ಭದ್ರಾ ಮೇಲ್ದಂಡೆಗೆ ಅನುದಾನ ಬಿಡುಗಡೆಗೆ ಆಗ್ರಹ ; ಮಠಾಧೀಶರು, ಮಹಿಳೆಯರು, ದಲಿತರು ಭಾಗಿ

4 Min Read

ಸುದ್ದಿಒನ್, ಚಿತ್ರದುರ್ಗ, ಮಾ. 05: ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವಂತೆ ಆಗ್ರಹಿಸಿ ಒನಕೆ ಓಬವ್ವ ವೃತ್ತದಲ್ಲಿ ರೈತರ ಉಪವಾಸ ಸತ್ಯಾಗ್ರಹದಲ್ಲಿ ಗುರುವಾರ ಅನೇಕ ಸಂಘಟನೆಗಳ ಪದಾಧಿಕಾರಿಗಳು, ಸ್ವಾಮೀಜಿಗಳು ಪಾಲ್ಗೊಂಡು ಧ್ವನಿಗೂಡಿಗೂಡಿಸಿದರು.

 

ಒಂಟಿಕಲ್ಲು ಮಠದ ಶ್ರೀ ತಿಪ್ಪಾರೆಡ್ಡಿ ಸ್ವಾಮೀಜಿ, ಬಂಜಾರ ಗುರುಪೀಠದ ಶ್ರೀ ನಂದಮಸಂದ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಬಯಲುಸೀಮೆ ಚಿತ್ರದುರ್ಗ ದಿಗ್ಗಜ ಸಾಹಿತಿಗಳು,
ನಟರನ್ನು ನಾಡಿಗೆ ಕೊಡುಗೆ ನೀಡಿದೆ. ಇತಿಹಾಸ ಕ್ಷೇತ್ರದ ಕಣಜವಾಗಿದೆ. ಆದರೆ, ಇಲ್ಲಿನ ಜನರ ಭವಣೆ ಹೇಳತೀರದಾಗಿದೆ ಎಂದರು.

 

ಕುಡಿಯುವ ನೀರಿಗೂ ಪರಿತಪಿಸುವ ಕಾಲ ಎದುರಾಗಿದೆ. ಬೆಳೆ ನಷ್ಟ ಕಾರಣಕ್ಕೆ ಕೃಷಿಕರು ಸಾಲಗಾರರಾಗಿದ್ದಾರೆ. ಇವೆಲ್ಲವೂ ಸರ್ಕಾರಕ್ಕೆ ಗೊತ್ತಿದೆ. ಆದರೂ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ದೂರಿದರು. ಇಲ್ಲಿನ ಜನರ ಬದುಕು ಉನ್ನತಗೊಳಿಸಲು ಏಕೈಕ ಮಾರ್ಗ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದು. ಇದಕ್ಕಾಗಿ ಬಜೆಟ್‌ನಲ್ಲಿ ದೊಡ್ಡಮೊತ್ತದ ಹಣ
ತೆಗೆದಿರಿಸಬೇಕು. ಕೇಂದ್ರ ಸರ್ಕಾರ ಘೋಷಿಸಿರುವ 5,300 ಕೋಟಿ ರೂ. ಬಿಡುಗಡೆಗೆ ತಕ್ಷಣ ಮುಂದಾಗಬೇಕೆಂದು ಆಗ್ರಹಿಸಿದರು.

 

ಇಲ್ಲಿನ ಜನರಿಗೆ ನೀವು ಯಾವುದನ್ನೂ ಪುಕ್ಕಟೆ ನೀಡಬೇಡಿ. ನೀರೊಂದು ನೀವು ಕೊಟ್ಟರೇ ನಾವುಗಳೇ ನಿಮಗೆ ಆಹಾರ ಕೊಟ್ಟು, ವಿದ್ಯುತ್ ಸೇರಿ ಎಲ್ಲವನ್ನೂ ಖರೀದಿಸಿ, ನಿಮ್ಮ ಖಜಾನೆ ತುಂಬಿಸುತ್ತೇವೆ ಎಂದರು.

 

ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ದೇಶದಲ್ಲಿ ಉಪವಾಸ ಚಳವಳಿಯೇ ಕಣ್ಮರೆ ಆಗಿರುವ ಸಂದರ್ಭ ಜಿಲ್ಲೆಯ ರೈತರು ಅನ್ನ-ನೀರು ತೊರೆದು ಧರಣಿ ಕುಳಿತಿರುವುದು ಬದ್ಧತೆಗೆ ಸಾಕ್ಷಿಯಾಗಿದೆ. ಇವರ ಹೋರಾಟವನ್ನೇ ಹತ್ತಿಕ್ಕುವ ಕೆಲಸ ನಡೆಯುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.

 

ನಾವು ನೀರು ಕೇಳಿದ್ರೆ ಆಳುವ ವರ್ಗ ವಿಷ ಕೊಡ್ತಿದೆ. ಇಲ್ಲಿನ ರೈತರಿಗೆ ಹೆಣ್ಣು ಕೊಡದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದಲೇ ನಾವೆಲ್ಲರೂ ಈಗಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೇ ನಮ್ಮ ಮುಂದಿನ ಪೀಳಿಗೆ ಬದುಕು ದುಸ್ಥರವಾಗಲಿದೆ ಎಂದು ಎಚ್ಚರಿಸಿರು.

 

ಮಾದಿಗ ಮೀಸಲಾತಿ ಹೋರಾಟಗಾರ ಎಂ.ಆರ್.ಶಿವರಾಜ್ ಮಾತನಾಡಿ, ನಿರಂತರ ಹೋರಾಟ ನಡೆದಿವೆ. ಆದರೂ ಹಣ ಬಿಡುಗಡೆ ಆಗುತ್ತಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ಪರಸ್ಪರ ಆರೋಪದಲ್ಲಿ ಮುಳುಗಿವೆ ಎಂದು ದೂರಿದರು. ದೇಶದಲ್ಲಿ ರಾಷ್ಟ್ರೀಯ ಮನ್ನಣೆಗೆ ಅರ್ಹವಾಗಿರುವ ಏಕೈಕ ಯೋಜನೆ ಭದ್ರಾ ಮೇಲ್ದಂಡೆ ಆಗಿದೆ. ಆದರೆ, ಘೋಷಿಸುತ್ತಿಲ್ಲ, 5,300 ಕೋಟಿ ರೂ. ಹಣವನ್ನು ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು.

ರೈತಸಂಘ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ನೀರೊಂದು ಕೊಟ್ಟರೇ ಭೂಮಿಯಲ್ಲಿ ಬಿತ್ತಿ, ಬೆಳೆದು ನಿಮಗೆ ಆಹಾರ ಕೊಡ್ತಿವೆ. ಬಜೆಟ್‌ನಲ್ಲಿ ಹಣ ತೆಗೆದಿಡದಿದ್ದರೇ ಪೊಲೀಸ್, ಅಧಿಕಾರಿಗಳಿಗೆ ಮಾಹಿತಿ ಕೊಡದೆ ದಿಢೀರನೇ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ತೀವ್ರ ಸ್ವರೂಕ್ಕೆ ಹೋರಾಟವನ್ನು ತೆಗೆದುಕೊಂಡು ಹೋಗಲಿದ್ದೇವೆ.
ಅದಕ್ಕೂ ಮುನ್ನವೇ ಎಚ್ಚೇತ್ತುಕೊಳ್ಳಿ ಎಂದರು.

 

ಉಪವಾಸ ನಿರತ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ನಾಲ್ಕು ದಿನ ಉಪವಾಸ ಕುಳಿತಿದ್ದೇವೆ. ನಮ್ಮ ತೆರಿಗೆ ಹಣದಲ್ಲಿ ಸಂಬಳ, ಕಾರು, ಮನೆ ಪಡೆದಿರುವ ಜಿಲ್ಲಾಧಿಕಾರಿ ಸೌಜನ್ಯಕ್ಕೂ ಭೇಟಿ ಮಾಡಿ ಆರೋಗ್ಯ ವಿಚಾರಿಸಿಲ್ಲ. ಇಂತಹ ಅಧಿಕಾರಿಗಳು ಜಿಲ್ಲೆಯಿಂದ ಬೇರೆಡೆ ವರ್ಗಾ
ಅಗಬೇಕು. ಇಲ್ಲದಿದ್ದರೇ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಹೇಳಿದರು.

ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಬೇಕು, ಹೊಳಲ್ಕೆರೆ ತಾಲ್ಲೂಕನ್ನು ಯೋಜನೆ ವ್ಯಾಪ್ತಿಗೆ ಸೇರಿಸಬೇಕು. ವಿವಿ ಸಾಗರ, ಗಾಯತ್ರಿ ಜಲಾಶಯಕ್ಕೆ ಇಂತಿಷ್ಟು ನೀರು ಕಡ್ಡಾಯವಾಗಿ ಹರಿಸಲೇಬೇಕು. 2027ರೊಳಗೆ ಕಾಮಗಾರಿ
ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.

 

ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ, ಜಿಲ್ಲೆಯಲ್ಲಿ ವಿಷಕಾರಕ ನೀರು ಸೇವನೆ ಹೆಚ್ಚಾಗಿದೆ ಎಂದು ಅಂತಾರಾಷ್ಟ್ರೀಯ ವರದಿಗಳು ಹೇಳಿವೆ. ಆದರೂ
ಇಲ್ಲಿನ ಜನರಿಗೆ ನೀರು ಕೊಡುವ ಕೆಲಸ ಆಗುತ್ತಿಲ್ಲ. ಫ್ಲೋರೈಡ್ ನೀರು ಕಾರಣಕ್ಕೆ ಜನ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದರು.

ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ, ಅಂತರ್ಜಲ ಕುಸಿದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರಗಾಲವೇ ನಮ್ಮ ಬದುಕಾಗಿದೆ. ನಮ್ಮನ್ನು ಅಪಾಯದಿಂದ ಪಾರು ಮಾಡಬೇಕಾದ ಸರ್ಕಾರಗಳೇ ಕಣ್ಮುಚ್ಚಿ ಕುಳಿತಿರುವುದು ನೋವಿನ ಸಂಗತಿ ಎಂದು ಹೇಳಿದರು.
ಕೇಂದ್ರ ಸರ್ಕಾರಕ್ಕೆ ಹಣ ಘೋಷಿಸುವಂತೆ ನಾವ್ಯಾರೂ ಕೇಳಿರಲಿಲ್ಲ. ಅವರುಗಳೇ ಚುನಾವಣೆ ಸಂದರ್ಭ 5,300 ಕೋಟಿ ರೂ. ಘೋಷಿಸಿದರು, ರಾಷ್ಟೀಯ ಯೋಜನೆ ಮನ್ನಣೆ ಕೊಡ್ತಿವೆ ಅಂತಾ
ಬಹಿರಂಗವಾಗಿ ಹೇಳಿ, ಈಗ ಇಲ್ಲಸಲ್ಲದ ನೆಪ ಹೇಳುವುದು ಬಯಲುಸೀಮೆ ಜನರನ್ನು ಕತ್ತಲಿಗೆ ನೂಕಿದಂತೆ. ನಾವು ಬೀದಿಗಿಳಿಯುವ ಮುನ್ನವೇ ಹಣ ಬಿಡುಗಡೆ ಮಾಡಬೇಕು ಎಂದು
ಒತ್ತಾಯಿಸಿದರು.

ಕಾರ್ಮಿಕ ಸಂಘಟನೆ ಮುಖಂಡ ಪೆನ್ನಯ್ಯ, ಮುಖಂಡರಾದ ರಮೇಶ್ ಕೋಟಿ, ಹುಲ್ಲೂರು ಕುಮಾರಸ್ವಾಮಿ, ಕಣ್ಮೇಶ್, ದೇವರಾಜ್, ಕಿರಣ್, ಸಿದ್ರಾಮಣ್ಣ, ಸಣ್ಣತಿಮ್ಮಣ್ಣ, ಸಣ್ಣೀರಪ್ಪ, ನಿಂಗಪ್ಪ, ಪ್ರಸನ್ನ, ವೆಂಕಟೇಶ್, ವೀರಭದ್ರಪ್ಪ, ಮಲ್ಲಾಪುರ ತಿಪ್ಪೇಸ್ವಾಮಿ, ರಂಗಣ್ಣ, ತಿಪ್ಪೇಸ್ವಾಮಿ, ಕೆಪಿಎಂ ಗಣೇಶಯ್ಯ, ಹುಣಸೆಕಟ್ಟೆ ರಾಜು, ತಿಪ್ಪೇಸ್ವಾಮಿ, ಹಂಪಯ್ಯನಮಾಳಿಗೆ ಧನಂಜಯ್ಯ, ನರೇನಹಳ್ಳಿ ಅರುಣ್‌ಕುಮಾರ್, ಶ್ರೀನಿವಾಸ ನಾಯ್ಕ್ ಇತರರಿದ್ದರು.

 

ಮಹಿಳೆಯರು ಆಕ್ರೋಶ : ಕೆ.ಸಿ.ರೊಪ್ಪ ಸೇರಿ ವಿವಿಧೆಡೆಯ ಮಹಿಳೆಯರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು
ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್, ನಿಮಗೆ ನಾವು ಕೇಳ್ತಿರೋದು ಕುಡಿಯೋದಿಕ್ಕೆ ನೀರು. ಕೈಮುಗಿದು ಕೇಳ್ತಿವಿ ಭದ್ರಾ ಕಾಮಗಾರಿ ಪೂರ್ಣಗೊಳಿಸಲು ಹಣ ಕೊಡಿ. ಬೇಕೆ ಕೆಲಸ ಮುಗಿಸಿ ಎಂದು ಬೇಡಿಕೊಂಡರು. ನಾವು ಎಂದಿಗೂ ಬೇಡಿದ ಜನರಲ್ಲಿ, ಕೊಟ್ಟ ಕೈಗಳು ನಮ್ಮವು. ನಾವು ಬೆಳೆ ಬೆಳೆಯದಿದ್ದರೆ ಯಾರು ಉಳಿಯೋದೇ ಇಲ್ಲ. ಈ ಸತ್ಯ ಗೊತ್ತಿದ್ದೂ ನಮಗೆ ನೀರು ಕೊಡಲು ಯಾಕಿಷ್ಟು
ಸತಾಯಿಸುತ್ತಿದ್ದೀರಿ. ಚುನಾವಣೆ ವೇಳೆ ನಮ್ಮೂರಿಗೆ ಬಂದ್ರೆ ಗ್ರಾಮಕ್ಕೆ
ಬಿಟ್ಟುಕೊಳ್ಳದ ಪರಿಸ್ಥಿತಿ ತಂದೊಡ್ಡಿಕೊಳ್ಳಬೇಡಿ. ಈಗಲೇ ಎಚ್ಚೆತ್ತುಕೊಳ್ಳಿ ಎಂದು ಹೇಳಿದರು.

Share This Article
Enable Notifications OK No thanks