ಸುದ್ದಿಒನ್, ದಾವಣಗೆರೆ, ಮೇ. 04 : ರಾಜ್ಯದ ಗಮನಸೆಳೆದ ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಜಯ ಸಾಧಿಸಿದ್ದಾರೆ. ಆರಂಭಿಕ ಸುತ್ತುಗಳಲ್ಲಿ ಹಿನ್ನಡೆ ಅನುಭವಿಸಿದ್ದರೂ, ಅಂತಿಮ ಹಂತದಲ್ಲಿ ಪಲ್ಟಿ ಹೊಡೆದು ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.
ಮತ ಎಣಿಕೆಯ ಮೊದಲ ಆರು ಸುತ್ತುಗಳಲ್ಲಿ ಸಮರ್ಥ್ ಶಾಮನೂರು ಹಿನ್ನಡೆಯಲ್ಲಿದ್ದರು. ಏಳನೇ ಸುತ್ತಿನಲ್ಲಿಯೂ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಮುನ್ನಡೆಯಲ್ಲಿದ್ದರು. ಆದರೆ ಎಂಟು ಮತ್ತು ಒಂಬತ್ತನೇ ಸುತ್ತಿನಿಂದ ಚಿತ್ರಣ ಸಂಪೂರ್ಣ ಬದಲಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಕ್ರಮೇಣ ಮುನ್ನಡೆ ಪಡೆದು ಕೊನೆಗೆ ಜಯಭೇರಿ ಬಾರಿಸಿದರು.ಒಟ್ಟು 20ನೇ ಸುತ್ತಿನ ವೇಳೆಗೆ ಸಮರ್ಥ್ ಶಾಮನೂರು ಸುಮಾರು 4,900 ಮತಗಳ ಮುನ್ನಡೆ ಕಾಯ್ದುಕೊಂಡು ಸ್ಪಷ್ಟ ಗೆಲುವು ಸಾಧಿಸಿದರು. ಫಲಿತಾಂಶ ಹೊರಬಿದ್ದ ತಕ್ಷಣ ಸಚಿವ ಮಲ್ಲಿಕಾರ್ಜುನ್ ನಿವಾಸದಲ್ಲಿ ಸಂಭ್ರಮಾಚರಣೆ ಜೋರಾಗಿ ನಡೆಯಿತು.

ಈ ಉಪಚುನಾವಣೆಯಲ್ಲಿ ಸುಮಾರು 70 ಶೇಕಡಾ ಮತದಾನವಾಗಿದ್ದು, ಕಾಂಗ್ರೆಸ್‌ನಿಂದ ಸಮರ್ಥ್ ಶಾಮನೂರು ಹಾಗೂ ಬಿಜೆಪಿಯಿಂದ ಶ್ರೀನಿವಾಸ ದಾಸಕರಿಯಪ್ಪ ಸೇರಿದಂತೆ ಒಟ್ಟು 24 ಅಭ್ಯರ್ಥಿಗಳು ಕಣದಲ್ಲಿದ್ದರು.ಇದನ್ನು ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಆಡಳಿತದ ಮೇಲಿನ ಜನಾಭಿಪ್ರಾಯವೆಂದು ವಿಶ್ಲೇಷಿಸಲಾಗುತ್ತಿದ್ದು, ಗ್ಯಾರಂಟಿ ಯೋಜನೆಗಳು ಹಾಗೂ ಸರ್ಕಾರದ ಕಾರ್ಯವೈಖರಿಗೆ ಜನರು ಬೆಂಬಲ ನೀಡಿರುವುದು ಗೋಚರಿಸಿದೆ. ಅಲ್ಪಸಂಖ್ಯಾತ ಸಮುದಾಯದ ಮತಗಳೂ ಕಾಂಗ್ರೆಸ್ ಪರ ತಿರುಗಿರುವುದಾಗಿ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.


















