Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಪರಿಚಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ಐಮಂಗಲ ಗ್ರಾಮವು ಪಂಚಾಯತಿ ಹಾಗೂ ಹೋಬಳಿ ಮುಖ್ಯ ಕೇಂದ್ರವಾಗಿದ್ದು, ತಾಲೂಕು ಕೇಂದ್ರ ಹಿರಿಯೂರಿನಿಂದ 19 ಕಿಲೋಮೀಟರ್ ದೂರ ವಾಯುವ್ಯಕ್ಕೆ ಚಿತ್ರದುರ್ಗ- ಹಿರಿಯೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿದೆ.

ಹೆಸರಿನ ಮೂಲ :
ಗ್ರಾಮದ ಹೆಸರು ವ್ಯಕ್ತಿ ವಾಚಕವಾಗಿದ್ದು ಹಿಂದೆ ಇದೊಂದು ಅಗ್ರಹಾರವಾಗಿತ್ತು. ಅಯ್ಯಪ್ಪನ ಹೆಸರಿನ ಮೇಲೆ ನಿರ್ಮಿಸಿದ ಮಂಗಲ (ಅಗ್ರಹಾರ) ಇದಾಗಿದ್ದ ಕಾರಣಕ್ಕೆ ಇದು ಅಯ್ಯಪ್ಪನ ಮಂಗಲ ಮುಂದುವರೆದು ಐಮಂಗಲವಾಗಿದೆ. ಹತ್ತನೇ ಶತಮಾನದಿಂದಲೂ ಈ ಗ್ರಾಮವು ಇರುವ ಬಗ್ಗೆ ಇಲ್ಲಿನ ಶಾಸನಗಳು ತಿಳಿಸುತ್ತವೆ.

ಇದೇ ಹೆಸರಿನ ಮತ್ತೊಂದು ಗ್ರಾಮವು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನಲ್ಲಿದೆ. ಈ ಹೆಸರಿನ ಎರಡು ಗ್ರಾಮಗಳು ಬಿಟ್ಟರೆ ಕರ್ನಾಟಕದ ಬೇರೆ ಎಲ್ಲೂ ಈ ಹೆಸರಿನ ಗ್ರಾಮಗಳಿರುವುದಿಲ್ಲ. ಗ್ರಾಮಕ್ಕೆ ಹಳೆ ಗ್ರಾಮ ನಿವೇಶನ ಇರುವ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ.

ಭೌಗೋಳಿಕ ಲಕ್ಷಣ :
ಭೌಗೋಳಿಕವಾಗಿ ಗ್ರಾಮದ
ಸುತ್ತಮುತ್ತಲಿನ ಪ್ರದೇಶವು ಬಯಲು ಸೀಮೆಯ ವಿಶಾಲ ಮೈದಾನವಾಗಿದ್ದು, ಸಮತಟ್ಟು ಭೂ ಪ್ರದೇಶವೇ ಸುತ್ತಲೂ ಹರಡಿದೆ. ಅಲ್ಲಲ್ಲಿ ಏರಿಳಿತ ಇರುವ ಭೂಪ್ರದೇಶಗಳು ಕಂಡುಬರುತ್ತದೆ. ಗ್ರಾಮದ ಪಶ್ಚಿಮಕ್ಕೆ ಜೋಗಿಮಟ್ಟಿ ಗಿರಿ ಸಾಲುಗಳು ಕಂಡುಬರುತ್ತವೆ. ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ಇರುವ ಗುಡ್ಡ ಸಾಲುಗಳಿಂದ ಕೋವೇರಹಟ್ಟಿ ಕಡೆಗಳಿಂದ ಹರಿದು ಬರುವ ನೀರು ಗ್ರಾಮದ ಪಶ್ಚಿಮಕ್ಕೆ ಕಲ್ಲುಕುಂಟೇಶ್ವರಿ ದೇವಾಲಯದ ಹತ್ತಿರದ ಹಿರೇಕೆರೆಗೆ ತಲುಪುತ್ತದೆ.
ಅದು ತುಂಬಿದ ನಂತರ ಮುಂದುವರೆದು ಗ್ರಾಮದ ಪೂರ್ವಭಾಗದಲ್ಲಿರುವ ಚಿಕ್ಕ ಕೆರೆಗೆ ತಲುಪಿ ತಾಲೂಕಿನ ಎಂ.ಡಿ.ಕೋಟೆ ಗ್ರಾಮದ ಕೆರೆಗೆ ನೀರು ಹರಿಯುತ್ತದೆ.

ಐತಿಹಾಸಿಕ ಶಾಸನಸ್ಥ ಗ್ರಾಮ :
ಹಿಂದೆ ಈ ಗ್ರಾಮವು ನೊಳಂಬರ ಆಳ್ವಿಕೆಗೆ ಒಳಪಟ್ಟಿದ್ದು ನಂತರ ಪಾಳೆಯಗಾರರ ಕಾಲದಲ್ಲಿ ಉನ್ನತ ಸ್ಥಿತಿಯಲ್ಲಿದ್ದಿತು.
ಗ್ರಾಮದಲ್ಲಿರುವ ಶಾಸನಗಳು ಹಾಗೂ ವೀರಗಲ್ಲುಗಳಿಂದ ಅನೇಕ ಐತಿಹಾಸಿಕ ಅಂಶಗಳು ತಿಳಿದು ಬರುತ್ತದೆ.

ಕೋಟೆ ಪ್ರದೇಶ : ಹತ್ತನೇ ಶತಮಾನದಲ್ಲಿಯೇ ಇಲ್ಲಿ ಒಂದು ಸಣ್ಣ ಕೋಟೆಯನ್ನು ನೊಳಂಬರ ಪೇರ್ಗಡೆ ಗುಂಡಯ್ಯನು ನಿರ್ಮಿಸಿದ ಬಗ್ಗೆ ಇಲ್ಲಿನ ಶಾಸನ ತಿಳಿಸುತ್ತದೆ. ಗ್ರಾಮದ ಪೂರ್ವಕ್ಕೆ ಈಗಲೂ ಇರುವ ಹಳೆಕೋಟೆ ಜಾಗವೇ ಹಿಂದೆ ಕೋಟೆಯ ಸ್ಥಳವಾಗಿತ್ತು. ಐತಿಹಾಸಿಕ ಶಾಸನಸ್ಥ ಕೋಟೆ ಪ್ರದೇಶವಾದ ಈ ಸ್ಥಳವು ಹಿಂದೆ ನೊಳಂಬರಿಗೆ ಸೇರಿದ್ದ ಇತಿಹಾಸ ಇಲ್ಲಿನ ಕಂಬದ ದೇವರ ಗುಡಿ ಶಾಸನದಿಂದ ತಿಳಿಸುತ್ತದೆ. 975ರಲ್ಲಿ ನೊಳಂಬರ ಪದುವಗೆರೆ ಸಾಮಂತನ ಮಾರಯ್ಯನ ಮಗ ಎಚಯ್ಯನು ಹಿಂದಿನ ಸಂಪ್ರದಾಯದಂತೆ ಪೆರ್ಗಡೆ ಗುಂಡಯ್ಯನು ಅನುಭವಿಸುತ್ತಿದ್ದ ಭೂಮಿಯನ್ನು ಕಿತ್ತುಕೊಂಡದ್ದ ರಿಂದ ಇರಿವನೊಳಂಬನ ಮಗ ನನ್ನಿ ನೊಳಂಬನು ತನ್ನ ಮಂತ್ರಿಗೆ ಆಜ್ಞೆ ಮಾಡಿಸಿ ಪೆರ್ಗಡೆ ಗುಂಡಯ್ಯನಿಗೆ ಭೂಮಿಯನ್ನು ವಾಪಸ್ ಕೊಡಿಸಿದನೆಂಬ ಬಗ್ಗೆ ಇಲ್ಲಿನ ಶಾಸನ ತಿಳಿಸುತ್ತದೆ.

 

ಹರತಿ ವಂಶದ ಕೋಟೆಗೆರೆ ಅಬ್ಬೆ ನಾಯಕನ ಮಕ್ಕಳಾದ ಕಾಮಯ್ಯ ನಾಯಕನು ಹಾಗೂ ಆತನ ಸೋದರ ಬೊಮ್ಮೆಯ ನಾಯಕನು 1382 ರಿಂದ ಈ ಪ್ರದೇಶವನ್ನು ಆಳಿದವರೆಂದು ತಮ್ಮನ್ನು ಅವರು ಹರತಿ ಐಮಂಗಲ ನಾಯಕರೆಂದು ಕರೆದುಕೊಂಡ ಬಗ್ಗೆ ಶಾಸನಗಳು ತಿಳಿಸುತ್ತವೆ. ಮುಂದೆ ಬಿಚ್ಚುಗತ್ತಿ ಬರಮಣ್ಣ ನಾಯಕನ ಮಗನಾದ ಹುಚ್ಚು ನಿಂಗಣ್ಣನು ಈ ಗ್ರಾಮದ ಅಧಿಕಾರ ವಹಿಸಿಕೊಂಡ ಬಗ್ಗೆ ಮಾಹಿತಿ ತಿಳಿಸಲಾಗುತ್ತದೆ. ಈಗ ಈ ಜಾಗದಲ್ಲಿ ಪೊಲೀಸ್ ತರಬೇತಿ ಕೇಂದ್ರ 2005ರಿಂದ ಅಸ್ತಿತ್ವದಲ್ಲಿದೆ. ಇದು ಸುಮಾರು 50 ಎಕರೆ ಪ್ರದೇಶದಷ್ಟು ವ್ಯಾಪಿಸಿದೆ. ಸ್ಥಳೀಯವಾಗಿ ಸಿಗುವ ಬಳಪದ ಕಲ್ಲು ಅಥವಾ ಪದರ -ಪುಡಿಕಲ್ಲುಗಳನ್ನು ಬಳಸಿ ಕೋಟೆಯ ಗೋಡೆಗಳನ್ನು ನಿರ್ಮಿಸಲಾಗಿದೆ. ಗ್ರಾಮದ ಸುತ್ತಲೂ ಕೋಟೆಯ ಗೋಡೆಯು ಆವೃತವಾಗಿದ್ದ ಬಗ್ಗೆ ಗ್ರಾಮಸ್ಥರು ತಿಳಿಸುತ್ತಾರೆ. 1902 ರಾ ಚಿತ್ರದುರ್ಗ ಜಿಲ್ಲಾ ಶಾಸನ ಸಂಪುಟ ಹಿರಿಯೂರು ತಾಲೂಕು ಶಾಸನ ಸಂಖ್ಯೆ ಒಂದರಲ್ಲಿ ಈ ಗ್ರಾಮದ ಶಾಸನಗಳ ವಿವರಣೆಯನ್ನು ಬಿ. ಎಲ್.ರೈಸ್ ದಾಖಲಿಸಿದ್ದಾರೆ.

 

1801 ರಲ್ಲಿ ಫ್ರಾನ್ಸಿಸ್ ಬುಕನಾನ್ ಎಂಬ ಬ್ರಿಟಿಷ್ ಅಧಿಕಾರಿ ಈ ಭಾಗದಲ್ಲಿ ಸಂಚರಿಸಿ ಇಲ್ಲಿನ ಸ್ಥಳೀಯ ವಾತಾವರಣ ಹಾಗೂ ಪರಿಸರವನ್ನು ದಾಖಲಿಸಿದ್ದಾನೆ. ಚಿಕ್ಕ ಕೆರೆಯ ಭಾಗದಲ್ಲಿ ನೀರು ಅತ್ಯಂತ ಕಲುಷಿತಗೊಂಡಿದ್ದು ಅದರ ನೀರನ್ನು ಜನರು ಬಳಸುತ್ತಿದ್ದು ಹಾಗೂ ಅದರಲ್ಲಿಯೇ ಮೀನುಗಳನ್ನು ಹಿಡಿದು ಕೊಳೆತ ಸ್ಥಿತಿಯಲ್ಲೂ ಕೂಡ ಅವುಗಳನ್ನು ಬಳಕೆಗೆ ತೆಗೆದುಕೊಂಡು ಹೋಗುತ್ತಿರುವುದನ್ನು ದಾಖಲಿಸಿದ್ದಾನೆ. ಇಲ್ಲಿ ಒಂದು ಕೋಟೆ ಇರುವ ಬಗ್ಗೆ ಜೊತೆಗೆ ಇಲ್ಲಿನ ಬಹುತೇಕ ಎಲ್ಲಾ ಕೆರೆಗಳು ಖಾಲಿಯಾಗಿರುವ ಬಗ್ಗೆ ತಿಳಿಸುತ್ತಾನೆ. ಇಲ್ಲಿನ ಕೃಷಿಯ ಬಗ್ಗೆ ಮಾಹಿತಿ ನೀಡುತ್ತಾ, ಎರೆಭೂಮಿಯಲ್ಲಿ ಸತತವಾಗಿ ಬೆಳೆ ತೆಗೆದರೂ ಪ್ರತಿ ಬೆಳೆಗೂ ಗೊಬ್ಬರ ಹಾಕುವ ಅಗತ್ಯವಿರುವುದಿಲ್ಲ. ಬೇಸಿಗೆಯ ದಿನಗಳಲ್ಲಿ ಎರೆ ಹೊಲ ಉಳುಮೆ ಮಾಡಲು ಎಂಟರಿಂದ ಹದಿನಾರು ಎತ್ತುಗಳನ್ನು ಬಳಸಿ ದೊಡ್ಡ ನೇಗಿಲುಗಳನ್ನು ಹೊಡೆಯಲಾಗುತ್ತದೆ. ಬೇಸಾಯಕ್ಕೆ ಬಳಸುತ್ತಿದ್ದ ಪ್ರತಿ ಎತ್ತಿನ ಬೆಲೆ 16 ರಿಂದ 20 ರೂಪಾಯಿ ಅಂದಾಜು ಮಾಡುತ್ತಾನೆ. ಆತನು ಇಲ್ಲಿಗೆ ಜಾತ್ರೆಯ ಸಮಯದಲ್ಲಿ ಆಗಮಿಸಿ ಇಲ್ಲಿನ ಸಿಡಿ ಆಚರಣೆ ಬಗ್ಗೆ ಕೂಡ ಮಾಹಿತಿ ತಿಳಿಸುತ್ತಾನೆ.

ಐಮಂಗಲದ ಪ್ರಸಿದ್ಧ ವೀಳ್ಯದೆಲೆ:
ತನ್ನ ವಿಶೇಷ ರುಚಿ, ಸ್ವಾದ ಹಾಗೂ ಸುವಾಸನೆಯಿಂದ ಐಮಂಗಲದ ವೀಳ್ಯದೆಲೆಯು ಅತ್ಯಂತ ಪ್ರಸಿದ್ಧಿ ಪಡೆದ ಒಂದು ಬೆಳೆಯಾಗಿದೆ. ಸ್ಥಳೀಯ ರೈತರಿಗೆ ಪ್ರಮುಖ ಆದಾಯ ಮೂಲವಾದ ಈ ವೀಳ್ಯದೆಲೆಯ ಬೆಳೆಯು ಇಂದು ನೀರಿನ ಅಲಭ್ಯತೆಯಿಂದ ಅಷ್ಟಾಗಿ ಕಂಡು ಬರುವುದಿಲ್ಲ. ಗ್ರಾಮದ ಹಿರಿಯರ ಅನಿಸಿಕೆಯಂತೆ ಗ್ರಾಮದಲ್ಲಿ ವೀಳ್ಯದೆಲೆಯು ಈ ಪರಿಸರಕ್ಕೆ ಪೂರಕವಾಗಿದ್ದು ಸುಮಾರು 300 ವರ್ಷಗಳಿಂದಲೂ ಇಲ್ಲಿ ಬೆಳೆಯಲಾಗುತ್ತಿದ್ದು ದೇಶದ ನಾನಾ ಮೂಲೆಗಳಿಗೂ ಈ ಬೆಳೆಯು ತಲುಪುತ್ತಿತ್ತು. ರಾಂಪುರ ಬದನೆಕಾಯಿಯಂತೆ ಐಮಂಗಲದ ವೀಳ್ಯದೆಲೆ ಪ್ರಸಿದ್ದವಾಗಿದ್ದು ಕೊಲ್ಕತ್ತಾದ ಬಜಾರುಗಳಲ್ಲಿ ಐಮಂಗಲದ ವೀಳ್ಯದೆಲೆ ಎಂಬ ಬೋರ್ಡನ್ನು ಹಾಕಲಾಗುತ್ತಿದ್ದ ಬಗ್ಗೆ ಇಲ್ಲಿನ ರೈತರು ನೆನಪಿಸಿಕೊಳ್ಳುತ್ತಾರೆ.

ಐಮಂಗಲ ಗ್ರಾಮದ ಶಾಸನಗಳ ವಿವರಣೆ:

ಶಾಸನ 1
ಹಳೆಕೋಟೆಯಲ್ಲಿರುವ ಕಂಬದ ದೇವರ ಗುಡಿ ಮುಂದೆ ಇರುವ ಕಲ್ಲು.
ಇದು ಕ್ರಿ. ಶ.975 ರ ಕಾಲಕ್ಕೆ ಸೇರಿದ್ದು,ಇದರಲ್ಲಿ ನೊಳಂಬ ದಿಲಿಪಯ್ಯನ ಮಗ ನನ್ನಿ ನೊಳಂಬ ಅಯ್ಯಪ್ಪನ ಮಂಗಳ(ಐಮಂಗಲ )
ಪದುವಗೆರೆ (ವದ್ದಿಕೆರೆ )ಐನೂರನ್ನು ಅಲ್ಲಿನ ಭೋಗಪತಿ ಗುಂಡಯ್ಯನ್ನು ನೋಡಿಕೊಳ್ಳುತ್ತಿದ್ದ ಬಗ್ಗೆ ಹೇಳಿದೆ.

ಶಾಸನ 2:
ಹುಣಸೆ ಮರದ ಬಳಿಯಲ್ಲಿ ನೆಟ್ಟ ಕಲ್ಲು.
ಗ್ರಾಮದ ಕಲ್ಲುಕುಂಟೇಶ್ವರಿ ದೇವಾಲಯದ ಕಾಂಪೌಂಡ್ ಭಾಗದಲ್ಲಿ ಇರುವ ಈ ಶಾಸನ ಕಲ್ಲು 1734 ರ ಕಾಲಕ್ಕೆ ಸೇರಿದ್ದು,ಇದರಲ್ಲಿ
ಅರಳಗೋನಾ ದೇವ ಅಥವಾ ಕಾಶಿ ಶಿವಲಿಂಗದೇವರಿಗೆ ಮಠವನ್ನು ನಿರ್ಮಾಣ ಮಾಡಲಾಗಿರುವ ಬಗ್ಗೆ ತಿಳಿಸಿ ಈ ಮಠವು ವಿರಕ್ತರಿಗೆ ಹೊರತುಪಡಿಸಿ ಇತರರಿಗೆ ಪ್ರವೇಶ ಇರುವುದಿಲ್ಲ. ಇದಕ್ಕಾಗಿ ಇಲ್ಲಿನ ಸ್ಥಳೀಯ ಶಾನುಭೋಗರು,ನಾಯಕರು, ಪಾರುಪತ್ತೆಗಾರರು,ಜಂಗಮರು ಸೆಟ್ಟಿಗಳು..ಸಮ್ಮುಖದಲ್ಲಿ ದಾನ ದತ್ತಿಯನ್ನು ನೀಡಲಾಗಿರುವ ಬಗ್ಗೆ ತಿಳಿಸುತ್ತದೆ.

ಶಾಸನ 3:
ಹಳೆಕೋಟೆ ವೀರಭದ್ರೇಶ್ವರ ದೇವಾಲಯದ ಮುಂದೆ
ವೀರಭದ್ರೇಶ್ವರ ದೇವರಿಗೆ ಗುಯಿಲಾಳು ಗ್ರಾಮದ ಆದಾಯವನ್ನು ಧರ್ಮಕ್ಕೆ ಸಲ್ಲುವ ಬಗ್ಗೆ ಕಂಮಣ ತಿಮ್ಮಣ್ಣ ನಾಯಕರು ದಾನ ಕೊಟ್ಟ ಬಗ್ಗೆ ತಿಳಿಸುತ್ತದೆ.

ಶಾಸನ 4:
ಗ್ರಾಮದ ಹೊರ ವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯ ಚಿತ್ರದುರ್ಗದಿಂದ ಬರುವ ಕಡೆಗೆ ವೆಂಕಟೇಶ್ ಎಂಬುವವರ ಹೊಲದಲ್ಲಿ ಬಿದ್ದಿರುವ ಶಾಸನವನ್ನು ಚಿತ್ರದುರ್ಗದ ಡಾ.ಮಹೇಶ್ ಕುಂಚಿಗನಾಳು ಪತ್ತೆ ಹಚ್ಚಿದ್ದು ಇದರ ವಿವರಣೆ ಈ ರೀತಿ ಇರುತ್ತದೆ.

ವಿವರಣೆ :
ಈ ಶಾಸನವು ಹತ್ತನೇ ಶತಮಾನದ ನೊಳಂಬರ ಕಾಲಕ್ಕೆ ಸೇರಿದ್ದು, ಚಿಕ್ಕ ಕೆರೆಯ ಗದ್ದೆಕಡ್ಲು ಎಂಬಲ್ಲಿ ಇದ್ದು ಇದರ ಸಂರಕ್ಷಣೆ ಅಗತ್ಯತೆ ಇರುತ್ತದೆ. ಇದು ಕರ್ನಾಟಕದಲ್ಲಿ ಸಿಕ್ಕಿರುವ ಅಪರೂಪದ ಶೈವ ಯತಿಯ ಶಾಸನವಾಗಿದ್ದು ಶಾಸನವು 54 ಜನ ಪ್ರಮುಖರು ಸೇರಿ ಧರ್ಮರಾಶಿ ಭಟ್ಟಾರಕನಿಗೆ ದಾನವನ್ನು ನೀಡಿದ ಬಗ್ಗೆ ತಿಳಿಸುತ್ತದೆ. ಭಟಾರುರಂ ಎಂಬ ಲಾಕೂಲೀಶ ಪಂಥದ ಕಾಳಮುಖ ಶೈವ ಯತಿಯನ್ನು ಇದು ಉಲ್ಲೇಖಿಸಿ 54 ಜನರ ಧಾರ್ಮಿಕ ಮುಖಂಡರ ಅಖಾಡ ಇಲ್ಲಿ ಅಸ್ತಿತ್ವವಿದ್ದ ಬಗ್ಗೆ ತಿಳಿಸುತ್ತದೆ.
ಇದೇ ಜಾಗದಲ್ಲಿ 10ನೇ ಶತಮಾನಕ್ಕೆ ಸೇರಿದ ಭಗ್ನಗೊಂಡ ನಂದಿ ಶಿಲ್ಪಗಳನ್ನು ಕೂಡ ಕಾಣಬಹುದು. ಬಳಿಯಲ್ಲಿಯೇ ಭಕ್ತ ಶಿಲ್ಪಗಳು ಕಂಡುಬರುತ್ತವೆ.

ವೀರಗಲ್ಲುಗಳು :
ಗ್ರಾಮದ ಹೊರಕೆರೆ ದೇವರಪುರ ರಸ್ತೆಯಲ್ಲಿರುವ ಕಲ್ಲುಕುಂಟೇಶ್ವರಿ ದೇವಾಲಯದ ಆವರಣದಲ್ಲಿ ಒಂದು ವೀರಗಲ್ಲು ಎರಡು ಹಂತಗಳನ್ನು ಹೊಂದಿದ್ದು ಕೆಳಗಿನ ಹಂತದಲ್ಲಿ ಹೋರಾಡುತ್ತಿರುವ ವೀರನನ್ನು ಚಿತ್ರಿಸಲಾಗಿದೆ. ಮೇಲಿನ ಹಂತದಲ್ಲಿ ಕುಳಿತ ವೀರನಿದ್ದಾನೆ.
ಇದರಲ್ಲಿನ ವೀರಗಲ್ಲು ಅತ್ಯಂತ ಅಪರೂಪ, ಹಳೆಯದಾದ, ದೊಡ್ಡದಾದ ವೀರಗಲ್ಲಾಗಿದ್ದು, ಇದು ಹತ್ತನೇ ಶತಮಾನಕ್ಕೆ ಸೇರಿದೆ. ಎಂದು ಸಂಶೋಧಕರಾದ ಮಹೇಶ್ ಕುಂಚಿಗನಾಳ ಹೇಳುತ್ತಾರೆ.
ಗ್ರಾಮದ ಹಿರೇಕೆರೆಯ ಭಾಗ ಹಾಗೂ ಅಕ್ಕಪಕ್ಕದ ಹೊಲಗಳಲ್ಲಿ ಇಂದಿಗೂ ಅಲ್ಲಲ್ಲಿ ಸಂರಕ್ಷಣೆ ಮಾಡದ ವೀರಗಲ್ಲುಗಳು ಇರುವುದನ್ನು ಕಾಣಬಹುದು ಇದರಿಂದ ಹಿಂದೆ ಈ ಗ್ರಾಮವು, ವೀರ ಯೋಧರ ಭೂಮಿಯಾಗಿತ್ತು ಎಂದು ಗಮನಿಸಬಹುದು.ಇದರ ಜೊತೆಗೆ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ಎದುರಿನಲ್ಲಿ ಇರುವ ಬನ್ನಿ ಮರದ ಹತ್ತಿರದಲ್ಲಿ ಬಿಲ್ಲು -ಬಾಣ ಹಿಡಿದಿರುವ ಯೋಧನ ಚಿತ್ರವಿರುವ 10ನೇ ಶತಮಾನಕ್ಕೆ ಸೇರಿದ ವೀರಗಲ್ಲು ಕಾಣಬಹುದು.

ಗ್ರಾಮದಲ್ಲಿರುವ ದೇವಾಲಯಗಳು :

1.*ಕಲ್ಲುಕುಂಟೇಶ್ವರಿ ದೇವಸ್ಥಾನ:*
ಈ ದೇವಿಯು ಮೂಲತಃ ಚಿತ್ರದುರ್ಗ ತಾಲ್ಲೂಕು ಕಲ್ಕುಂಟೆ ಗ್ರಾಮದವಳಾಗಿದ್ದು ಹಿಂದೆ ದಶರಥ ರಾಮೇಶ್ವರ ವಜ್ರಕ್ಕೆ ಹೋಗುವ ದಾರಿಯಲ್ಲಿ ಈ ಗ್ರಾಮದ ಭಕ್ತರು ಬೇಡಿಕೊಂಡ ಕಾರಣಕ್ಕೆ ಇಲ್ಲಿಯೇ ನೆಲೆ ನಿಂತಳು ಎಂದು ಹೇಳಲಾಗುತ್ತದೆ. ಗ್ರಾಮದೇವತೆಯಾದ ಈ ದೇವಿಯ ಮೂರು ದೇವಾಲಯಗಳು ಗ್ರಾಮದಲ್ಲಿದ್ದು, ಗ್ರಾಮದ ಹೊರಕೆರೆದೇವರಪುರಕ್ಕೆ ಹೋಗುವ ದಾರಿಯಲ್ಲಿ ಇರುವ ಕಲ್ಲುಕುಂಟೆಶ್ವರಿಯ ದೇವಾಲಯದಲ್ಲಿ ಪ್ರತಿ ಮೂರು /ಐದು ವರ್ಷಕ್ಕೆ ಒಮ್ಮೆ ಜಾತ್ರೆ ಜರುಗುತ್ತದೆ.
ಗರ್ಭಗೃಹ ಹಾಗೂ ಸಭಾಮಂಟಪದಲ್ಲಿ ಇರುವ ಈ ದೇವಾಲಯದ ಗರ್ಭಗೃಹದಲ್ಲಿ ನಾಲ್ಕು ಅಡಿ ಎತ್ತರದ ದೇವಿಯ ಮೂರ್ತಿ ಇದೆ. ದೇವಿಯು ಖಡ್ಗ, ತ್ರಿಶೂಲ,ಡಮರುಗ ಹಾಗೂ ಫಲಗಳನ್ನು ಹಿಡಿದಿರುವಳು. ಈ ದೇವರ ದೇವಾಲಯದ ಎದುರು ಭಾಗದಲ್ಲಿ ಮಾತಂಗಿ ದೇವಾಲಯವಿದೆ.
ಗ್ರಾಮದ ಮಧ್ಯಭಾಗದಲ್ಲಿ ಮತ್ತೊಂದು ಕಲ್ಲುಕುಂಟೇಶ್ವರಿ ದೇವಾಲಯವಿದ್ದು ಇಲ್ಲಿ ಉತ್ಸವಮೂರ್ತಿ ಹಾಗೂ ಶಿಲ್ಪವನ್ನು ಪೂಜಿಸಲಾಗುತ್ತದೆ.
ಮತ್ತೊಂದು ಕಲ್ಲುಕುಂಟೇಶ್ವರಿ ದೇವಾಲಯವು ಗ್ರಾಮದ ನಡು ಭಾಗದಲ್ಲಿದೆ.
ಇದರಲ್ಲಿ ಎರಡು ಗುಂಡು ಕಲ್ಲುಗಳನ್ನು ಇಟ್ಟು ಪೂಜಿಸಲಾಗುತ್ತದೆ.
ಆಷಾಢ ಮಾಸದಲ್ಲಿ ಈ ದೇವರ ಜಾತ್ರೆಯನ್ನು ನಡೆಸಲಾಗುತ್ತದೆ.

 

2.ಈಶ್ವರ (ಬಸವೇಶ್ವರ )ದೇವಾಲಯ:
ಗ್ರಾಮದ ಪಶ್ಚಿಮಕ್ಕೆ ತೋಟದಲ್ಲಿರುವ ಈ ದೇವಾಲಯ ಪಾಳೆಗಾರರ ಶೈಲಿಯಲ್ಲಿ 17-18 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ.
ಗರ್ಭಗೃಹ ಹಾಗೂ ಸಭಾಮಂಟಪಗಳಿರುವ ಈ ದೇವಾಲಯದ ಗರ್ಭಗೃಹದಲ್ಲಿ ನಂದಿಯ ಶಿಲ್ಪವಿದೆ. ಪೀಠದ ಮೇಲ್ಭಾಗದ ಲಿಂಗವನ್ನು ಅದರ ಪಕ್ಕದಲ್ಲಿಯೇ ಇಡಲಾಗಿದೆ.

3.ಆಂಜನೇಯ ಸ್ವಾಮಿ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯವನ್ನು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.

4.ನಡುಗೆರೆ ಲಿಂಗೇಶ್ವರ ದೇವಾಲಯ:
ಗ್ರಾಮದ ಚಿಕ್ಕಕೆರೆಯ ಮಧ್ಯಭಾಗದಲ್ಲಿ ಇರುವ ಈ ಈಶ್ವರ ದೇವಾಲಯವು ವಿಜಯನಗರೋತ್ತರ ಕಾಲದ ಲಿಂಗವನ್ನು ಹೊಂದಿದ್ದು, ಹಿಂದೆ ಇದ್ದ ದೇವಾಲಯವು ಜೀರ್ಣಾವಸ್ಥೆಗೆ ತಲುಪಿದ ಕಾರಣ ಇದೀಗ ನೂತನವಾಗಿ ಸ್ಥಳೀಯ ಶೈಲಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಶ್ರಾವಣ ಮಾಸದಲ್ಲಿ ಈ ದೇವರಿಗೆ ವಿಶೇಷ ಪೂಜೆ ಪ್ರಾರ್ಥನೆ ನಡೆಸಲಾಗುತ್ತದೆ. ಈ ದೇವರಿಗೆ ವಿಶೇಷ ಪೂಜೆಯ ನಂತರ ಆ ದಿನ ಭಕ್ತರು ಮನೆಗೆ ತೆರಳುವ ಮೊದಲು ಗ್ರಾಮಕ್ಕೆ ಮಳೆ ಬರುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

5. ಮಾರಮ್ಮ ದೇವಿ ದೇವಸ್ಥಾನ:
ಗ್ರಾಮದ ಮಧ್ಯ ಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...