Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಪ್ರತಿಭಟನೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 25 : ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ತಯಾರಕಿಯರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಮನವಿ ಸಲ್ಲಿಸಿದರು.
ಯೂನಿಯನ್ ಪಾರ್ಕ್‍ನಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.

ಎಐಟಿಯುಸಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಬಿಎಲ್‍ಓ. ಜವಾಬ್ದಾರಿಯನ್ನು ವಹಿಸುವುದರಿಂದ ಒತ್ತಡ ಜಾಸ್ತಿಯಾಗುತ್ತದೆ. ಕನಿಷ್ಟ ವೇತನ ಜಾರಿಗಾಗಿ ಅನೇಕ ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಖಾನಾಪುರಕ್ಕೆ ಆಗಮಿಸಿದ್ದ ರಾಹುಲ್‍ಗಾಂಧಿ ವೇತನ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ್ದರೂ ಇದುವರೆವಿಗೂ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಜೈಲಿನಲ್ಲಿರುವ ಖೈದಿಗಳಿಗೆ ದಿನಕ್ಕೆ ನಾಲ್ಕು ನೂರರಿಂದ ಐದು ನೂರು ರೂ. ಕೂಲಿ ಸಿಗುತ್ತಿದೆ. ತಾಯಿ ಮತ್ತು ಮಕ್ಕಳ ಪಾಲನೆಯಲ್ಲೇ ಜೀವನ ಕಳೆಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ತಿಂಗಳಿಗೆ 12 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಕನಿಷ್ಟ 21 ಸಾವಿರ ರೂ.ಗಳ ವೇತನ ನೀಡಿ ಜೀವನ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.

25 ವರ್ಷಗಳಿಂದಲೂ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಕಿರಿಯ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರಿಗೆ ಬಾಕಿಯಿರುವ ವೇತನವನ್ನು ಕೂಡಲೆ ಬಿಡುಗಡೆಗೊಳಿಸಿ ವೇತನ ಹೆಚ್ಚಿಸಬೇಕು. ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದಾಗ ಬಿಸಿಯೂಟ ತಯಾರಕರನ್ನು ಅಡುಗೆ ಕೆಲಸದಿಂದ ಬಿಡುಗಡೆಗೊಳಿಸಿದಲ್ಲಿ ಇಡಿಗಂಟು ನೀಡಬೇಕು. ಬಿಸಿಯೂಟ ತಯಾರಕರನ್ನು ಸ್ಕೀಮ್ ವರ್ಕರ್ಸ್ ಎನ್ನುವುದನ್ನು ಬದಲಾಯಿಸಿ ಕಾರ್ಮಿಕರೆಂದು ಘೋಷಿಸಬೇಕು. ನಿವೃತ್ತಿಯಾದ ಬಿಸಿಯೂಟ ತಯಾರಕರಿಗೆ ಪಿಂಚಣಿ ಕೊಡದಿರುವುದರಿಂದ 40 ಸಾವಿರ ರೂ. ಇಡಿಗಂಟು ಬದಲಿಗೆ ಎರಡು ಲಕ್ಷ ರೂಪಾಯಿಗಳನ್ನು ಕೊಡಬೇಕು. ಮೊಟ್ಟೆ ಸುಲಿಯುವ ಭತ್ಯೆಯನ್ನು ಪ್ರತಿ ಮೊಟ್ಟೆಗೆ ಒಂದು ರೂ. ನೀಡಬೇಕೆಂದು ಆಗ್ರಹಿಸಿದರು.

ಕಾಂ.ಎಸ್.ಭಾಗ್ಯಮ್ಮ, ಕಾಂ.ಸಾವಿತ್ರಮ್ಮ, ಕಾಂ.ಟಿ.ಆರ್.ಉಮಾಪತಿ, ಕಾಂ.ರಾಧಮ್ಮ, ಕಾಂ.ವಿನೋಧಮ್ಮ, ಕಾಂ.ಪರ್ವಿನ್‍ಭಾನು, ಕಾಂ.ಕಾಂತಮ್ಮ, ಕಾಂ.ರಜಿಯಾ, ಕಾಂ.ನಾಗಮ್ಮ
ಕಾಂ.ಗಿರಿಜಮ್ಮ, ಕಾಂ.ತಿಪ್ಪಮ್ಮ, ಕಾಂ.ಈ.ಸತ್ಯಕೀರ್ತಿ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now