ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಮೇ 08 : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬಿಎಸ್ವೈ ಅಭಿಮಾನೋತ್ಸವ’ ಕಾರ್ಯಕ್ರಮಕ್ಕೆ ಕೋಟೆನಾಡು ಚಿತ್ರದುರ್ಗ ಅದ್ದೂರಿಯಾಗಿ ಸಜ್ಜಾಗಿದೆ ನಗರದ ಮಾದಾರ ಚನ್ನಯ್ಯ ಮಠದ ಸಮೀಪವಿರುವ ವಿಶಾಲವಾದ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಿದ್ದು, ಲಕ್ಷಾಂತರ ಅಭಿಮಾನಿಗಳು ಈ ಸಮಾವೇಶದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳುತ್ತಿದ್ದಾರೆ. ಅಭಿಮಾನೋತ್ಸವದ ಹಿನ್ನೆಲೆಯಲ್ಲಿ ಇಡೀ ಚಿತ್ರದುರ್ಗ ನಗರ ಕೇಸರಿಮಯವಾಗಿದ್ದು, ಎಲ್ಲೆಡೆ ಬಿಎಸ್ವೈ, ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಅವರ ಬ್ಯಾನರ್ಗಳು ರಾರಾಜಿಸುತ್ತಿವೆ.

ಮೇ 9ರ ಮಧ್ಯಾಹ್ನ 3 ಗಂಟೆಗೆ ಅಮಿತ್ ಶಾ ಚಿತ್ರದುರ್ಗಕ್ಕೆ ಆಗಮಿಸಲಿದ್ದು, ಅವರಿಗಾಗಿ ವೇದಿಕೆಯ ಹಿಂಭಾಗದಲ್ಲೇ ವಿಶೇಷ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಮಠಾಧೀಶರು, ಕೇಂದ್ರ ಹಾಗೂ ರಾಜ್ಯ ನಾಯಕರಿಗೆ ವೇದಿಕೆಯಲ್ಲಿ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಬರುವ ಲಕ್ಷಾಂತರ ಜನರಿಗಾಗಿ ಕುಡಿಯುವ ನೀರು, ಬಾಳೆಹಣ್ಣು ಮತ್ತು ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.
ನಗರದಲ್ಲಿ ನಾಳೆ ನಡೆಯಲಿರುವ ಬಿಎಸ್ವೈ ಅಭಿಮಾನೋತ್ಸವ ಹಿನ್ನೆಲೆ ಮಾಜಿ ಸಿ.ಎಂ ಬಿ.ಎಸ್. ಯಡಿಯೂರಪ್ಪ ಅವರು ಬಳಸಿದ ಅಂಬಾಸಿಡರ್ ಕಾರನ್ನು ಪ್ರದರ್ಶನಕ್ಕೆ ಇಡಲಾಗಿದೆ. ತಂದೆ ಬಳಸಿದ್ದ ಕಾರಿನ ಬಗ್ಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಯಡಿಯೂರಪ್ಪರನ್ನು ಗುರುತಿಸುವಷ್ಟೇ ಈ ಕಾರನ್ನೂ ಜನ ಗುರುತಿಸುತ್ತಾರೆ. ಅಂದು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಬಿಜೆಪಿಯನ್ನು ಹಳ್ಳಿ ಹಳ್ಳಿಗಳಿಗೂ ತಲುಪಿಸಲು ಯಡಿಯೂರಪ್ಪನವರಿಗೆ ಈ ಕಾರು ನೆರವಾಗಿದೆ. ಬಿ.ಎಸ್.ವೈ ಸೇರಿ ಪಕ್ಷದ ಅನೇಕ ಪ್ರಮುಖರು ಇದೇ ಕಾರಲ್ಲಿ ತೆರಳಿ ಪಕ್ಷದ ಪ್ರಚಾರ ಮಾಡಿದ್ದರು ಎಂದು ತಿಳಿಸಿದ್ದಾರೆ.
ಬಿಜೆಪಿ ಮುಖಂಡರು, ಯಡಿಯೂರಪ್ಪ ಅಭಿಮಾನಿಗಳು ಕಾರಿನ ವೀಕ್ಷಣೆ ಮಾಡಿದ್ದಲ್ಲದೆ ಅದರ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸದರಾದ ಗೋವಿಂದ ಕಾರಜೋಳ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್,ಕೆ.ಬಸವರಾಜನ್, ರಾಜ್ಯ ಕಾರ್ಯದರ್ಶಿ ತಮೇಶ್ ಗೌಡ್ರು ಸೇರಿದಂತೆ ಇತರರು ಉಪಸ್ಥಿತರಿದ್ದರು.



















