೆ ಮತ್ತು ಕಾಲೇಜುಗಳಲ್ಲಿ ವಿಶೇಷ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬೀದಿ ನಾಟಕಗಳ ಮೂಲಕವೂ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಕಲ್ಪಿಸಲು ಆದ್ಯತೆ: ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಮೊದಲ ಆದ್ಯತೆಯ ಮೇಲೆ ಸ್ವಂತ ಕಟ್ಟಡಗಳನ್ನು ಕಲ್ಪಿಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಕೆಎಂಇಆರ್ಸಿ ಯೋಜನೆಯಡಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗಾಗಿ ರೂ.313 ಕೋಟಿ ಅನುದಾನ ಮಂಜೂರಾಗಿದ್ದು, ಈ ಹಣವನ್ನು ತಕ್ಷಣವೇ ಟೆಂಡರ್ ಪ್ರಕ್ರಿಯೆಗೆ ಒಳಪಡಿಸಿ ಕೆಲಸ ಆರಂಭಿಸಬೇಕು. ಗ್ರಾಮೀಣ ಭಾಗದಲ್ಲಿ ಈಗಾಗಲೇ ಅಂಗನವಾಡಿಗಳ ನಿರ್ಮಾಣಕ್ಕೆ ಜಾಗ ಸಿಕ್ಕಿದ್ದು, ನಗರ ಪ್ರದೇಶದಲ್ಲಿ ತೀವ್ರ ಸ್ಥಳಾವಕಾಶದ ಕೊರತೆ ಎದುರಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಿ ಜಾಗ ಗುರುತಿಸಿ, ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಸೂರು ಕಲ್ಪಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 324 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಈ ಪೈಕಿ ನಗರ ಪ್ರದೇಶದಲ್ಲಿ 172 ಹಾಗೂ ಗ್ರಾಮೀಣ ಭಾಗದಲ್ಲಿ 152 ಕೇಂದ್ರಗಳಿವೆ. ಕೆಎಂಆರ್ಎಸ್ ಯೋಜನೆಯ ಮೊದಲ ಹಂತದಲ್ಲಿ 247 ಅಂಗನವಾಡಿ ಕಟ್ಟಡಗಳ ನಿರ್ಮಾಣ ಹಾಗೂ 150 ಕಟ್ಟಡಗಳ ಮೇಲ್ದರ್ಜೀಕರಣ ಕೈಗೆತ್ತಿಕೊಳ್ಳಲಾಗಿದೆ. ದ್ವಿತೀಯ ಹಂತದಲ್ಲಿ ರೂ. 319 ಕೋಟಿ ಅನುದಾನದಲ್ಲಿ 769 ಹೊಸ ಕಟ್ಟಡಗಳ ನಿರ್ಮಾಣ ಹಾಗೂ 888 ಕಟ್ಟಡಗಳ ನವೀಕರಣ ಕಾರ್ಯ ಪ್ರಗತಿಯಲ್ಲಿದೆ ಎಂದು ಉಪನಿರ್ದೇಶಕ ವಿಜಯಕುಮಾರ್ ಸಭೆಗೆ ಮಾಹಿತಿ ನೀಡಿದರು.
ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೆ ಸರ್ಕಾರ ಜಾರಿಗೆ ತಂದಿರುವ ಪೌಷ್ಠಿಕ ಆಹಾರ ಯೋಜನೆಯಡಿ ಪ್ರಗತಿ ಸಾಧಿಸಬೇಕು. ಅರ್ಹ ಫಲಾನುಭವಿಗಳಿಗೆ ಪೌಷ್ಠಿಕ ಆಹಾರ ಸಮರ್ಪಕವಾಗಿ ತಲುಪುತ್ತಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆ ಪ್ರಮಾಣ ಕಡಿಮೆ ಮಾಡಲು ವಿಶೇಷ ಗಮನ ಹರಿಸಬೇಕು. ಗರ್ಭಿಣಿಯರು, ಬಾಣಂತಿಯರು ಹಾಗೂ ಕಿಶೋರಿಯರಲ್ಲಿ ಪೌಷ್ಟಿಕಾಂಶದ ಅರಿವು ಮೂಡಿಸಲು ಆರೋಗ್ಯ ಇಲಾಖೆ ಮತ್ತು ಎನ್ಜಿಒಗಳ ಸಹಯೋಗದೊಂದಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಾವಲು ಸಮಿತಿ ಸಭೆ ಕಡ್ಡಾಯ: ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಗಳ ಸಭೆಗಳನ್ನು ಕಡ್ಡಾಯವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಾವಲು ಸಮಿತಿಗಳು ಕೇವಲ ಹೆಸರಿಗಿರಬಾರದು. ನಿಯಮಿತವಾಗಿ ಸಭೆಗಳನ್ನು ನಡೆಸಿ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಾಗುವ ದೌರ್ಜನ್ಯ ಹಾಗೂ ಬಾಲ್ಯವಿವಾಹ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎಂ.ಪಿ.ಪ್ರವೀಣ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ಶಾಲಾ ಶಿಕ್ಷಣ ಇಲಾಖೆ ವಿದ್ಯಾಧಿಕಾರಿ ತಿಪ್ಪೇಸ್ವಾಮಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತಾ ನೆಲವಗಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಹರೀಶ್ ಕುಮಾರ್ ಸೇರಿದಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.






















