ಚಿತ್ರದುರ್ಗ : ವ್ಯವಸಾಯ ಮನೆಮಕ್ಳೆಲ್ಲ ಸಾಯ ಎಂಬ ಗಾದೆ ಮಾತಿದೆ. ಆದರೆ ಅದು ಇತ್ತೀಚಿನ ದಿನಗಳಲ್ಲಿ ಬದಲಾವಣೆಯೂ ಆಗಿದೆ. ಕಷ್ಟ ಪಟ್ಟರೆ ಭೂತಾಯಿ ಕೈ ಹಿಡಿತಾಳೆ ಅಂತ. ಅದಕ್ಕೂ ಎಲ್ಲಾ ವ್ಯವಸ್ಥೆ ಬೇಕಾಗುತ್ತದೆ. ಸಾಲ ಸೋಲ ಮಾಡಿ, ಭೂಮಿ ಹಾಕುವ ರೈತನಿಗೆ ಜೀವನ ಕಷ್ಟವೇ. ಚಿತ್ರದುರ್ಗ ಜಿಲ್ಲೆಯಲ್ಲಿ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. 48 ವರ್ಷದ ನಿರಂಜನ ಮೂರ್ತಿ ಆತ್ಮಹತ್ಯೆ ಮಾಡಿಕೊಂಡ ರೈತ.
ಬೆಳೆ ಕೈಕೊಟ್ಟ ಹಿನ್ನೆಲೆ ನಿರಂಜನ ಮೂರ್ತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ತನ್ನ ಜಮೀನಿನಲ್ಲಿಯೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಈ ಘಟನೆ ನಡೆದಿರೋದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೊನ್ನೂರು ಗ್ರಾಮದಲ್ಲಿ. ರೈತ ನಿರಂಜನ ಮೂರ್ತಿ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಅದರಲ್ಲೂ ಚಿತ್ರದುರ್ಗ ಟೈಗರ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ 7 ಲಕ್ಷ ರೂಪಾಯಿ, ಪ್ರಗತಿ ಗ್ರಾಮೀಣ ಬ್ಯಾಂಕ್ ನಲ್ಲಿ 1 ಲಕ್ಷ ರೂಪಾಯಿ ಸಾಲ ಮಾಡಿದ್ದರಂತೆ. ಆದರೆ ಜೀವನ ಪೂರ್ತಿ ಬೆಳೆದ ಬೆಳೆಗೆ ಉತ್ತಮ ದರ ಸಿಕ್ಕಿಲ್ಲದ ಕಾರಣ, ಮಾಡಿದ ಸಾಲವನ್ನು ತೀರಿಸುವುದಕ್ಕೆ ಆಗಿಲ್ಲ. ಸಾಲ ಕೊಟ್ಟವರು ಸುಮ್ಮನೆ ಇರೋದಕ್ಕೆ ಸಾಧ್ಯವಾ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಡೆತ್ ನೋಟ್ ನಲ್ಲಿ ನನ್ನ ಕುಟುಂಬ ನಡು ನೀರಿನಲ್ಲಿ ಬಿಟ್ಟು ಹೋಗುತ್ತಿದ್ದೇನೆ. ಮಡದಿ ಮಕ್ಕಳು ನನ್ನನ್ನು ಕ್ಷಮಿಸಿ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ತಳಕು ಪಿಎಸ್ಐ ಶಿವಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.









