ದಾವಣಗೆರೆ: ದಕ್ಷಿಣ ಕ್ಷೇತ್ರದ ಉಪಚುನಾವಣೆ ಇರುವ ಕಾರಣ ಕಾಂಗ್ರೆಸ್ ನಾಯಕರೆಲ್ಲಾ ದಾವಣಗೆರೆಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಸಮರ್ಥ್ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರು, ತಾತನಂತೆ ಮೊಮ್ಮಗ ಕೂಡ ಗೆದ್ದು ಬಾರ್ತಾರೆ ಎಂಬ ಮಾತನ್ನ ಹೇಳಿದ್ದಾರೆ.
ಮುಖ್ಯಮಂತ್ರಿಗಳು, ನಾನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ನಾವೆಲ್ಲಾ ಸೇರಿ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಒಮ್ಮತದಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇವತ್ತು ನಮ್ಮ ಯುವ ನಾಯಕ ವಿದೇಶದಲ್ಲಿ ಕಲಿತು, ಗ್ರಾಮೀಣ ಜನರ ಮತ್ತು ನಗರ ಜನರ ಸೇವೆಯನ್ನು ಮಾಡಬೇಕು ಅಂತ ಹೇಳಿ, ತನ್ನದೇ ಆದ ಆಸೆ ಆಕಾಂಕ್ಷೆಗಳನ್ನ ಇಟ್ಟುಕೊಂಡು, ಸಮಾಜ ಸೇವೆ ಮಾಡಲು ಬಂದಿದ್ದಾರೆ. ಅವರ ವಿದ್ಯಾಭ್ಯಾಸಕ್ಕಾಗಿ ಮತ್ತೆ ವಿದೇಶಕ್ಕೆ ಕಳುಹಿಸಬೇಕು ಎಂದು ಬಂದಾಗ ನಮ್ಮ ಶಿವಶಂಕರಪ್ಪ ಅವರು ಇಲ್ಲ, ನೀನು ಇಲ್ಲಿಯೇ ಕಲಿತು, ಇಲ್ಲಿಯೇ ವ್ಯವಹಾರ ಮಾಡು ಅಂತ ಮಾರ್ಗದರ್ಶನ ನೀಡಿದ್ದಾರೆ.

ಇಂದು ಈ ಕ್ಷೇತ್ರದ ಜನತೆ, ನಮ್ಮ ಕಾರ್ಯಕರ್ತರು, ಮುಖಂಡರು ಅವರ ಹೆಸರನ್ನು ಸೂಚಿಸಿದ್ದರು. ಹೀಗಾಗಿ ನಾನು, ನಮ್ಮ ಮುಖ್ಯಮಂತ್ರಿಗಳು, ಪಕ್ಷದ ವರಿಷ್ಠರೆಲ್ಲ ಚರ್ಚೆ ಮಾಡಿ, ಎಲ್ಲಾ ಶಾಸಕರ ಜೊತೆಗೂ ಚರ್ಚೆ ಮಾಡಿ, ಈ ನಿರ್ಧಾರಕ್ಕೆ ಬಂದಿದ್ದೇವೆ. ಮುಸ್ಲಿಂ ಬಾಂಧವರು ಕೂಡ ಮನವಿ ಮಾಡಿದ್ದರು. ಆದರೆ ನಾವೂ ಲೆಕ್ಕಚಾರ ಮಾಡಿ ನೋಡಿದೆವು. ನಮ್ಮ ಕಾಂಗ್ರೆಸ್ ಪಕ್ಷದ್ದು ಮೊದಲಿನಿಂದಲೂ ಒಂದು ಲೆಕ್ಕಚಾರವಿದೆ. ಅವರ ಕುಟುಂಬಕ್ಕೆ ನೀಡುವ ಕೆಲಸ ಮಾಡಿಕೊಂಡು ಬಂದಿದ್ದೇವೆ. ಇಂದು ಕೂಡ ಅದನ್ನು ಮುಂದುವರೆಸಿದ್ದೇವೆ ಎಂದಿದ್ದಾರೆ.



















