ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ರಂಗೇರಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಯ್ಕೆ ಕಗ್ಗಂಟು ತೀವ್ರಗೊಂಡಿದೆ. ಟಿಕೆಟ್‌ಗಾಗಿ ಶಾಮನೂರು ಕುಟುಂಬ ಮತ್ತು ಮುಸ್ಲಿಂ ಮುಖಂಡರ ನಡುವೆ ತಿಕ್ಕಾಟ ಉಂಟಾಗಿದೆ.
ಹೀಗಿರುವಾಗಲೇ ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಸಮರ್ಥ್ ಶಾಮನೂರು ಬಿ ಫಾರ್ಮ್ ಸಿಗುವ ಮೊದಲೇ ಎರಡೆರಡು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಮರ್ಥ್ ಶಾಮನೂರು ಅವರು ತಮ್ಮ ನಾಮಪತ್ರದೊಂದಿಗೆ ಆಸ್ತಿ ವಿವರಗಳ ಅಫಿಡವಿಟ್ ಸಲ್ಲಿಸಿದ್ದಾರೆ.

27 ವರ್ಷದ ಯುವ ಉದ್ಯಮಿ ಸಮರ್ಥ್ ಅವರು ಒಟ್ಟು ₹4.25 ಕೋಟಿಗೂ ಅಧಿಕ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿ ಹೊಂದಿರುವುದಾಗಿ ತಮ್ಮ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪುತ್ರರಾಗಿರುವ ಸಮರ್ಥ್, ರಾಜಕೀಯಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅಫಿಡವಿಟ್‌ನಲ್ಲಿ ನೀಡಿರುವ ಮಾಹಿತಿಯಂತೆ, ಇವರ ಬಳಿ ₹2.17 ಕೋಟಿ ಮೌಲ್ಯದ ಚರ ಆಸ್ತಿ ಹಾಗೂ ₹2.08 ಕೋಟಿ ಮೌಲ್ಯದ ಕೃಷಿ ಭೂಮಿ ಸೇರಿದಂತೆ ಸ್ಥಿರ ಆಸ್ತಿಯಿದೆ.
ಸಮರ್ಥ್ ಅವರ ಹೆಸರಿನಲ್ಲಿ ₹8.35 ಲಕ್ಷ ನಗದು ಹಣವಿದ್ದು, ವಿವಿಧ ಬ್ಯಾಂಕ್ ಖಾತೆಗಳಲ್ಲಿ ಹೂಡಿಕೆ ಹಾಗೂ ₹14.45 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಹೊಂದಿದ್ದಾರೆ. ದಾವಣಗೆರೆ ತಾಲ್ಲೂಕಿನ ಆನೇಕೊಂಡ ಮತ್ತು ಬೆತೂರು ಗ್ರಾಮಗಳಲ್ಲಿ ಒಟ್ಟು 6 ಎಕರೆ 14 ಗುಂಟೆ ಕೃಷಿ ಭೂಮಿಯನ್ನು ಅವರು ಹೊಂದಿದ್ದಾರೆ.
ಆಸ್ತಿಯ ಜೊತೆಗೆ ಸಮರ್ಥ್ ಅವರ ಹೆಸರಿನಲ್ಲಿ ಒಟ್ಟು ₹3.52 ಕೋಟಿ ಮೊತ್ತದ ಸಾಲ ಹಾಗೂ ಹೊಣೆಗಾರಿಕೆಗಳಿವೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. 2024-25ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಅವರು ₹96.05 ಲಕ್ಷ ವಾರ್ಷಿಕ ಆದಾಯವನ್ನು ತೋರಿಸಿದ್ದಾರೆ.
ಅಭ್ಯರ್ಥಿಯ ವಿರುದ್ಧ ಯಾವುದೇ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ ಹಾಗೂ ಯಾವುದೇ ನ್ಯಾಯಾಲಯದಿಂದ ಶಿಕ್ಷೆಯಾಗಿಲ್ಲ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಇವರು, ದಾವಣಗೆರೆ ಉತ್ತರ ಕ್ಷೇತ್ರದ ಮತದಾರರಾಗಿದ್ದಾರೆ.

















