ಅಸ್ಸಾಂ, ಕೇರಳ ಹಾಗೂ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗಳು ಮತ್ತು ರಾಜ್ಯದ ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಲ್ಲಿ ಉಪಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆ, ಚಿನ್ನದ ಮಾರುಕಟ್ಟೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ದಾಖಲಾಗಿದ್ದು, ಆಭರಣ ಖರೀದಿಸಲು ಮುಂದಾಗಿದ್ದ ಗ್ರಾಹಕರಿಗೆ ಇದು ಶುಭ ಸುದ್ದಿಯಾಗಿದೆ.
ನಿನ್ನೆ (ಏಪ್ರಿಲ್ 8) 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಮಿಗೆ ಸುಮಾರು ₹398 ಏರಿಕೆಯಾಗಿತ್ತು. ಅಮೆರಿಕ–ಇರಾನ್ ಕದನ ವಿರಾಮ ಘೋಷಣೆಯ ಬಳಿಕ ಚಿನ್ನದ ಬೆಲೆ ಏರಿಕೆ ಕಂಡಿತ್ತು. ಆದರೆ ಇಂದು (ಏಪ್ರಿಲ್ 9) ಬೆಲೆಯಲ್ಲಿ ತೀವ್ರ ಇಳಿಕೆ ಕಂಡಿದೆ.ಇಂದು 24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ₹2,340 ಇಳಿಕೆ ಕಂಡಿದ್ದು, ಪ್ರತಿ ಗ್ರಾಮ್ ಚಿನ್ನದ ಬೆಲೆ ₹15,148ಕ್ಕೆ ಇಳಿದಿದೆ. ಅದೇ ರೀತಿ, 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಕುಸಿತ ಕಂಡುಬಂದಿದ್ದು, 10 ಗ್ರಾಮ್‌ಗೆ ₹2,150 ಇಳಿಕೆಯಾಗಿದ್ದು, ಪ್ರತಿ ಗ್ರಾಮ್ ಬೆಲೆ ₹13,885 ಆಗಿದೆ.
ಒಂದೇ ದಿನದಲ್ಲಿ ಚಿನ್ನದ ಬೆಲೆಯಲ್ಲಿ ಸುಮಾರು ₹2,000 ಇಳಿಕೆ ಕಂಡಿರುವುದು ಮದುವೆ ಮತ್ತು ಶುಭ ಸಮಾರಂಭಗಳಿಗಾಗಿ ಆಭರಣ ಖರೀದಿಸುವವರಿಗೆ ನಿರಾಳತೆ ತಂದಿದೆ.ಇತ್ತ ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ. ನಿನ್ನೆ ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ₹10,000 ಏರಿಕೆ ಕಂಡಿದ್ದರೆ, ಇಂದು ₹5,000 ಇಳಿಕೆಯಾಗಿದ್ದು, ಪ್ರಸ್ತುತ ಬೆಳ್ಳಿ ಬೆಲೆ ₹2,55,000 ಪ್ರತಿ ಕೆಜಿಗೆ ತಲುಪಿದೆ.
ಜಾಗತಿಕ ಬೆಳವಣಿಗೆಗಳು ಮತ್ತು ಮಾರುಕಟ್ಟೆ ಪರಿಸ್ಥಿತಿಗಳ ಪರಿಣಾಮವಾಗಿ ಚಿನ್ನ–ಬೆಳ್ಳಿ ದರಗಳಲ್ಲಿ ಏರುಪೇರು ಮುಂದುವರಿದಿದ್ದು, ಗ್ರಾಹಕರು ಖರೀದಿಗೆ ಸೂಕ್ತ ಸಮಯವನ್ನು ಗಮನಿಸಿ ನಿರ್ಧಾರ ಕೈಗೊಳ್ಳಬೇಕಿದೆ.












