ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಸುದ್ದಿಒನ್
ರಾಮಗಿರಿ ಗ್ರಾಮವು ಹೊಳಲ್ಕೆರೆ ತಾಲೂಕಿನ ಒಂದು ಹೋಬಳಿ ಕೇಂದ್ರವಾಗಿದ್ದು,ಹೊಳಲ್ಕೆರೆಯಿಂದ 17 ಕಿಲೋ ಮೀಟರ್ ನೈರುತ್ಯ ದಿಕ್ಕಿನಲ್ಲಿ ಹೊಳಲ್ಕೆರೆ -ಬಸಾಪುರ ಗೇಟ್ -ರಾಮಗಿರಿ -ಅಜ್ಜಂಪುರ ಮಾರ್ಗದಲ್ಲಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಅತ್ಯಂತ ಹಳೆ ಜನವಸತಿ ಪ್ರದೇಶಗಳಲ್ಲಿ ಈ ಸ್ಥಳವೂ ಒಂದಾಗಿದೆ.
ಈ ಗ್ರಾಮ ಪ್ರದೇಶದ ವ್ಯಾಪಕ ಅಧ್ಯಯನ ಹಾಗೂ ಸಂಶೋಧನೆ ಕೈಗೊಂಡಿರುವ ಹಂಪಿ ವಿವಿ.ಯ ಸಂಶೋಧಕರಾದ ಶರತ್ ಬಾಬು ಹಾಗೂ ಡಾ.ಎಸ್. ವೈ. ಸೋಮಶೇಖರ್ ರವರ ಪ್ರಕಾರ ರಾಮಗಿರಿ ಗ್ರಾಮವು ಜಿಲ್ಲೆಯಲ್ಲಿ ಕಂಡುಬರುವ ನವಶಿಲಾಯುಗದ ಸಂಸ್ಕೃತಿಯ ನೆಲೆ ಪ್ರದೇಶವಾಗಿದೆ.
ತಾಲೂಕಿನ ಪರಿಸರದಲ್ಲಿ ಒಟ್ಟು 12 ಕಡೆಗಳಲ್ಲಿ ಹಳೆ ಶಿಲಾಯುಗದಿಂದ ಬೃಹತ್ ಶಿಲಾ ಯುಗದವರೆಗೆ ಅವಶೇಷಗಳು ಕಂಡು ಬಂದಿದೆ. ನವಶಿಲಾಯುಗದ ವಸತಿ ನೆಲೆಯು ರಾಮಗಿರಿಯಲ್ಲಿ ಕಂಡುಬಂದಿರುವುದು ತಾಲೂಕಿನಲ್ಲಿಯೇ ಮೊದಲು. ಈ ನೆಲೆಯು 2 ಎಕರೆಗಳಷ್ಟು ವಿಸ್ತೀರ್ಣವಾಗಿದ್ದು, ಸ್ಥಳೀಯರು ಇದನ್ನು ಬೂದಿಮಾರಲು/ ಸ್ಮಶಾನವೆಂದು ಕರೆಯುತ್ತಾರೆ. ಈ ನೆಲೆಯು ರಾಮಗಿರಿಯಿಂದ ಉತ್ತರಕ್ಕೆ ರೈಲ್ವೆ ಹಳಿ ಅಂಡರ್ ಪಾಸ್ ದಾಟಿ ಎಡಭಾಗದಲ್ಲಿ ಮುಂದೆ ಬೇಚರಾಕ್ ಗ್ರಾಮ ಮಲ್ಲಾಪುರಕ್ಕೆ ಹೋಗುವ ದಾರಿಯಲ್ಲಿ ಇದೆ.

ಈ ನೆಲೆಯಲ್ಲಿ ನವಶಿಲಾಯುಗ ಮತ್ತು ನವಶಿಲಾತಾಮ್ರಯುಗದ ಮಡಿಕೆ ಚೂರುಗಳು ಪತ್ತೆಯಾಗಿವೆ. ಇಂದಿಗೂ ಈ ನೆಲೆಯಲ್ಲಿ ಎರಡು-ಮೂರು ಅಡಿ ಗುಂಡಿ ತೆಗೆದಾಗ ಅಲ್ಲಲ್ಲಿ ಮಡಿಕೆ ಚೂರುಗಳು, ಅವಶೇಷಗಳು ಕಂಡುಬರುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಈ ನೆಲೆಯ ಪಕ್ಕದಲ್ಲಿಯೇ ಪಶುಪಾಲನೆಯ ಸಂಕೇತವಾದ ಸಗಣಿಯನ್ನು ಸುಟ್ಟ ಬೂದಿಗುಡ್ಡೆ ಇದೆ. (Ashmounds) ಮುಷ್ಟಿಯಲ್ಲಿ ಹಿಡಿಯಬಹುದಾದ ಕವಣೆಕಲ್ಲು, ಗುಂಡುಕಲ್ಲು ಹಾಗೂ ಇತರ ಕಲ್ಲಿನ ಉಪಕರಣಗಳು ದೊರೆತಿವೆ.
ಉತ್ಖನನಗೊಂಡ ಮೊಳಕಾಲ್ಮುರು ತಾಲೂಕು ಬ್ರಹ್ಮಗಿರಿ ನೆಲೆಯಲ್ಲಿ ನವಶಿಲಾಯುಗದಲ್ಲಿ ಕಪ್ಪು /ಬೂದು,ಕಂದು, ಬೂದು ಚಾಕಲೇಟ್ ಬಣ್ಣ ಹಾಗೂ ನೇರಳೆ ಬಣ್ಣ ರೇಖಾಚಿತ್ರವುಳ್ಳ ಮಡಿಕೆಗಳು ಕಂಡುಬಂದಿವೆ.
ನವ ಶಿಲಾತಾಮ್ರಯುಗ ಹಂತದಲ್ಲಿ ತಿಳಿಕೆಂಪು, ತಿಳಿಬೂದು ಹಾಗೂ ನುಣುಪಾದ ಕಪ್ಪು ಮಡಿಕೆಗಳು ಕಂಡುಬಂದಿವೆ.
ಇದೇ ಬಗೆಯ ಅವಶೇಷಗಳು, ಮಡಿಕೆ ಚೂರುಗಳು ರಾಮಗಿರಿ ವಸತಿ ನೆಲೆಯಲ್ಲಿ ಕಂಡು ಬಂದಿರುವುದು ವಿಶೇಷವಾಗಿದೆ.ಕೆ. ಪದ್ದಯ್ಯ ಅವರ ಅಭಿಪ್ರಾಯದಂತೆ ನೆಲೆಯ ಪಕ್ಕದಲ್ಲಿ ಸಗಣಿಯನ್ನು ಗುಡ್ಡೆ ಹಾಕುತ್ತಿದ್ದರು ಎನ್ನುವುದಕ್ಕೆ ರಾಮಗಿರಿ ನೆಲೆಯ ಬೂದಿಗುಡ್ಡೆಯು ಪೂರಕವಾದ ಆಧಾರವಾಗಿದೆ. ಇದೇ ರೀತಿಯ ಬೂದಿಗುಡ್ಡೆಗಳು ಚಿತ್ರದುರ್ಗ ತಾಲೂಕಿನ ಚಿಪ್ಪಿನಕೆರೆ ಹಾಗೂ ಸಂಗೇನಹಳ್ಳಿ ಕೆರೆ, ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಹೋಬಳಿ ಎನ್. ಗೌರಿಪುರ ಗ್ರಾಮದಲ್ಲಿ ಕೂಡ ಕಂಡುಬರುತ್ತವೆ.
ಅಲ್ಲದೆ ಮೈಸೂರು ಜಿಲ್ಲೆಯ ಟಿ. ನರಸೀಪುರ,ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಹಾಗೂ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಬ್ರಹ್ಮಗಿರಿ ಉತ್ಖನನದಿಂದ ನವಶಿಲಾ ಯುಗದಲ್ಲಿ ಆಸ್ಟ್ರಲಾಯಿಡ್ ಜನಾಂಗದವರು ಇದ್ದರೆಂಬುದು ತಿಳಿದು ಬಂದಿರುವುದರಿಂದ ಈ ಭಾಗದಲ್ಲೂ ಅದೇ ಜನಾಂಗವು ನೆಲೆಸಿದ್ದುದನ್ನು ದೃಢಪಡಿಸಬಹುದಾಗಿದೆ.
ಇಲ್ಲಿನ ನೆಲೆಯು ನವಶಿಲಾಯುಗದ ಕಾಲದ್ದಾಗಿದ್ದು, ಇಂದಿನಿಂದ ಸುಮಾರು 4000- 5000 ವರ್ಷ ಹಿಂದಿನದ್ದಾಗಿದೆ. ಅಂದರೆ ಕ್ರಿಸ್ತಪೂರ್ವ 2500 ರಿಂದ 1000 ವರ್ಷಗಳಷ್ಟು ಹಿಂದಿನದು.
ಶಿಲಾ ಸಮಾಧಿಗಳು :
ಇಲ್ಲಿ ಮುಖ್ಯವಾಗಿ ಕಲ್ಲುವೃತ್ತ ಮಾದರಿಯ ಶವಕುಣಿಗಳಿವೆ. ಅಂದರೆ ಬೃಹತ್ ಗಾತ್ರದ ಕಲ್ಲುಗಳನ್ನು ಸಮಾಧಿಯ ಮೇಲ್ಭಾಗದಲ್ಲಿ ವೃತ್ತಾಕಾರದಲ್ಲಿ ಜೋಡಿಸಿ ಇಡುವುದು. ಅಂದಿನ ಜನರಲ್ಲಿ ಇದ್ದ ಆಚರಣೆ, ನಂಬಿಕೆಗಳನ್ನು ಈ ಕಾಲದ ಶಿಲಾಸಮಾಧಿಗಳಲ್ಲಿ ಕಾಣಬಹುದು. ಇವರ ಕಾಲದ ಸಂಸ್ಕೃತಿಯ ಪ್ರಮುಖ ಸಂಕೇತಗಳೆಂದರೆ ಶಿಲಾಸಮಾಧಿಗಳೇ ಆಗಿದೆ. ಇವನ್ನು ಭಾರತದ ಪ್ರಾಚೀನ ಪಿರಮಿಡ್ ಗಳು ಎಂದು ಕರೆಯಬಹುದು. ಸತ್ತವರ ಅಥವಾ ಹಿರಿಯರ ಬಗೆಗೆ ಇದ್ದ ಗೌರವ, ನಂಬಿಕೆಗಳು ಹಾಗೂ ಸತ್ತ ವ್ಯಕ್ತಿ ಮರಳಿ ಭೂಮಿಗೆ ಬರುವನೆಂಬ ಆಶಯಗಳನ್ನು ಇವು ವ್ಯಕ್ತಪಡಿಸುತ್ತವೆ. ಸತ್ತ ವ್ಯಕ್ತಿ ಬಳಸಿದ ಹಾಗೂ ಬಳಸಲು ಬೇಕಾದ ಎಲ್ಲಾ ಬಗೆಯ ಜೀವನಾವಶ್ಯಕ ವಸ್ತು ವಿಶೇಷಗಳನ್ನು ಸಮಾಧಿಗಳಲ್ಲಿ ಇಟ್ಟಿರುವುದನ್ನು ಕಾಣಬಹುದು. ಈ ಸಮಾಧಿಗಳಲ್ಲಿ ಒಂದು ಕುಟುಂಬದ ಜೀವನ ನಿರ್ವಹಣೆಗೆ ಬೇಕಾದ ಎಲ್ಲಾ ಬಗೆಯ ಸಾಮಗ್ರಿಗಳನ್ನು ಕಾಣಬಹುದು.ಇಲ್ಲಿ ಇಡಲಾದ ನೀರು,ಆಹಾರ, ಆಯುಧ ಉಪಕರಣಗಳು ಅಂದಿನ ಜನರಲ್ಲಿದ್ದ ಪುನರ್ಜನ್ಮ ಕಲ್ಪನೆಯನ್ನು ವ್ಯಕ್ತಪಡಿಸುತ್ತದೆ. ಸತ್ತ ವ್ಯಕ್ತಿ ಮರಳಿ ಭೂಮಿಗೆ ಬರುವನೆಂಬ ಆಶಯದಿಂದಲೇ ಇಷ್ಟೆಲ್ಲಾ ಶ್ರಮಪೂರ್ವಕ ಕಾರ್ಯವನ್ನು ಕೈಗೊಂಡಿದ್ದು, ಅಂತೆಯೇ ಅಂದಿನ ಜನರು ಇಟ್ಟುಕೊಂಡಿದ್ದ ಮನುಷ್ಯರೊಂದಿಗಿನ ಸಂಬಂಧಗಳು ಹಾಗೂ ಅವರ ಮನೋಭಾವನೆಗಳನ್ನು ಶಿಲಾಸಮಾಧಿಗಳ ಅಧ್ಯಯನದಿಂದ ಕಂಡುಕೊಳ್ಳಬಹುದು.
ಈ ಶಿಲಾ ಸಮಾಧಿಗಳಿಂದ ಅಂದಿನ ಜನರ ಸಂಘಟನಾ ಶಕ್ತಿ, ಕಟ್ಟಡ ನಿರ್ಮಾಣ ಕೌಶಲ್ಯ, ಶವಸಂಸ್ಕಾರದಲ್ಲಿ ಅವರು ಇಟ್ಟುಕೊಂಡಿದ್ದ ನಂಬಿಕೆ ಆಚರಣೆಗಳು ಅಭಿವ್ಯಕ್ತಗೊಳ್ಳುತ್ತವೆ. ಈ ಸಮಾಧಿಗಳಲ್ಲಿ ಸುಟ್ಟಮಣ್ಣಿನ ಪಾತ್ರೆಗಳು ಮೊದಲಾದವು ದೊರೆತಿದೆ. ಈ ಸ್ಥಳವು ಗ್ರಾಮದ ಮೂಲ ಜನವಸತಿ ಪ್ರದೇಶವಾಗಿದ್ದು, ನಂತರ ಇದನ್ನು ದಕ್ಷಿಣಕ್ಕೆ ಇರುವ ಬೆಟ್ಟದ ಬಳಿಯಲ್ಲಿ ಈಗಿರುವ ಗ್ರಾಮದ ಜಾಗಕ್ಕೆ ಸ್ಥಳಾಂತರ ಮಾಡಲಾಗಿದೆ.
ಹಳೆ ಗ್ರಾಮನಿವೇಶನದ ಹೆಸರು ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ.
ಈ ನೆಲೆಯಲ್ಲಿ ವಿಶೇಷವಾದ ಶಿಲಾ ಸಮಾಧಿಗಳನ್ನು ಶೋಧಿಸಲಾಗಿತ್ತು ಇಲ್ಲಿನ ಆಲದ ಮರದ ಬಳಿಯಲ್ಲಿ ಎಂಟು ಅಡಿ ಎತ್ತರವಾದ ನಿಲ್ಲಿಸುಗಲ್ಲು ಸಮಾಧಿಯು ರಾಮಗಿರಿಯ ಪ್ರಾಗಿತಿಹಾಸದ ವಸತಿ ನೆಲೆಯ ಪಕ್ಕದಲ್ಲಿ ಕಂಡು ಬಂದಿದೆ. ಅದರೊಂದಿಗೆ ಮುರಿದ ಮತ್ತೊಂದು 3 ಅಡಿ ಎತ್ತರದ ನಿಲಿಸುಗಲ್ಲು ಕಾಣಬಹುದು. ಇದರ ಬಳಿಯಲ್ಲಿ ನಡುಗನ್ನಡದಲ್ಲಿ ಬರೆದ ಶಾಸನೋಕ್ತ ವೀರಗಲ್ಲು ಕಂಡು ಬಂದಿದೆ. ಇದರ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಯಬೇಕಿದೆ. ನಿಲಿಸುಗಲ್ಲು ಸಮಾಧಿಗೆ ಆನೆ ಕಟ್ಟುವ ಕಲ್ಲು ಎಂದು ಸ್ಥಳೀಯರು ಕರೆಯುತ್ತಾರೆ. ಕೃಷಿ ಚಟುವಟಿಕೆಯಿಂದ ಇಲ್ಲಿನ ನೆಲೆಯು ಸಂಪೂರ್ಣ ನಾಶವಾಗಿದ್ದು, ಇಲ್ಲಿನ ಶಿಲಾ ಸಮಾಧಿಗಳನ್ನು ಅದರ ಮಹತ್ವ ಅರಿಯದೆ ನಾಶಗೊಳಿಸಲಾಗಿದೆ. 1-2 ವೃತ್ತಾಕಾರದ ಶಿಲಾ ಸಮಾಧಿಗಳು ಮಾತ್ರ ಈಗ ಉಳಿದುಕೊಂಡಿದೆ. ಅದರ ಸುತ್ತಲೂ ಜಾಲಿ ಮರಗಳು ಬೆಳೆದು ಸಂಪೂರ್ಣ ಗೋಚರಿಸದಂತಾಗಿದೆ.
ಭೌಗೋಳಿಕವಾಗಿ ಗಮನಿಸಬಹುದಾದರೆ ಹಿಂದಿನಿಂದಲೂ ಈ ಪ್ರದೇಶ ಹಾಗೂ ಈ ಗ್ರಾಮದ ಸುತ್ತಮುತ್ತಲಿನ ಪ್ರದೇಶವು ಸಂಪೂರ್ಣ ಕುರುಚಲು ಕಾಡು ಹಾಗೂ ಕಿರು ಅರಣ್ಯದ ಪ್ರದೇಶಗಳಿಂದ ಆವೃತವಾಗಿದೆ.
ಜೊತೆಗೆ ಒಣ ಭೂಪ್ರದೇಶ ಇರುವ ಮೈದಾನದ ಜಾಗವಾಗಿದೆ. ಇದು ಮಾನವನ ಜನವಸತಿಗೆ ಪೂರಕವಾದ ವಾತಾವರಣ ಒದಗಿಸುತ್ತದೆ.
ಪೂರಕ ಮಾಹಿತಿ :
ಕನ್ನಡ ವಿಶ್ವವಿದ್ಯಾಲಯದ ಪ್ರಸಾರಂಗ ವಿಭಾಗದ ಹೊಳಲ್ಕೆರೆ ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲಿಕೆ 10
ಸಂಪಾದಕರು: ಡಾ ಎಸ್ ವೈ ಸೋಮಶೇಖರ್.
ಹೊಳಲ್ಕೆರೆ ತಾಲೂಕಿನ ಭೌಗೋಳಿಕತೆ ಮತ್ತು ಪ್ರಾಗಿತಿಹಾಸ.
ಲೇಖಕರು: ಡಾ. ಕೆ. ಎಸ್.ಶರತ್ ಬಾಬು.




















