ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಪಂಚಮಸಾಲಿ ಗುರುಪೀಠದಲ್ಲಿ ಭಕ್ತರು ಹಾಗೂ ಮಠದ ಆಡಳಿತ ಮಂಡಳಿಯ ನಡುವೆ ಮಹತ್ವದ ಸಭೆ ನಡೆದಿದ್ದು, ಮಠದ ಆಂತರಿಕ ವಿಚಾರಗಳು ಮತ್ತು ಆಡಳಿತ ಸಂಬಂಧಿತ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.ಸಭೆಯಲ್ಲಿ ಪೀಠಾಧ್ಯಕ್ಷರ ವಿಚಾರ, ಮಠದ ಆಸ್ತಿ ನಿರ್ವಹಣೆ ಹಾಗೂ ‘ಲೆಕ್ಕ ಕೊಡಿ’ ಅಭಿಯಾನ ಕುರಿತಾಗಿ ಭಿನ್ನಾಭಿಪ್ರಾಯಗಳು ವ್ಯಕ್ತವಾದವು. ವಿಶೇಷವಾಗಿ ಸುಮಾರು 15 ಕೋಟಿ ರೂಪಾಯಿ ಆರ್ಥಿಕ ವ್ಯವಹಾರಗಳ ಲೆಕ್ಕಪತ್ರ ಕುರಿತು ಸ್ಪಷ್ಟತೆ ನೀಡಬೇಕೆಂಬ ಬೇಡಿಕೆ ಪ್ರಮುಖವಾಗಿ ಕೇಳಿಬಂದಿತು.
ಈ ಸಂದರ್ಭದಲ್ಲಿ ವಚನಾನಂದ ಸ್ವಾಮೀಜಿಯವರ ಪರವಾಗಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರು, ಮಠದ ಅಭಿವೃದ್ಧಿಗೆ ಅವರ ಕೊಡುಗೆ ಮಹತ್ತರವಾಗಿದೆ ಎಂದು ಶ್ಲಾಘಿಸಿ, ಅವರ ನಾಯಕತ್ವಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಮಠದ ಘನತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟ ಅವರು, ಯಾವುದೇ ಬಾಹ್ಯ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಇದೀಗ ಉಂಟಾಗಿರುವ ವಿವಾದದ ಹಿನ್ನೆಲೆ ಟ್ರಸ್ಟಿಗಳು ಸಹ ಲೆಕ್ಕಪತ್ರಗಳನ್ನು ಬಹಿರಂಗಪಡಿಸಲು ಸಿದ್ಧರಾಗಿರುವ ಮಾಹಿತಿ ಲಭ್ಯವಾಗಿದೆ. ಮಠದ ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಮತ್ತು ಪೀಠಾಧ್ಯಕ್ಷರ ವಿರುದ್ಧ ಪಿತೂರಿ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ. ಪಂಚಮಸಾಲಿ ಗುರುಪೀಠದ ಬೆಳವಣಿಗೆ ಹೊಸ ತಿರುವು ಪಡೆದುಕೊಂಡಿದ್ದು, ಸಮುದಾಯದ ಮುಖಂಡರು ಶ್ರೀಗಳ ಬೆಂಬಲಕ್ಕೆ ಬದ್ಧರಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.


















