ಸುದ್ದಿಒನ್, ಚಿತ್ರದುರ್ಗ,ಮೇ.15: ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವವನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ, ತಮ್ಮ ಬದುಕಿನ ಪ್ರತಿಕ್ಷಣದಲ್ಲೂ ಅಳವಡಿಸಿಕೊಂಡು ಸಾಗುತ್ತಿರುವವರು 79 ವರ್ಷದ ಹಿರಿಯ ಚೇತನ ಜಹೀರುದ್ದೀನ್ (ನಾಸೀರಜ್ಜ). ಮೈ ನಡುಗುವ ವಯಸ್ಸು, ಕಾಡುತ್ತಿರುವ ಅನಾರೋಗ್ಯದ ನಡುವೆಯೂ ಇವರು ಪ್ರತಿದಿನ ಪತ್ರಿಕೆಗಳನ್ನು ಮಾರಾಟ ಮಾಡುವ ಮೂಲಕ ಇಂದಿನ ಯುವ ಪೀಳಿಗೆಗೆ ಸ್ವಾಭಿಮಾನದ ಪಾಠ ಕಲಿಸುತ್ತಿದ್ದಾರೆ.
ಸೋಲೊಪ್ಪದ ಸರದಾರನ ಮೂರೂವರೆ ದಶಕದ ಪಯಣ
1947ರಲ್ಲಿ, ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ಜನಿಸಿದ ಜಹೀರುದ್ದೀನ್ ಅವರಿಗೆ ಶ್ರಮವೇ ಜೀವನ. 1970ರಲ್ಲಿ ಕಿರಾಣಿ ಅಂಗಡಿ ಆರಂಭಿಸಿ ಬದುಕು ಕಟ್ಟಿಕೊಂಡಿದ್ದ ಇವರಿಗೆ, 1990ರಲ್ಲಿ ಕೌಟುಂಬಿಕ ಕಾರಣಗಳಿಂದ ಹಿನ್ನಡೆಯಾಯಿತು. ಆದರೆ, ಅಂದು ಧೃತಿಗೆಡದ ಇವರು ಗಾಯಿತ್ರಿ ಸರ್ಕಲ್‌ನಲ್ಲಿ ಪುಟ್ಟದೊಂದು ಪೆಟ್ಟಿಗೆ ಅಂಗಡಿಯನ್ನು ತೆರೆದು ಚಿಲ್ಲರೆ ವ್ಯಾಪಾರದ ಜೊತೆಗೆ ಪತ್ರಿಕೆ ಮಾರಾಟವನ್ನೇ ಪ್ರಧಾನವಾಗಿಟ್ಟುಕೊಂಡು ಚಿಕ್ಕ ಚಿಲ್ಲರೆ ಅಂಗಡಿ ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಸುಮಾರು 35 ವರ್ಷಗಳಿಂದ ಇವರ ಈ ಕಾಯಕ ನಿರಂತರವಾಗಿ ಸಾಗಿದೆ.

ಅಂದು ಮುನ್ನೂರು.. ಇಂದು ನೂರೈವತ್ತು!
ಪತ್ರಿಕೆಗಳಿಗೆ ಭಾರಿ ಬೇಡಿಕೆಯಿದ್ದ ಆ ಕಾಲದಲ್ಲಿ, ಪ್ರತಿದಿನ 200 ರಿಂದ 300 ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದ ಇವರು, ಕೇವಲ 2-3 ರೂಪಾಯಿಯ ಪತ್ರಿಕೆಗಳ ಆದಾಯದಲ್ಲೇ ತಮ್ಮ ಕುಟುಂಬವನ್ನು ಗೌರವಯುತವಾಗಿ ಸಾಕಿ ಸಲಹಿದ್ದಾರೆ. ಒಬ್ಬ ಪುತ್ರ ಹಾಗೂ ಮೂವರು ಪುತ್ರಿಯರನ್ನು ಸಮಾಜದಲ್ಲಿ ಉತ್ತಮವಾಗಿ ಬೆಳೆಸಿದ ತೃಪ್ತಿ ಇವರ ಕಣ್ಣಲ್ಲಿದೆ. ಮಗ ಗಾರೆ ಕೆಲಸದ ಮೂಲಕ ಕುಟುಂಬಕ್ಕೆ ಆಸರೆಯಾಗಿದ್ದರೂ, ಜಹೀರುದ್ದೀನ್ ಅವರು ಮಾತ್ರ “ಯಾರ ಮೇಲೂ ಅವಲಂಬಿತನಾಗಬಾರದು” ಎಂಬ ಛಲದಿಂದ ಇಂದಿಗೂ ಕೆಲಸ ಮಾಡುತ್ತಿದ್ದಾರೆ.
ಅನಾರೋಗ್ಯವನ್ನೂ ಗೆದ್ದ ಅಚಲ ನಿಷ್ಠೆ
ಕಳೆದ ಮಾರ್ಚ್ ತಿಂಗಳಲ್ಲಿ ಚಾಂಡೀಸ್ (ಕಾಮಾಲೆ) ಕಾಯಿಲೆ ಇವರನ್ನು ತೀವ್ರವಾಗಿ ಬಾಧಿಸಿತ್ತು. ವೃದ್ಧಾಪ್ಯದ ಜೊತೆಗೆ ಅನಾರೋಗ್ಯವು ದೇಹವನ್ನು ಹೈರಾಣಾಗಿಸಿದರೂ, ಪತ್ರಿಕೆ ಮಾರಾಟ ಮಾಡುವ ಕೆಲಸಕ್ಕೆ ಮಾತ್ರ ಇವರು ರಜೆ ಹಾಕಲಿಲ್ಲ. ಇಂದಿಗೂ ಪ್ರತಿದಿನ ಸುಮಾರು 150 ಪತ್ರಿಕೆಗಳನ್ನು ಜನರಿಗೆ ತಲುಪಿಸುತ್ತಾ, “ಕೆಲಸವೇ ದೇವರು” ಎಂಬ ನಂಬಿಕೆಯನ್ನು ಜೀವಂತವಾಗಿರಿಸಿದ್ದಾರೆ.
ಯುವಜನತೆಗೆ ಸಂದೇಶ : ದೇಹಕ್ಕೆ ವಯಸ್ಸಾಗಿದೆಯೇ ಹೊರತು, ದುಡಿಯುವ ಉತ್ಸಾಹಕ್ಕಲ್ಲ. ಜೀವನ ನಿರ್ವಹಣೆಗಾಗಿ ಮತ್ತು ಆತ್ಮತೃಪ್ತಿಗಾಗಿ ನಾನು ಇಂದಿಗೂ ಪತ್ರಿಕೆ ಮಾರಾಟ ಮಾಡುತ್ತಿದ್ದೇನೆ,” ಎಂದು ಜಹೀರುದ್ದೀನ್ ಹೆಮ್ಮೆಯಿಂದ ಹೇಳುತ್ತಾರೆ.(ಸಂಪರ್ಕ ಸಂಖ್ಯೆ : 9901037519)
ಸಣ್ಣಪುಟ್ಟ ಸಮಸ್ಯೆಗಳಿಗೂ ಎದೆಗುಂದಿ ಕೂರುವ ಅಥವಾ ಕೆಲಸವಿಲ್ಲ ಎಂದು ಹತಾಶರಾಗುವ ಇಂದಿನ ತಲೆಮಾರಿನ ಯುವಕರಿಗೆ ಜಹೀರುದ್ದೀನ್ ಅವರ ಬದುಕು ಒಂದು ಜೀವಂತ ಆದರ್ಶ. ಇವರ ಶ್ರಮಜೀವಿ ಬದುಕನ್ನು ಮತ್ತು ಅಚಲವಾದ ಕಾಯಕ ಪ್ರಜ್ಞೆಯನ್ನು ಕಂಡು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












