ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 10 : ಆರೋಗ್ಯಕರ ಕೃತಿಯನ್ನು ಸಮಾಜಕ್ಕೆ ಕೊಡಬೇಕಾಗಿರುವುದರಿಂದ ಕವಿಗೆ ಜವಾಬ್ದಾರಿಯಿರಬೇಕೆಂದು ಖ್ಯಾತ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಹೇಳಿದರು.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಅವನಿ ಕಲೆ ಸಾಹಿತ್ಯ ಹಾಗೂ ಸಾಂಸ್ಕøತಿಕ ವೇದಿಕೆ, ಸುರಭಿ ಮೆಲೋಡಿಸ್ ಸಹಯೋಗದೊಂದಿಗೆ ಪತ್ರಕರ್ತರ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಡಾ.ಚಾಂದಿನಿ ಖಲೀದ್ರವರ ಒಂದು ಬೊಗಸೆ ಪ್ರೀತಿ ಕವನ ಸಂಕಲನ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒಂದು ಬೊಗಸೆ ಪ್ರೀತಿ ಹೆಸರೆ ವಿಶೇಷವಾಗಿದೆ. ಕಾವ್ಯ ಇದ್ದಕ್ಕಿದ್ದಂತೆ ಹುಟ್ಟಲ್ಲ. ನಿಲುವು, ಮಟ್ಟ, ಯೋಚನಾ ಲಹರಿ, ಪ್ರತಿಯೊಂದನ್ನು ಬೇರ್ಪಡಿಸುವ ಸ್ವಭಾವ ಡಾ.ಚಾಂದಿನಿ ಖಲೀದ್ರವರಲ್ಲಿದೆ. ಈ ಕವನ ಸಂಕಲನದಿಂದ ಹೆಗ್ಗಳಿಕೆ, ಸಾಮಥ್ರ್ಯ ಸಿದ್ದಿಸಿದೆ ಎಂದರು.
ಸಾಹಿತಿ, ಕವಿಗಳಾದವರು ಒಂದೆ ಭಾಷೆಗೆ ಅಂಟಿಕೊಳ್ಳುವ ಬದಲು ಬೇರೆ ಭಾಷೆಗಳ ಬರಹಗಳನ್ನು ಓದಬೇಕು. ಓದದೆ ಬೇರೆ ಆಲೋಚನೆಗಳು ಯಾರಲ್ಲೂ ಹುಟ್ಟಲು ಸಾಧ್ಯವಿಲ್ಲ. ಕಾವ್ಯದ ಬಗ್ಗೆ ಜವಾಬ್ದಾರಿಯಿದ್ದಾಗ ಮಾತ್ರ ಸರಿಯಾದ ಬರವಣಿಗೆ ಕೊಡಬೇಕೆಂಬ ಕಾಳಜಿ ಕವಿಯಲ್ಲಿರುತ್ತದೆ. ಡಾ.ಚಾಂದಿನಿ ಖಲೀದ್ ಲೀಲಾ ಜಾಲವಾಗಿ ಕನ್ನಡವನ್ನು ಬಳಸಿದ್ದಾರೆ. ಭಾಷೆಯನ್ನು ಸಿದ್ದಿಸಿಕೊಂಡಿರುವ ಇವರ ಕವನ ಸಂಕಲನದಲ್ಲಿ ಪ್ರಬುದ್ದತೆ ಕಾಣುತ್ತಿದೆ ಎಂದು ಪ್ರಶಂಶಿಸಿದರು.
ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್ವುಲ್ಲಾ ಚಾಂದಿನಿ ಖಲೀದ್ರವರ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡುತ್ತ ರಾಜ ಮಹಾರಾಜರ ಕಾಲದಿಂದಲೂ ಪ್ರೀತಿಗಾಗಿ ಯುದ್ದವಾಗಿದೆ. ಡಾ.ಚಾಂದಿನಿ ಖಲೀದ್ರವರು ಓದಿರುವುದು ಹಿಂದಿ. ಆದರೆ ಕನ್ನಡದ ಬಗ್ಗೆ ಅಪಾರ ಅಭಿಮಾನವಿಟ್ಟುಕೊಂಡಿರುವುದರಿಂದ ಇಂತಹ ಕೃತಿಗಳು ಹೊರ ಬರುತ್ತಿವೆ. ಮುಂದೆ ಇನ್ನು ಹೆಚ್ಚಿನ ಪುಸ್ತಕಗಳು ಅವರ ಬರವಣಿಗೆಯಿಂದ ಹೊರ ಬರಲಿ ಎಂದು ಹಾರೈಸಿದರು.
ಪ್ರೀತಿ ಎಂದರೆ ಕೇವಲ ಗಂಡು-ಹೆಣ್ಣಿನ ನಡುವಿನ ಪ್ರೀತಿಯಲ್ಲ. ಅಪ್ಪ ಅಮ್ಮನ ಪ್ರೀತಿ, ಸಹೋದರರ ಪ್ರೀತಿ, ಸ್ನೇಹಿತರ ನಡುವಿನ ಪ್ರೀತಿಗೂ ಪ್ರಾಮುಖ್ಯತೆಯಿದೆ. ಆ ಅರ್ಥದಲ್ಲಿ ಡಾ.ಚಾಂದಿನಿ ಖಲೀದ್ ಬೊಗಸೆಯಷ್ಟು ಪ್ರೀತಿ ಎಂಬ ಕವನ ಸಂಕಲನವನ್ನು ಹೊರತಂದಿರಬಹುದೆಂದು ನುಡಿದರು.
ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಆರ್ಥಿಕ ಚಿಂತಕರಾದ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ ಸಾಹಿತ್ಯ, ಕಲೆಯಲ್ಲಿ ತೊಡಗಿಕೊಂಡವರು ನಿಜವಾದ ಮಾನವೀಯ ನೆಲೆಯಲ್ಲಿ ಹೋದಾದ ಶಾಂತಿ ನೆಲೆಸುತ್ತದೆ. ಅಮೇರಿಕಾ, ಇರಾನ್ ಯುದ್ದದಿಂದ ಜಾಗತಿಕ ಮಟ್ಟದಲ್ಲಿ ಅಶಾಂತಿಯುಂಟಾಗಿದೆ. ಇದೊಂದು ಅಮಾನವೀಯ ನೆಲೆಗೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾಗರೀಕ ಬದುಕು ಪರಕೀಯಗೊಳಿಸುತ್ತಿದೆಯಲ್ಲದೆ ಅಭದ್ರ, ಆತಂಕವನ್ನುಂಟು ಮಾಡುತ್ತಿದೆ. ವೃತ್ತಿ, ಪ್ರವೃತ್ತಿಗಳಲ್ಲಿ ವಹಿಸುವ ಪಾತ್ರ ವಿವೇಕದಿಂದ ಕೂಡಿರಬೇಕು. ಕೊಳ್ಳುಬಾಕ ಸಂಸ್ಕøತಿಯಿಂದ ಸರಕು ಹೊಂದುವುದರ ಬಗ್ಗೆ ಜನರಲ್ಲಿ ದುರಾಸೆ ಮೂಡಿಸುತ್ತಿದೆ. ಆಸ್ತಿಯ ಕ್ರೂಢೀಕರಣದ ಅಮಲಿನಿಂದ ಇಂಗದ ದಾಹ ತಂದೊಡ್ಡುತ್ತಿದೆ. ದಾರ್ಶನಿಕತೆ, ಮಾನವೀಯ ಕಾಳಜಿಗೆ ದಾಹವನ್ನು ಇಂಗಿಸುವ ಶಕ್ತಿಯಿದೆ ಎಂದು ಹೇಳಿದರು.
ಸಾಹಿತಿಗೆ ತನ್ನದೆ ಆದ ಜವಾಬ್ದಾರಿ, ಕನಸುಗಳಿರುತ್ತವೆ. ಸಾಹಿತ್ಯವೆನ್ನುವುದು ಸರಕು ಸಂಸ್ಕøತಿಯ ಭಾಗವಾಗಬಾರದು. ಕೃತಿ ಮನಸ್ಸನ್ನು ಆಕರ್ಷಿಸುವಂತಿರಬೇಕು. ಕಾವ್ಯ ಕೃತಿ, ಕಾದಂಬರಿಯನ್ನು ಬರೆಯುವುದೆಂದರೆ ಜ್ಞಾನದ ಅಡುಗೆಯನ್ನು ಓದುಗರಿಗೆ ಬಡಿಸಿದಂತೆ. ಇದರ ಮೂಲಕ ಸಮಾಜಕ್ಕೆ ಬೆಳಕಿನ ಆಕರವಾಗಬೇಕು. ನೋವಿಗೆ ಮಿಡಿಯುವ ಪ್ರಾಣ ಮಿತ್ರನಾಗುವ ಪರಿಕಲ್ಪನೆಯಿರಬೇಕು. ಸಂವೇದನೆ ಕಳೆದುಕೊಂಡ ಬದುಕು ಅಮಾನವೀಯವಾಗಿರುತ್ತದೆ. ಕಾವ್ಯವನ್ನು ಆಸ್ವಾದಿಸುವಾಗ ಅಕ್ಕಮಹಾದೇವಿಯ ವಚನಗಳ ಸಾಲಿನಂತಿರಬೇಕು. ಸಂಪ್ರದಾಯಿಕ ವ್ಯವಸ್ಥೆ ಮೀರಿ ಬರೆಯುವ ಧೈರ್ಯ ಕವಿ, ಸಾಹಿತಿಗಿರಬೇಕೆಂದು ತಿಳಿಸಿದರು.
ಡಯಟ್ ಉಪನ್ಯಾಸಕ ಸಂತೆಬೆನ್ನೂರಿನ ಫೈಜ್ನಟರಾಜ್ ಮಾತನಾಡಿ ಸಾಹಿತ್ಯದ ಅಮಲಿನಲ್ಲಿ ನೂರಾರು ಪ್ರಕಾರಗಳು ಸೃಜನಾತ್ಮಕವಾಗಿ ವೃದ್ದಿಸುತ್ತವೆ. ಅದರಲ್ಲಿ ಒಲವ ಕವಿತೆಗಳು ಕನ್ನಡ ಸಾಹಿತ್ಯದ ಪ್ರಮುಖ ಭಾಗ. ಚಾಂದಿನಿ ಖಲೀದ್ರವರ ಒಂದು ಬೊಗಸೆ ಪ್ರೀತಿ ಕವಿತೆಗಳು ಒಲವ ಹಾದಿಯಲ್ಲಿ ಕಳೆದು ಹೋಗದೆ ಓದುಗನ ಎದೆಯ ಅಂಗಳದಲ್ಲಿ ಹೂವಾಗಿ ಅರಳಲಿ ಎಂದು ಆಶಿಸಿದರು.
ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷೆ ಶಾರದಾ ಜೈರಾಮ್, ನಗರಸಭೆ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜನ್, ಡಾ.ಚಾಂದಿನಿ ಖಲೀದ್ ಇವರುಗಳು ಮಾತನಾಡಿದರು. ಕವಿ, ಚಿತ್ರಕಾರ ಜಬಿವುಲ್ಲಾ ಎಂ.ಅಸದ್ರವರಿಗೆ ಬೆಳದಿಂಗಳು ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಸತೀಶ್ ಎಸ್.ವಿ.ಪ್ರಾರ್ಥಿಸಿದರು. ರೇಣುಕಾ ಪ್ರಕಾಶ್ ಸ್ವಾಗತಿಸಿದರು. ಡಾ.ಬಸವರಾಜ್ ಹರ್ತಿ ವಂದಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಹುರುಳಿ ಬಸವರಾಜ್ ನಿರೂಪಿಸಿದರು.
ಅಪರಾಧ ಶಾಸ್ತ್ರ ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್, ಸಂಗೇನಹಳ್ಳಿ ಅಶೋಕ್ಕುಮಾರ್, ಮೃತ್ಯುಂಜಯ, ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷರಾದ ರಘುರಾಮರೆಡ್ಡಿ, ಯಶೋಧ ರಾಜಶೇಖರಪ್ಪ, ಶೋಭ ಮಲ್ಲಿಕಾರ್ಜುನ್, ದೀಪಿಕಬಾಬು, ಸತೀಶ್ಕುಮಾರ್, ವಿನಾಯಕ, ಇಂದ್ರಕುಮಾರ್ ಹೆಚ್.ಬಿ. ಚಂದ್ರಶೇಖರ್ ಸೇರಿದಂತೆ ಡಾ.ಚಾಂದಿನಿ ಖಲೀದ್ರವರ ಅಪಾರ ಅಭಿಮಾನಿಗಳು ಹಾಗೂ ಕುಟುಂಬದವರು ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸತೀಶ್ಕುಮಾರ್ ಮತ್ತು ಲತಾ ಇವರುಗಳು ಹಳೆಯ ಚಿತ್ರಗೀತೆಗಳನ್ನು ಹಾಡಿ ನೆರೆದಿದ್ದವರ ಮನ ರಂಜಿಸಿದರು.
























