ಮಂಡ್ಯ: ರಾಜ್ಯದಲ್ಲಿ ಬೈ ಎಲೆಕ್ಷನ್ ಪ್ರಕ್ರಿಯೆ ಕೂಡ ಮುಗಿದಿದೆ. ಇದೀಗ ಸಚಿವ ಸಂಪುಟ ಪುನರ್ ರಚನೆಯ ಸುದ್ದಿ ಸದ್ದು ಮಾಡ್ತಾ ಇದೆ. ಹೊಸ ಶಾಸಕರಿಗೂ ಸಚಿವ ಸ್ಥಾನ ಕೊಡಬೇಕು ಅನ್ನೋ ಬೇಡಿಕೆ ಇದೆ. ಆ ಸಂಬಂಧ ಈಗಾಗಲೇ ಪತ್ರ ಕೂಡ ಬರೆದಿದ್ದಾರೆ. ಇದೇ ವಿಚಾರದ ಬಗ್ಗೆ ಶಾಸಕ ರವಿ ಗಾಣಿಗ ಮಾತನ್ನಾಡಿದ್ದಾರೆ. ಹಲವು ಶಾಸಕರು ಮಂತ್ರಿಯಾಗುವ ಆಸೆ ಹೊಂದಿದ್ದಾರೆ. ಅದಕ್ಕಾಗಿಯೇ ಮೂರ್ನಾಲ್ಕು ಬಾರಿ ಗೆದ್ದಿರುವ ಹಿರಿಯ ಶಾಸಕರು ಕೂಡ ಮಂತ್ರಿಗಿರಿಗಾಗಿ ದೆಹಲಿಗೆ ತೆರಳಿದ್ದಾರೆ ಎಂದಿದ್ದಾರೆ.
ಅವರೆಲ್ಲರಿಗೂ ಮಂತ್ರಿಗಿರಿ ಸಿಕ್ಕಿ ರಾಜ್ಯಕ್ಕೆ ಸೇವೆ ಸಲ್ಲಿಸಲಿ. ಈ ಸಂಬಂಧ ನಾವೂ ಕೂಡ ಪತ್ರ ಬರೆದಿದ್ದೇವೆ. ಐದು ಜನ ಶಾಸಕರಿಗೆ ಮಂತ್ರಿಗಿರಿ ನೀಡಿ ಎಂದು ಕೇಳಿಕೊಂಡಿದ್ದೇವೆ. ಹೊಸದಾಗಿ ಶಾಸಕರಾದವರಿಗೆ ಮಂತ್ರಿಗಿರಿ ನೀಡಬೇಕೆಂಬ ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆಗಳು ಇಲ್ಲ.

ವೈಯಕ್ತಿಕವಾಗಿ ನನಗೆ ಯಾವುದೇ ಸಚಿವ ಸ್ಥಾನ ಬೇಡ. ಹಾಲಿ ಇರುವ ಕೆಲವು ಸಚಿವರು ಸಮರ್ಥವಾಗಿ ಕಾರ್ಯ ನಿರ್ವಹಿಸದೆ ಇರುವುದು, ಜನರಿಗೆ ಲಭ್ಯವಿಲ್ಲದೆ ಇರುವುದು ಆಗ್ತಾ ಇದೆ. ಇದು ಕೆಲಸಗಳಿಗೆ ಅಡ್ಡಿಯಾಗುತ್ತೆ. ಅಂತಹ ಸಚಿವರನ್ನ ಬದಲಾಯಿಸಿ, ಹೊಸಬರಿಗೆ ಅವಕಾಶ ನೀಡುವುದು ಬಹಳ ಉತ್ತಮ. ಹೀಗಿದ್ದರೂ ಈ ರೀತಿಯ ನಿರ್ಧಾರ ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ಗೆ ಬಿಟ್ಟ ನಿರ್ಧಾರವಾಗಿದೆ ಎಂದು ಮಂಡ್ಯದಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ಮತ್ತೆ ಸಿಎಂ ಕುರ್ಚಿ ಬದಲಾವಣೆ ಹಾಗೂ ಸಚಿವ ಸಂಪುಟ ಪುನರ್ ರಚನೆಯ ವಿಚಾರ ಸಾಕಷ್ಟು ಚರ್ಚಿತ ವಿಚಾರವಾಗಿದೆ. ಒಂದು ವರ್ಷ ಕಳೆದರೆ 2028 ರ ಚುನಾವಣೆಗೆ ಸಿದ್ಧತೆಗಳು ಶುರುವಾಗುತ್ತವೆ.












