ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಕೇಳಿಬಂದಿದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಹೆಸರು ಕೇಳಿಬಂದ ಮಹಿಳೆ ಸ್ವತಃ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದು, ತನ್ನ ಮೇಲೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಹೇಳಿದ್ದಾಳೆ.
ವಿಡಿಯೋ ಸಂದೇಶದಲ್ಲಿ ಮಾತನಾಡಿದ ಮಹಿಳೆ, “ನನ್ನ ಮತ್ತು ಸ್ವಾಮೀಜಿಗಳ ನಡುವಿನ ಸಂಬಂಧವು ಭಕ್ತೆ ಹಾಗೂ ಗುರುವಿನ ಸಂಬಂಧ ಮಾತ್ರ. ನಾನು ಸ್ವಾಮೀಜಿ ವಿರುದ್ಧ ಯಾವುದೇ ದೂರು ನೀಡಿಲ್ಲ. ನನ್ನ ಹೆಸರಿನಲ್ಲಿ ಬೇರೆ ಯಾರೋ ದೂರು ನೀಡಿದ್ದಾರೆ,” ಎಂದು ಸ್ಪಷ್ಟಪಡಿಸಿದ್ದಾಳೆ. ಸ್ವಾಮೀಜಿಗಳು ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿಲ್ಲ, ಹಾಗೆಯೇ ತಾವೂ ಕೂಡ ಅವಮಾನಕಾರಿ ಪದಗಳನ್ನು ಬಳಸಿಲ್ಲ ಎಂದು ತಿಳಿಸಿದ್ದಾಳೆ.
ವಿಜಯಪುರದಲ್ಲಿ ನಡೆದ ಗಲಾಟೆ ಕುರಿತು ಉಲ್ಲೇಖಿಸಿದ ಮಹಿಳೆ, “ಮಾತನಾಡಲು ಕರೆದಿದ್ದರು, ಆದರೆ ನಾವು ಯಾವುದೇ ಗಲಾಟೆ ನಡೆಸಿಲ್ಲ. ಸ್ವಾಮೀಜಿಗಳಿಂದ ಹಣ ಬೇಡಿಕೆ ಇಟ್ಟಿಲ್ಲ. ನಮಗೆ ಆ ಪರಿಸ್ಥಿತಿ ಬಂದಿಲ್ಲ,” ಎಂದು ಹೇಳಿದ್ದಾಳೆ. ಏಪ್ರಿಲ್ 9ರಂದು ದಾಖಲಾಗಿರುವ ದೂರು ಸುಳ್ಳು ಎಂದು ಹೇಳಿ, ಅದನ್ನು ಯಾರೂ ನಂಬಬಾರದು ಎಂದು ಮನವಿ ಮಾಡಿದ್ದಾಳೆ.
ತಾನು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲ ದಿನಗಳ ಬಳಿಕ ಸಂಪೂರ್ಣ ವಿವರ ನೀಡುವುದಾಗಿ ತಿಳಿಸಿದ್ದಾಳೆ.ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಅಂಶವೂ ಗಮನಸೆಳೆಯುತ್ತಿದೆ. ಫೆಬ್ರವರಿಯಲ್ಲಿ ಕಗ್ಗೋಡು ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಇದೇ ಮಹಿಳೆ ಸೇರಿದಂತೆ ಕೆಲವರು ಸ್ವಾಮೀಜಿಗಳ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಏಪ್ರಿಲ್ 4ರಂದು ಸ್ವಾಮೀಜಿಗಳು ಪೊಲೀಸರಿಗೆ ದೂರು ನೀಡಿದ್ದರು.
ಈ ಮಧ್ಯೆ ಮಹಿಳೆಯ ಇತ್ತೀಚಿನ ಹೇಳಿಕೆ ಪ್ರಕರಣದ ದಿಕ್ಕನ್ನೇ ಬದಲಾಯಿಸುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ಪೊಲೀಸ್ ತನಿಖೆ ಯಾವ ರೀತಿಯಲ್ಲಿ ಮುಂದುವರೆಯುತ್ತದೆ ಎಂಬುದು ಕಾದು ನೋಡಬೇಕಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















