ಇಂದಿನ ಓಟದ ಬದುಕಿನಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಿದ್ದೇವೆ? ಒಮ್ಮೆ ಯೋಚಿಸಿ. ಬೆಳಿಗ್ಗೆ ಎದ್ದ ತಕ್ಷಣ ಬ್ರೆಡ್, ಬಟರ್ ತಿಂದು ಮುಗಿಸುವುದು, ಮಧ್ಯಾಹ್ನ ಎಣ್ಣೆಯುಕ್ತವಾದ ಭಾರೀ ಊಟ ಮಾಡುವುದು, ಇನ್ನು ರಾತ್ರಿ ಹೊರಗಿನ ಜಂಕ್ ಫುಡ್ ಸವಿಯುವುದು… ಇದು ಇಂದಿನ ಕಾಲದಲ್ಲಿ ಹೆಚ್ಚಿನವರ ದಿನಚರಿಯಾಗಿದೆ. ಇಂತಹ ಅಸ್ತವ್ಯಸ್ತವಾಗಿರುವ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿಯೇ ಸಣ್ಣ ವಯಸ್ಸಿನಲ್ಲೇ ಅಧಿಕ ತೂಕ, ಮಧುಮೇಹ ಹಾಗೂ ಹೃದಯಾಘಾತದಂತಹ ಪ್ರಾಣಾಪಾಯದ ಸಮಸ್ಯೆಗಳು ಆವರಿಸಿಕೊಳ್ಳುತ್ತಿವೆ.
ಇವೆಲ್ಲವುಗಳ ಜೊತೆಗೆ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಮತ್ತು ಅಸಿಡಿಟಿಯಂತಹ ಸಮಸ್ಯೆಗಳು ಪ್ರತಿಯೊಬ್ಬರನ್ನೂ ಪ್ರತಿದಿನ ಬಾಧಿಸುವ ಸಾಮಾನ್ಯ ಸಮಸ್ಯೆಗಳಾಗಿವೆ. ದಿನವಿಡೀ ಹೊಟ್ಟೆಯುರಿ ಮತ್ತು ಕಿರಿಕಿರಿಯಿಂದ ಬಳಲುವವರು ಅನೇಕರಿದ್ದಾರೆ. ಆದರೆ ಈ ಅಸಿಡಿಟಿ ಹಾಗೂ ಗ್ಯಾಸ್ ಸಮಸ್ಯೆಯಿಂದ ಮುಕ್ತಿ ಪಡೆಯಬೇಕೆಂದರೆ, ಬೆಳಗಿನ ಜಾವದ ದಿನಚರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಆ ಸರಳ ಅಭ್ಯಾಸಗಳು ಯಾವುವು ಎಂಬುದು ಇಲ್ಲಿದೆ ನೋಡಿ:

ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿನ ನೀರು

ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಉಗುರುಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ದೇಹಕ್ಕೆ ಔಷಧಿಯಂತೆ ಕೆಲಸ ಮಾಡುತ್ತದೆ. ಈ ನೀರು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು (ಟಾಕ್ಸಿನ್) ಸುಲಭವಾಗಿ ಹೊರಹಾಕುವುದಲ್ಲದೆ, ನಿಮ್ಮ ಜೀರ್ಣಾಂಗವ್ಯೂಹವನ್ನು ಉತ್ತೇಜಿಸುತ್ತದೆ. ಇದರಿಂದಾಗಿ ದಿನವಿಡೀ ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.
ಯೋಗದ ಮೂಲಕ ಹೊಟ್ಟೆಗೆ ವ್ಯಾಯಾಮ
ಶಾರೀರಿಕ ಶ್ರಮ ಅಥವಾ ವ್ಯಾಯಾಮದ ಕೊರತೆಯಿಂದಲೇ ಅರ್ಧದಷ್ಟು ರೋಗಗಳು ಬರುತ್ತವೆ. ಬೆಳಿಗ್ಗೆ ಸ್ವಲ್ಪ ಸಮಯವನ್ನು ಯೋಗಕ್ಕಾಗಿ ಮೀಸಲಿಡಿ. ಮುಖ್ಯವಾಗಿ ವಜ್ರಾಸನ, ಪವನಮುಕ್ತಾಸನ ಮತ್ತು ಬಾಲಾಸನದಂತಹ ಆಸನಗಳನ್ನು ಮಾಡುವುದರಿಂದ ಹೊಟ್ಟೆಯಲ್ಲಿ ಶೇಖರಣೆಯಾಗಿರುವ ಗ್ಯಾಸ್ ಸುಲಭವಾಗಿ ಹೊರಹೋಗುತ್ತದೆ. ಇವು ಅಸಿಡಿಟಿಯನ್ನು ಕಡಿಮೆ ಮಾಡಿ, ಹೊಟ್ಟೆಯನ್ನು ಹಗುರ ಹಾಗೂ ಆರೋಗ್ಯಕರವಾಗಿರಿಸುತ್ತವೆ.
ಮನೆಮದ್ದು ಪಾನೀಯ
ಸಾಕಷ್ಟು ಜನರಿಗೆ ಬೆಳಿಗ್ಗೆ ಬೆಡ್ ಟೀ ಅಥವಾ ಕಾಫಿ ಕುಡಿಯದಿದ್ದರೆ ದಿನವೇ ಶುರುವಾಗುವುದಿಲ್ಲ. ಆದರೆ ಖಾಲಿ ಹೊಟ್ಟೆಯಲ್ಲಿ ಕಾಫಿ ಅಥವಾ ಟೀ ಕುಡಿಯುವುದರಿಂದ ಅಸಿಡಿಟಿ ಮತ್ತಷ್ಟು ತೀವ್ರಗೊಳ್ಳುತ್ತದೆ. ಅದರ ಬದಲು ಬೆಳಿಗ್ಗೆ ಜೀರಿಗೆ ನೀರು, ಓಂಕಾಳು (ಅಜ್ವೈನ) ಟೀ ಅಥವಾ ಧನಿಯಾ (ಕೊತ್ತಂಬರಿ) ನೀರನ್ನು ಒಳಗೊಂಡ ಹರ್ಬಲ್ ಡ್ರಿಂಕ್ಸ್ ಕುಡಿಯಿರಿ. ಇವು ನಿಮ್ಮ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ, ಕರುಳಿನ ಆರೋಗ್ಯವನ್ನು ರಕ್ಷಿಸುತ್ತವೆ.
ಜೀರ್ಣಶಕ್ತಿ ಹೆಚ್ಚಿಸಲು ಹೆಚ್ಚುವರಿ ಸಲಹೆಗಳು:
ಕೇವಲ ಬೆಳಗಿನ ಸಮಯ ಮಾತ್ರವಲ್ಲದೆ, ದಿನವಿಡೀ ನಿಮ್ಮ ಆಹಾರ ಸಮತೋಲಿತವಾಗಿರುವಂತೆ ನೋಡಿಕೊಳ್ಳಿ.
ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ತಪ್ಪದೇ ಕುಡಿಯಿರಿ.
ಜಂಕ್ ಫುಡ್‌ಗಳಿಂದ ಸಾಧ್ಯವಾದಷ್ಟು ದೂರವಿದ್ದು, ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಮಾಡಿ.
ರಾತ್ರಿ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಸುಖಕರ ನಿದ್ರೆ ಮಾಡುವುದು ಅತ್ಯಗತ್ಯ. ನಿದ್ರೆಗೆಡಿಸುವುದು ಕೂಡ ಜೀರ್ಣಾಂಗದ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ಮರೆಯಬೇಡಿ.













