ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಜಾತ್ರೆಗಳ ಸಂಭ್ರಮ ಜೋರಾಗಿದ್ದು, ಮಾರಮ್ಮ, ದುರುಗಮ್ಮ, ಕರಿಯಮ್ಮ ಸೇರಿದಂತೆ ವಿವಿಧ ದೇವತೆಗಳ ಆರಾಧನೆಗಾಗಿ ಪ್ರತಿವರ್ಷ ಭಕ್ತಿಭಾವದಿಂದ ಜಾತ್ರೆಗಳು ನಡೆಯುತ್ತಿವೆ. ನೆಂಟರು-ಇಷ್ಟರನ್ನು ಆಹ್ವಾನಿಸಿ ಆತಿಥ್ಯ ನೀಡುವುದು ಸಂಪ್ರದಾಯವಾಗಿದ್ದರೂ, ಇತ್ತೀಚೆಗೆ ಜಾತ್ರೆಗಳ ಅತಿಯಾದ ಖರ್ಚು ಮತ್ತು ಸಮಯ ವ್ಯಯ ಗ್ರಾಮೀಣ ಜನತೆಗೆ ಆರ್ಥಿಕ ಒತ್ತಡವನ್ನುಂಟುಮಾಡುತ್ತಿರುವುದು ಗಮನಾರ್ಹವಾಗಿದೆ.
ಈ ಹಿನ್ನೆಲೆಯಲ್ಲಿ ಹುಣಸೆಕಟ್ಟೆ ಜಾತ್ರೆಯಲ್ಲಿ ವಿಶಿಷ್ಟ ಜಾಗೃತಿ ಅಭಿಯಾನ ಗಮನ ಸೆಳೆದಿದೆ. ಶ್ರೀ ಮಾದಾರಚನ್ನಯ್ಯ ಸೇವಾ ಸಮಿತಿ ವತಿಯಿಂದ ಅಳವಡಿಸಲಾದ ಫ್ಲೆಕ್ಸ್ ಬ್ಯಾನರ್ನಲ್ಲಿ, ಜಾತ್ರೆಗೆ ಆಗಮಿಸುವ ಅತಿಥಿಗಳು ವಾರಗಟ್ಟಲೆ ತಂಗದೇ, ಒಂದು ಅಥವಾ ಎರಡು ದಿನಗಳೊಳಗೆ ತಮ್ಮ ಊರಿಗೆ ಮರಳುವಂತೆ ಮನವಿ ಮಾಡಲಾಗಿದೆ.

ಸಾಮಾನ್ಯವಾಗಿ ಕೆಲವು ಸಮುದಾಯಗಳಲ್ಲಿ ಜಾತ್ರೆಗಾಗಿ ಸಾಲ ಮಾಡುವುದು, ವಾರಗಳ ಕಾಲ ಕಾರ್ಯಕ್ರಮ ನಡೆಸುವುದು, ದುಡಿಮೆ ನಷ್ಟ ಹಾಗೂ ಅನಾವಶ್ಯಕ ಖರ್ಚು ಹೆಚ್ಚಾಗುವುದು ಕಂಡುಬರುತ್ತಿದೆ. ಈ ಸಮಸ್ಯೆಗಳನ್ನು ಮನಗಂಡು, ಸಮಿತಿ ಈ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಪರಶುರಾಮ್ ಅವರು ಮಾತನಾಡಿ, “ಜಾತ್ರೆ ಸಂಪ್ರದಾಯ ಉಳಿಯಬೇಕು, ಆದರೆ ಅದು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಾರದು. ಆದ್ದರಿಂದ ಜನರಲ್ಲಿ ಜಾಗೃತಿ ಮೂಡಿಸಲು ಈ ರೀತಿಯ ಅಭಿಯಾನ ಕೈಗೊಂಡಿದ್ದೇವೆ” ಎಂದು ತಿಳಿಸಿದ್ದಾರೆ.
ಈ ಪ್ರಯತ್ನಕ್ಕೆ ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಇತರ ಗ್ರಾಮಗಳಲ್ಲಿಯೂ, ವಿಶೇಷವಾಗಿ ದಲಿತ ಕೇರಿಗಳಲ್ಲಿ ಇದೇ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಮಿತಿ ತಿಳಿಸಿದೆ.ಸಂಪ್ರದಾಯದ ಜೊತೆಗೆ ಆರ್ಥಿಕ ಜವಾಬ್ದಾರಿತನಕ್ಕೂ ಒತ್ತು ನೀಡುವ ಈ ಪ್ರಯತ್ನ ಗ್ರಾಮೀಣ ಸಮಾಜದಲ್ಲಿ ಹೊಸ ಚಿಂತನೆಗೆ ದಾರಿ ಮಾಡಿಕೊಡುತ್ತಿದೆ.












