ಚಿತ್ರದುರ್ಗ: ಒಮ್ಮೊಮ್ಮೆ ಮನುಷ್ಯ ಎಷ್ಟು ಕೆಟ್ಟವನಾಗ್ತಾನೆ ಅಂದ್ರೆ ದ್ವೇಷದ ಜ್ವಾಲೆಗೆ ಸಿಲುಕಿ ಬೆಳೆಯನ್ನು ನಾಶ ಮಾಡ್ತಾನೆ. ಅಂಥದ್ದೇ ಘಟನೆ ಇದೀಗ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರೈತರ ಬೆಳೆ ನಾಶ ಮಾಡಿರುವ ಘಟನೆ ನಡೆದಿದೆ. ಹೊಟ್ಟೆಜ್ಜನ ಕಪ್ಲೆ ಗ್ರಾಮದ ರೈತ ನಾಗರಾಜು ಅವರ ಜಮೀನನಲ್ಲಿ ಬೆಳೆದಿದ್ದ ಬೆಳೆಯನ್ನ ನಾಶ ಮಾಡಿದ್ದಾರೆ.
ಇನ್ನೇನು ಸೌತೆಕಾಯಿಯನ್ನ ಕಟಾವು ಮಾಡಬೇಕು ಎಂದುಕೊಂಡಿದ್ದ ರೈತ ನಾಗರಾಜ್ ಗೆ ಈ ದೃಶ್ಯ ನೋಡಿ ಶಾಕ್ ಆಗಿದ್ದಾನೆ. ನಾಗರಾಜ್ ಅವರು ತಮ್ಮ ಒಂದು ಎಕರೆ ಏಳು ಗುಂಟರ ಜಾಗದಲಗಲಿ ಬಳ್ಳಾರಿ ಸೌತೆ ಬೆಳೆದಿದ್ದರು. ಅದಕ್ಕೆ ಸುಮಾರು ಐವತ್ತು ಸಾವಿರ ರೂಪಾಯಿ ಖರ್ಚು ಮಾಡಿದ್ದರು. ರೈತನ ಶ್ರಮಕ್ಕೆ ತಕ್ಕ ಹಾಗೇ ಫಸಲು ಕೂಡ ಬಂದಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಸೌತೆಕಾಯಿಯನ್ನು ಕಿತ್ತು ಮಾರಾಟ ಮಾಡಬೇಕಾಗಿತ್ತು. ಅದಕ್ಕೆ ಸಿದ್ಧತೆಯೂ ನಡೆದಿತ್ತು. ಬೇಸಿಗೆ ಬೇರೆ ಸೌತೆಕಾಯಿಗೆ ಒಳ್ಳೆ ಡಿಮ್ಯಾಂಡ್ ಇದ್ದ ಕಾರಣ ಒಳ್ಳೆ ಲಾಭ ಬರುವ ನಿರೀಕ್ಷೆಯೂ ಇತ್ತು.
ಅಚ್ಚ ಹಸಿರಿನಿಂದ ಸೌತೆಕಾಯಿ ಬೆಳೆ ಕಂಗೊಳಿಸ್ತಾ ಇತ್ತು. ಆದರೆ ಬೆಳಗ್ಗೆ ಬಂದು ನೋಡಿದರೆ ಎಲ್ಲವೂ ಬಾಡಿ ಹೋಗಿತ್ತು. ಯಾರೋ ಕಿಡಿಗೇಡಿಗಳು ಬೆಳೆ ನಾಶಕ ಔಷಧ ಸಿಂಪಡಿಸಿ ಹೋಗಿದ್ದರು. ಈ ದೃಶ್ಯ ಕಂಡ ಆ ರೈತನ ಸ್ಥಿತಿ ಹೇಗಾಗಿರಬೇಡ ಹೇಳಿ. ಏನೇ ದ್ವೇಷ ಇದ್ದರು ಬೆಳೆಯನ್ನ ಆ ರೀತಿ ಹಾಳು ಮಾಡುವ ಕೆಟ್ಟ ಮನಸ್ಥಿತಿ ಇರಬಾರದು. ಇದರಿಂದ ರೈತ ನಾಗರಾಜ್ ಗೆ ದೊಡ್ಡ ಮಟ್ಟದ ಹೊಡೆತವೇ ಬಿದ್ದಂತೆ ಆಗಿದೆ.
















