ರಾಜಧಾನಿ ಬೆಂಗಳೂರು ನಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಯ ಅಬ್ಬರಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಈ ಅವಾಂತರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸವೂ ತಪ್ಪಿಸಿಕೊಳ್ಳಲಿಲ್ಲ. ಸಿಎಂ ಅವರ ಗೃಹ ಕಚೇರಿ ‘ಕೃಷ್ಣ’ ಕಾಂಪೌಂಡ್ ಮೇಲೆ ದೊಡ್ಡ ಮರದ ಕೊಂಬೆಗಳು ಹಾಗೂ ಕಬ್ಬಿಣದ ವಾಲ್‌ಗಳು ಕುಸಿದು ಬಿದ್ದಿವೆ.
ಸಿಎಂ ಮನೆದಲ್ಲಿದ್ದ ಸಮಯದಲ್ಲೇ ಈ ಘಟನೆ ನಡೆದಿದ್ದು, ಭಾರಿ ಗಾಳಿ-ಮಳೆಯ ಹೊಡೆತಕ್ಕೆ ಕಾಂಪೌಂಡ್ ಪಕ್ಕದಲ್ಲಿದ್ದ ಬೃಹತ್ ಮರದ ಕೊಂಬೆಗಳು ಉರುಳಿ, ಗೋಡೆ ಮೇಲಿನ ಕಬ್ಬಿಣದ ವಾಲ್‌ಗಳು ಕುಸಿದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಹಾನಿ ಸಂಭವಿಸಿಲ್ಲ.ಮಳೆಯ ಪ್ರಮಾಣದ ವಿಚಾರಕ್ಕೆ ಬಂದರೆ, ಬುಧವಾರ ಸಂಜೆ ಮತ್ತು ರಾತ್ರಿ ಸೇರಿ ನಗರದಲ್ಲಿ ಸುಮಾರು 111 ಮಿ.ಮೀ ಮಳೆಯಾಗಿದೆ. ಇದು ಏಪ್ರಿಲ್ ತಿಂಗಳಲ್ಲಿಯೇ ದಾಖಲಾಗಿರುವ ಅಪರೂಪದ ಮಳೆಯಾಗಿದ್ದು, 2001ರ ದಾಖಲೆಗೂ ಸಮಾನವಾಗಿದೆ. ಕೆಲವೇ ಗಂಟೆಗಳಲ್ಲಿ ಸುರಿದ ಈ ಮಳೆ ನಗರಾದ್ಯಂತ ರಸ್ತೆ ಜಲಾವೃತ, ಟ್ರಾಫಿಕ್ ಜಾಮ್, ಮರಗಳ ಉರುಳುವಿಕೆ ಸೇರಿದಂತೆ ಹಲವು ಸಮಸ್ಯೆಗಳನ್ನು ಉಂಟುಮಾಡಿದೆ.

ಹವಾಮಾನ ಇಲಾಖೆ ಮುಂದಿನ ಮೂರು ದಿನಗಳ ಕಾಲ ‘ಯೆಲ್ಲೋ ಅಲರ್ಟ್’ ಘೋಷಿಸಿದ್ದು, ಗಂಟೆಗೆ 30–40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ, ಸುರಕ್ಷತೆ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.



















