ಬೆಂಗಳೂರು: ನನಗೆ ನ್ಯಾಯಾಲಯದ ಮೇಲೆ ಗೌರವವಿದೆ. ಆದರೆ ಈ ಇಡೀ ಪ್ರಕರಣದಲ್ಲಿ ಒಂದು ದೊಡ್ಡಮಟ್ಟದ ರಾಜಕೀಯ ಒಳಸಂಚು ನಡೆದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ಹತ್ತು ವರ್ಷದಿಂದ ಕೋರ್ಟ್ ನಲ್ಲಿದ್ದ ಕೇಸ್ ಇಂದಿಗೆ ಮುಕ್ತಾಯವಾಗಿದೆ. ಆಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗಿದೆ. ಶಾಸಕ ವಿನಯ್ ಕುಲಕರ್ಣಿಗೂ ಜೀವಾವಧಿ ಶಿಕ್ಷೆಯಾಗಿರುವ ಹಿನ್ನೆಲೆ ಇದೊಂದು ಷಡ್ಯಂತ್ರ ಎಂಬುದಾಗಿಯೇ ಡಿಕೆ ಶಿವಕುಮಾರ್ ಮಾತನ್ನಾಡಿದ್ದಾರೆ.
ವಿನಯ್ ಗೆ ಕೆಲವು ವರ್ಷಗಳಿಂದ ನೀಡುತ್ತಿರುವ ಕಿರುಕುಳವನ್ನ ನಾವೂ ಕಣ್ಣಾರೆ ನೋಡಿದ್ದೇವೆ. ಇನ್ನೇನು ಬಿ ರಿಪೋರ್ಟ್ ಸಲ್ಲಿಕೆ ಮಾಡಬೇಕಿತ್ತು. ಆ ಸಮಯಕ್ಕೆ ಸಿಬಿಐಗೆ ವಹಿಸಿದ್ದರು. ನಾನು ಅವರ ಕುಟುಂಬದ ಜೊತೆಗೆ ಮಾತನ್ನಾಡಿದ್ದೇನೆ. ವಿನಯ್ ಅವರು ತಾವೂ ನಂಬಿರುವ ದೇವರ ಮೇಲೆ ಪ್ರಮಾಣ ಮಾಡಿ, ನಾನು ಈ ತಪ್ಪು ಮಾಡಿಲ್ಲ ಎಂಬುದನ್ನ ಹೇಳಿದ್ದಾರೆ. ಅವರ ಮಾತುಗಳ ಮೇಲೆ ನನಗೆ ನಿಜವಾಗಿಯೂ ಭರವಸೆ ಇದೆ.

ಸದ್ಯಕ್ಕೆ ಕೆಳನ್ಯಾಯಾಲಯ ಶಿಕ್ಷೆ ನೀಡಿರುವುದನ್ನು ನಾವೂ ಗೌರವಿಸುತ್ತೇವೆ. ಆದರೆ ಮೇಲ್ಮನವಿ ಸಲ್ಲಿಸಲು ನಮಗೆ ಇನ್ನೂ ಅವಕಾಶವಿದೆ. ಮುಂದಿನ 30 ದಿನಗಳಲ್ಲಿ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಈ ಹಿಂದೆ ನನಗೂ ಹೀಗೆ ಆಗಿತ್ತು. ಇಡೀ ಪ್ರಕರಣದಲ್ಲಿ ನನ್ನ ವಿರುದ್ಧವೂ ಸಂಚು ನಡೆದಿತ್ತು. ಅದೇ ರೀತಿ ವಿನಯ್ ಕುಲಕರ್ಣಿ ಅವರಿಗೂ ನ್ಯಾಯ ಸಿಗುವ ವಿಶ್ವಾಸವಿದೆ. ನಾವೂ ಅವರ ಕುಟುಂಬದ ಜೊತೆಗೆ ಮಾನಸಿಕವಾಗಿ ಗಟ್ಟಿಯಾಗಿ ನಿಲ್ಲುತ್ತೇವೆ. ಉತ್ತರ ಕರ್ನಾಟಕ ಭಾಗದಲ್ಲಿ ವಿನಯ್ ಕುಲಕರ್ಣಿ ರಾಜಕೀಯವಾಗಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದಾರೆ ಎಂಬ ಭಯದಿಂದ ಬಿಜೆಪಿ ಇಂತಹ ಒಳಸಂಚು ಮಾಡಿದೆ ಎಂದಿದ್ದಾರೆ.
















