ಗೃಹ ಸಚಿವ ಡಾ. ಜಿ. ಪರಮೇಶ್ವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ನ್ಯಾಯಾಲಯ ಮಂಗಳವಾರ ಮಹತ್ವದ ಆದೇಶ ನೀಡಿದೆ. ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಪಿಯು ಕಾಲೇಜು ವಿದ್ಯಾರ್ಥಿಗಳ ಕಬಡ್ಡಿ ಫೈನಲ್ ಪಂದ್ಯದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಜೊತೆ ₹500 ಬೆಟ್ಟಿಂಗ್ ಆಡಿದ್ದಾಗಿ ಪರಮೇಶ್ವರ ನೀಡಿದ್ದ ಹೇಳಿಕೆಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಕಳೆದ ವರ್ಷದ ಅಕ್ಟೋಬರ್ನಲ್ಲಿ ನಡೆದ ಈ ಪಂದ್ಯಾವಳಿಯ ವೇಳೆ “ವಿಜಯಪುರ ತಂಡ ಗೆಲ್ಲುತ್ತದೆ ಎಂದು ಬೆಟ್ಟಿಂಗ್ ಮಾಡಿಕೊಂಡು ₹500 ಕಳೆದುಕೊಂಡೆ” ಎಂದು ಪರಮೇಶ್ವರ ಬಹಿರಂಗವಾಗಿ ಹೇಳಿದ್ದರು. ಈ ಹೇಳಿಕೆಯನ್ನು ಆಧರಿಸಿ ಸಾಮಾಜಿಕ ಹೋರಾಟಗಾರ ಹಂದ್ರಾಳ್ ನಾಗಭೂಷಣ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರೂ, ಪೊಲೀಸರು ಎಫ್ಐಆರ್ ದಾಖಲಿಸದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಪ್ರಕರಣವನ್ನು ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ, ದೂರು ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿದೆ. ಈ ಆದೇಶದಿಂದ ಗೃಹ ಸಚಿವರಿಗೆ ಸಾರ್ವಜನಿಕವಾಗಿ ಮುಜುಗರ ಉಂಟಾಗಿದೆ.

ಇದೇ ಪ್ರಕರಣದಲ್ಲಿ ದೂರು ಸ್ವೀಕರಿಸಿ ಎಫ್ಐಆರ್ ದಾಖಲಿಸದ ಕೊಡಿಗೇನಹಳ್ಳಿ ಠಾಣೆಯ ಪಿಎಸ್ಐ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್ ವಿರುದ್ಧವೂ ಮಧುಗಿರಿ ನ್ಯಾಯಾಲಯದಲ್ಲಿ ಮತ್ತೊಂದು ಪ್ರಕರಣ ವಿಚಾರಣೆಯಲ್ಲಿದೆ.ಬೆಟ್ಟಿಂಗ್ ಆರೋಪದ ಬಗ್ಗೆ ಟೀಕೆಗಳು ಹೆಚ್ಚಾಗುತ್ತಿದ್ದಂತೆ ಪರಮೇಶ್ವರ ಸ್ಪಷ್ಟನೆ ನೀಡಿ, “ನಾನು ಗೃಹ ಸಚಿವನಾಗಿ ಬೆಟ್ಟಿಂಗ್ ಮಾಡುತ್ತೇನೆನಾ? ತಮಾಷೆಗಾಗಿ ಹೇಳಿದ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ” ಎಂದು ಪ್ರತಿಕ್ರಿಯಿಸಿದ್ದರು.
ಇದೇ ವಿಷಯವನ್ನು ಕೆಆರ್ಎಸ್ ಪಕ್ಷದ ನಾಯಕ ಭಟ್ಟರಹಳ್ಳಿ ಮಲ್ಲಿಕಾರ್ಜುನ ಕೂಡ ಪ್ರಸ್ತಾಪಿಸಿ, ಸಚಿವರು ಹಾಗೂ ಜಿಲ್ಲಾಡಳಿತದ ಕಾರ್ಯವೈಖರಿಯನ್ನು ಟೀಕಿಸಿದ್ದರು.
2025ರ ಅಕ್ಟೋಬರ್ 19ರಂದು ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡ 36-26 ಅಂಕಗಳಿಂದ ವಿಜಯಪುರ ತಂಡವನ್ನು ಸೋಲಿಸಿತ್ತು. ಪಂದ್ಯಾವಳಿಯ ಸಮಾರೋಪದಲ್ಲಿ ಬಹುಮಾನ ವಿತರಿಸುವ ವೇಳೆ ಈ ಹೇಳಿಕೆ ನೀಡಲಾಗಿತ್ತು.
















