ಸುದ್ದಿಒನ್, ಚಿತ್ರದುರ್ಗ. ಮೇ.19: ಇಲ್ಲಿನ ಬುದ್ಧ ನಗರದಲ್ಲಿರುವ ನಗರ ಆರೋಗ್ಯ ಕೇಂದ್ರದ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಲಸಿಕಾ ಸತ್ರಕ್ಕೆ ಜಿಲ್ಲಾ ಮಟ್ಟದ ಆರೋಗ್ಯ ಅಧಿಕಾರಿಗಳ ತಂಡ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಿತು.
ಕಾರ್ಯಕ್ರಮದಲ್ಲಿ ನೆರೆದಿದ್ದ ತಾಯಂದಿರು ಮತ್ತು ವಿವೇಕಾನಂದ ಕಾಲೇಜಿನ ಬಿ.ಎಸ್ಸಿ ನಸಿರ್ಂಗ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್, ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ 12 ಮಾರಕ ರೋಗಗಳ ವಿರುದ್ಧ ಲಸಿಕೆಗಳನ್ನು ನೀಡಲಾಗುತ್ತಿದೆ. ನಿಯಮಿತ ಲಸಿಕಾ ವೇಳಾಪಟ್ಟಿಯನ್ನು ಅನುಸರಿಸುವುದರಿಂದ ಮಕ್ಕಳನ್ನು ಪ್ರಾಣಾಪಾಯದಿಂದ ಮತ್ತು ಗಂಭೀರ ಖಾಯಿಲೆಗಳಿಂದ ಮುಕ್ತವಾಗಿಡಬಹುದು ಎಂದು ಲಸಿಕಾ ವೇಳಾಪಟ್ಟಿಯ ಸಮಗ್ರ ಮಾಹಿತಿ ನೀಡಿದರು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೋವಿಂದರಡ್ಡಿ ಕೊಣ್ಣೂರ ಮಾತನಾಡಿ, ಆಸ್ಪತ್ರೆ ಹೆರಿಗೆಯ ಸುರಕ್ಷತೆ, ಮಗುವಿಗೆ ಎದೆಹಾಲು ಉಣಿಸುವುದರ ಮಹತ್ವ ಹಾಗೂ ಮುಂದಿನ ಮಗುವಿಗೆ ನೀಡಬೇಕಾದ ಸೂಕ್ತ ಕಾಲಾವಕಾಶ (ಅಂತರದ ಹೆರಿಗೆ) ಕುರಿತು ವಿವರಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಾನಕಿ ಅವರು ಹೆಣ್ಣುಮಕ್ಕಳಲ್ಲಿ ಕಂಡುಬರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ‘ಎಚ್ಪಿವಿ’ ಲಸಿಕೆ, ಅದರ ಮಹತ್ವ ಮತ್ತು ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯ ಕುರಿತು ಸಮಗ್ರವಾಗಿ ಮಾಹಿತಿ ಹಂಚಿಕೊಂಡರು.

ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ನಾಗರತ್ನ ಅವರು ಲಸಿಕೆ ಹಾಕಿಸಿಕೊಂಡ ನಂತರ ಸಾಮಾನ್ಯವಾಗಿ ಕಂಡುಬರಬಹುದಾದ ಅಡ್ಡ ಪರಿಣಾಮಗಳು ಮತ್ತು ಅವುಗಳನ್ನು ಎದುರಿಸುವ ವಿಧಾನಗಳು ಹಾಗೂ ತಾಯಂದಿರು ಕಡ್ಡಾಯವಾಗಿ ತಿಳಿದಿರಬೇಕಾದ ಪ್ರಮುಖ ಸಂದೇಶಗಳ ಕುರಿತು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.















