ಅತ್ತೆ ಸೊಸೆಯರು ಡಿಕ್ಕಿ ಹೊಡೆಯುವ ವಿಶೇಷ ಹಬ್ಬದ ಆಚರಣೆ ಬಗ್ಗೆ ಕೇಳಿದ್ದೀರಾ ?ಆದರೆ ಇದು ಯಾವುದೋ ಸೇಡು ಅಥವಾ ಜಗಳದಿಂದಲ್ಲ. ಈ ಹಬ್ಬದ ವಿಶೇಷತೆ ಏನು ಗೊತ್ತಾ?. ಅತ್ತಿಗೆ, ನಾದಿನಿಯರು ಪರಸ್ಪರ ತಲೆಗಳನ್ನ ಹಿಡಿದುಕೊಂಡು ಡಿಕ್ಕಿ ಹೊಡೆಯುವ ಹಬ್ಬವನ್ನು ಗ್ರಾಮಸ್ಥರು ಆಚರಿಸುತ್ತಾರೆ.ಗ್ರಾಮ ದೇವರ ಸಮ್ಮುಖದಲ್ಲಿ ಹೆಣ್ಣುಮಕ್ಕಳು-ಸೊಸೆಯಂದಿರು ತಲೆ ಹಿಡಿದು ಡಿಚ್ಚಿ ಹೊಡೆದುಕೊಳ್ಳುತ್ತಾರೆ.
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸಿ.ಎನ್. ಮಾಳಿಗೆ ಗ್ರಾಮದಲ್ಲಿ ಇಂತಹ ಸಂಭ್ರಮದ ಹಬ್ಬ ಆಚರಣೆ ಮಾಡಲಾಗುತ್ತದೆ. ಈ ಗ್ರಾಮದಲ್ಲಿ ಪ್ರತಿ ಕಾರ್ತಿಕ ಮಾಸದಲ್ಲಿ ಬುಡಕಟ್ಟು ಜನಾಂಗದ ಆರಾಧ್ಯ ದೈವ ಅಹೋಬಲ ನರಸಿಂಹಸ್ವಾಮಿ ಜಾತ್ರೆ ಆಚರಣೆ ಮಾಡುತ್ತಾರೆ, ಆಗ, ಅತ್ತಿಗೆ-ನಾದಿನಿಯರು ಡಿಕ್ಕಿ ಹಬ್ಬ ಇಲ್ಲಿನ ವಿಶೇಷವಾಗಿದೆ. ಹೀಗೆ ಡಿಕ್ಕಿ ಹೊಡೆಯುವ ಮೂಲಕ ತಮ್ಮ ಕುಟುಂಬದಲ್ಲಾದ ಹಳೆ ವೈಷಮ್ಯ ಮರೆತು ಸುಖಜೀನವ ನಡೆಸಲಿ ಎಂಬುದು ನಾಯಕ್ ಸಮುದಾಯದ ಹಿರಿಯರು ಪರಂಪರಾಗತವಾಗಿ ನಡೆಸಿಕೊಂಡು ಬಂದ ವಿಶಿಷ್ಟ ಪದ್ಧತಿ ಇದಾಗಿದೆ.

ಇನ್ನೂ ಪುರಾತನ ಕಾಲದಿಂದಲೂ ಈ ಹಬ್ಬವನ್ನು ಗ್ರಾಮದಲ್ಲಿ ಆಚರಣೆ ಮಾಡುತ್ತಿದ್ದು, ಗ್ರಾಮದ ಯುವಕರು ಹೆಣ್ಣುಮಕ್ಕಳನ್ನು ಕುಣಿಯುತ್ತ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳುತ್ತಾರೆ. ದೇವರಿಗೆ ಹರಕೆ ಹೊತ್ತಂತೆ, ಮಣೇವು ಕಾರ್ಯಕ್ರಮ ನೆರವೇರಿಸಿ, ಯುವಕರು ಬಾಳೆಹಣ್ಣು ಬೆಲ್ಲದ ಪ್ರಸಾದ ಸ್ವೀಕರಿಸಿ ಗ್ರಾಮಸ್ಥರಿಗೆ ಪ್ರಸಾದ ಹಂಚುತ್ತಾರೆ. ಈ ರೀತಿ ಭಕ್ತರ ಹರಕೆ ನೆರವೇರಿಸುವ ನರಸಿಂಹಸ್ವಾಮಿಗೆ ಭಕ್ತರು ಸಾಮೂಹಿಕವಾಗಿ ಬಾಳೆಹಣ್ಣಿನ ಗೊನೆ ಸಮರ್ಪಣೆ ಮಾಡುತ್ತಾರೆ. ಈ ಮೂಲಕ ಗ್ರಾಮದ ಸಮುದಾಯದ ಎಲ್ಲಾ ಜನತೆ ಒಂದೆಂಬ ಭಾವನೆಯೊಂದಿಗೆ ಸೇರಿ ಜಾತ್ರೆ ಮಾಡ್ತಾರೆ. ಈ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ದೂರದೂರುಗಳಿಂದ ನಾದಿನಿಯರು ಬಂದ್ರೆ, ಅಕ್ಕಪಕ್ಕದ ಗ್ರಾಮಸ್ಥರೂ ಭಾಗಿಯಾಗುವುದು ಇನ್ನೂ ವಿಶೇಷವಾಗಿದೆ.












