ದಂತ ಆರೋಗ್ಯ ಮತ್ತು ಮೂಢನಂಬಿಕೆಗಳು : ಸತ್ಯ–ಮಿಥ್ಯಗಳ ವಿವರಣೆ

5 Min Read

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ಆರೋಗ್ಯ ಕ್ಷೇತ್ರವು ದಿನೇ ದಿನೇ ವೈಜ್ಞಾನಿಕವಾಗಿ ವೇಗವಾಗಿ ಬೆಳೆಯುತ್ತಿದೆ. ವಿಜ್ಞಾನ ಇಂದು ಸಾಮಾನ್ಯ ವ್ಯಕ್ತಿಯ ದಿನನಿತ್ಯದ ಆರೋಗ್ಯ ಕಾಪಾಡುವಲ್ಲಿ ಯಶಸ್ವಿಯಾಗುತ್ತ ಸಾಗುತ್ತಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಇಂದು ಆರೋಗ್ಯ ವಿಜ್ಞಾನದ ದೆಸೆಯಿಂದ ದೊರಕುವಂತಾಗಿದೆ. ಹತ್ತಾರು ದೊಡ್ಡ ದೊಡ್ಡ ಕಾಯಿಲೆಗಳನ್ನು ಇಂದು ತಡೆಯ ಬಲ್ಲಂತ ಔಷಧಿಗಳು ಲಭ್ಯವಿದೆ. ಇಂತಹ ಆಧುನಿಕ ಹಾಗೂ ಬದಲಾಗುತ್ತಿರುವ ದಿನಮಾನಗಳಲ್ಲಿ ಕೂಡ ಕೆಲವರು ತಮ್ಮ ಅಜ್ಞಾನ,ತಪ್ಪು ನಂಬಿಕೆ, ಮೂಢನಂಬಿಕೆಗಳಿಂದ… ಆರೋಗ್ಯವನ್ನು ಹದಗೆಡಿಸಿಕೊಳ್ಳುತ್ತಾರೆ, ಜೊತೆಗೆ ಇತರರ ಆರೋಗ್ಯಕ್ಕೂ ಕುತ್ತು ತರುತ್ತಾರೆ.

 

ಅದರಲ್ಲಿ ದಂತ ಆರೋಗ್ಯದ ಕ್ಷೇತ್ರವು ಹೊರತಲ್ಲ. ಮಾನವನ ದೇಹದ ಆರೋಗ್ಯ ಎಷ್ಟು ಮುಖ್ಯವೋ ಮಾನವನ ದಂತ ಆರೋಗ್ಯವು ಅಷ್ಟೇ ಮುಖ್ಯವಾಗಿರುತ್ತದೆ. ಇಂತಹ ಬಾಯಿ ಮತ್ತು ದಂತ ಆರೋಗ್ಯವು ಕೆಲವು ತಪ್ಪು ನಂಬಿಕೆಗಳಿಂದ ಹಾಳಾಗುತ್ತಿದೆ ಜೊತೆಗೆ ಅದನ್ನು ಸರಿಪಡಿಸಿಕೊಳ್ಳುವ ಹಂತವನ್ನು ದಾಟಿದರೆ ತೀವ್ರವಾಗಿ ಸಮಸ್ಯೆ ಎದುರಾಗಬಹುದು. ಮೌಢ್ಯತೆ, ಅಜ್ಞಾನದಿಂದ ಎಂದಿಗೂ ನಾವು ಆರೋಗ್ಯವನ್ನು ಕೆಡಿಸಿಕೊಳ್ಳಬಾರದು. ನಮಗೆ ಯಾರೇ ಏನೇ ಎಷ್ಟೇ ತಪ್ಪು ಮಾಹಿತಿ ಕೊಟ್ಟು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸಿದರೂ ಕೂಡ ವೈಜ್ಞಾನಿಕವಾಗಿ ಅದನ್ನು ಪರಾಮರ್ಶಿಸಬೇಕು. ಜೊತೆಗೆ ದಂತ ವೈದ್ಯರಲ್ಲಿ ನಮ್ಮ ಸಂದೇಹಗಳನ್ನು ಕೇಳಿ ಪರಿಹರಿಸಿಕೊಳ್ಳಬಹುದು.

 

ಕೆಲವು ತಪ್ಪು ನಂಬಿಕೆಗಳಿಂದ ಹಾಗೂ ಮೌಢ್ಯತೆಯಿಂದ ನಮ್ಮ ಆರೋಗ್ಯವು ಶಾಶ್ವತವಾಗಿ ಹಾಳಾದರೆ ಅದಕ್ಕೆ ನಾವೇ ಹೊಣೆಗಾರರಾಗಿರುತ್ತೇವೆ. ಆದ್ದರಿಂದ
ದಂತ ಆರೋಗ್ಯವು ನಮ್ಮ ಆದ್ಯತೆಯಾಗಿರಬೇಕು. ಸಾಮಾನ್ಯವಾಗಿ ದಂತ ಸಮಸ್ಯೆಗಳು ಮತ್ತು ದಂತ ರೋಗಗಳು ಹೆಚ್ಚಾಗುವುದು ನಮ್ಮ ಅಲಕ್ಷ ಹಾಗೂ ನಿರ್ಲಕ್ಷತನದಿಂದ. ದಂತ ಸಮಸ್ಯೆಗಳು ತೀವ್ರವಾಗಿ ಉಲ್ಬಣಗೊಂಡು ಬಾಯಲ್ಲಿ ಅನೇಕ ಸಮಸ್ಯೆಗಳು ಉಂಟುಮಾಡಲು ರೋಗದ ಬಗೆಗಿರುವ ಮೂಢನಂಬಿಕೆಗಳು ಕೆಲವು ಬಾರಿ ಕಾರಣವಾಗಿರುತ್ತದೆ.
ಅಶಿಕ್ಷಿತರಿಗಿಂತ ಹೆಚ್ಚಾಗಿ ಶಿಕ್ಷಿತರೇ ಇಂತಹ ಮೂಢನಂಬಿಕೆಗಳನ್ನು ನಂಬುತ್ತಿರುವುದು ಆಧುನಿಕ ಯುಗದ ದುರ್ದೈವವಾಗಿದೆ.

ಮೂಢನಂಬಿಕೆಗಳು ಹಾಗೂ ಅದರ ನೈಜ ಕಾರಣ
1. ಹಲ್ಲು ಕಿತ್ತರೆ ಕಣ್ಣು ನರಕ್ಕೆ ತೊಂದರೆಯಾಗುತ್ತದೆ.
ಉ. ಯಾವುದೇ ಹಲ್ಲಿಗೂ ಕಣ್ಣಿಗೂ,ನರಕ್ಕು, ತಲೆಗೂ ಸಂಬಂಧವಿರುವುದಿಲ್ಲ.ಎಲ್ಲಾ ಅಂಗಾಂಗಗಳು ಪ್ರತ್ಯೇಕ ನರಜಾಲ ಹೊಂದಿದ್ದು ಯಾವುದೇ ಅಂಗಾಂಗಗಳು ಪರಸ್ಪರ ಸಂಪರ್ಕದಲ್ಲಿ ಇರುವುದಿಲ್ಲ.
ಈ ನರಗಳು ಕಣ್ಣು ಅಥವಾ ಇನ್ಯಾವುದೇ ದೇಹದ ಭಾಗಕ್ಕೆ ನೇರ ಸಂಪರ್ಕ ಹೊಂದಿರುವುದಿಲ್ಲ.ಪ್ರತಿಯೊಂದು ಹಲ್ಲು ತನ್ನದೇ ಆದ ಅತಿ ಸೂಕ್ಷ್ಮ ನರ ಸಂವೇದನೆ ಹೊಂದಿರುತ್ತದೆ. ವಾಸ್ತವದಲ್ಲಿ ಹಲ್ಲು ಕಿತ್ತ ನಂತರ ಕಣ್ಣು ಅಥವಾ ಇತರ ಅಂಗಾಂಗಗಳಿಗೆ ಧಕ್ಕೆ ಆಗುವುದಿಲ್ಲ. ಬದಲಾಗಿ ಕಿತ್ತ ಜಾಗಕ್ಕೆ ರಕ್ತವು ಸೇರಿಕೊಂಡು ಗಾಯ ಗುಣವಾಗಿ ಅದು ಮೂಳೆಯಾಗಿ ಬದಲಾಗಿ ಗುರುತಿಸಿದಷ್ಟು ಸ್ವ ಸ್ಥಾನಕ್ಕೆ ಮರಳುತ್ತದೆ.
ರಿಪೇರಿ ಮಾಡಲು ಸಾಧ್ಯವಿಲ್ಲದಷ್ಟು ಹಾಳಾದ ಹಲ್ಲುಗಳನ್ನಷ್ಟೇ ವೈದ್ಯರು ತೆಗೆಯುತ್ತಾರೆ ಹೊರತು ಸಿಕ್ಕ ಸಿಕ್ಕ ಹಲ್ಲುಗಳನ್ನು ತೆಗೆಯಲು ಎಂದಿಗೂ ಸಾಧ್ಯವಿಲ್ಲ.

 

2. ಹಲ್ಲು ಸ್ವಚ್ಛ ಮಾಡಿದರೆ ಹಲ್ಲುಗಳು ಸಡಿಲಗೊಳ್ಳುತ್ತವೆ.
ಉ. ಯಾವುದೇ ಹಲ್ಲುಗಳನ್ನು ಶುಚಿಗೊಳಿಸುವುದು, ಸ್ವಚ್ಛ ಗೊಳಿಸುವುದು.. ಮಾಡುವುದರಿಂದ ಎಂದಿಗೂ ಮೂಳೆಯು ಸಡಿಲ ಗೊಳ್ಳುವುದಿಲ್ಲ.
ಬದಲಾಗಿ ಮೂಳೆಯು ಮತ್ತಷ್ಟು ಬಲಯುತವಾಗುತ್ತದೆ. ಕೊಳೆಯು ಹಲ್ಲಿನ ಮೂಳೆಯನ್ನು ಹಂತ ಹಂತವಾಗಿ ಕರಗಿಸಿ ಹಲ್ಲನ್ನು ಸಡಿಲಗೊಳಿಸುತ್ತದೆ.
ಆ ಕಾರಣಕ್ಕೆ ಎಂದಿಗೂ ಹಲ್ಲಿನ ಮೇಲೆ ಪಾಚಿ, ಗಾರೆ ಕಟ್ಟಲು ಬಿಡಬಾರದು.
ಹಾಗೊಂದು ವೇಳೆ ಕಟ್ಟಿಕೊಂಡರೆ ಅದನ್ನು ದಂತ ವೈದ್ಯರಿಂದ ವರ್ಷಕ್ಕೆ ಒಂದು ಬಾರಿ ಸ್ವಚ್ಛಗೊಳಿಸುವ ಕಡೆಗೆ ಗಮನಹರಿಸಬೇಕು. ಇದೊಂದು ಸಾಮಾನ್ಯ ಹಾಗೂ ಆರೋಗ್ಯಕರ ಬದಲಾವಣೆ ಯಾಗಿರುತ್ತದೆ.

 

3. ಬಲವಾಗಿ ಒತ್ತಿ ಹಲ್ಲನ್ನು ಉಜ್ಜುವುದರಿಂದ ಹಲ್ಲುಗಳು ಸ್ವಚ್ಛವಾಗುತ್ತವೆ ಫಳಫಳ ಹೊಳೆಯುತ್ತವೆ.
ಉ : ಇದೊಂದು ತಪ್ಪು ನಂಬಿಕೆಯಾಗಿದ್ದು ಯಾವುದೇ ಹಲ್ಲುಗಳನ್ನು ಒತ್ತಿ ತಿಕ್ಕುವುದರಿಂದ ಬಲವಾಗಿ ಬ್ರಷ್ನಿಂದ ಉಜ್ಜುವುದರಿಂದ ಇಟ್ಟಿಗೆ ಪುಡಿ,ಸುಣ್ಣದ ಪುಡಿ, ಕಲ್ಲುಪುಡಿಗಳನ್ನು ಉಪಯೋಗಿಸುವುದರಿಂದ ಹಲ್ಲುಗಳು ಫಳಫಳ ಹೊಳೆಯುವುದಿಲ್ಲ,ಬದಲಾಗಿ ಹಲ್ಲು ದಿನೇದಿನೇ ಹಾಳಾಗಿ ಹಲ್ಲು ಬಹುಬೇಗನೆ ಕರಗಿ ಹೋಗಿಬಿಡುತ್ತದೆ. ಹಲ್ಲು ಮತ್ತು ಅದರ ಬಣ್ಣವು ಹಲ್ಲು ಹುಟ್ಟುವಾಗ ಬಳಸುವ ಆಹಾರ ಮತ್ತು ನೀರಿನ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಹಲ್ಲನ್ನು ನಾವು ಸೌಮ್ಯವಾಗಿ ನಿಧಾನವಾಗಿ ಬ್ರಷ್ ಮತ್ತು ಪೇಸ್ಟ್ ನಿಂದ ತಿಕ್ಕಿದರೆ ಅಷ್ಟೇ ಸಾಕು. ಬೇರೆ ಯಾವುದೇ ಪದಾರ್ಥಗಳನ್ನು ಸ್ವಚ್ಛತೆ ಬಳಕೆಗೆ ಅವಶ್ಯಕತೆ ಇರುವುದಿಲ್ಲ. ನಾವು ಜೋರಾಗಿ ತಿಕ್ಕಿದಷ್ಟು ಹಲ್ಲು ಹಾನಿಯಾಗುತ್ತದೆ. ದಂತವೈದ್ಯರಿಂದ ಹಲ್ಲನ್ನು ಸ್ವಚ್ಛಗೊಳಿಸುವ ವಿಧಾನವನ್ನು ತಿಳಿದುಕೊಂಡು ಅದನ್ನು ಪಾಲಿಸಬೇಕು.

 

4. ತಂಬಾಕು ಬಳಕೆ ಹಲ್ಲಿನ ನೋವನ್ನು ಶಾಶ್ವತವಾಗಿ ದೂರ ಮಾಡುತ್ತದೆ.
ಉ : ಇದೊಂದು ಅಪ್ಪಟ ತಪ್ಪು ನಂಬಿಕೆಯಾಗಿದ್ದು, ಇದು ಬಹಳಷ್ಟು ಕಡೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮೂಢನಂಬಿಕೆಯಾಗಿದೆ. ತಂಬಾಕು ಬಳಕೆ ಮಾಡುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಲ್ಲಿನ ನೋವಿಗೆ ಕಾರಣ ತಿಳಿದುಕೊಂಡು ಅದನ್ನು ವೈದ್ಯರಿಂದ ಸರಿಪಡಿಸಿಕೊಳ್ಳಬೇಕೇ ಹೊರತು ತಂಬಾಕು ಬಳಕೆ ಮಾಡಬಾರದು.ತಾತ್ಕಾಲಿಕ ನೋವು ನಿವಾರಕ ಕ್ರಮವಾದ ತಂಬಾಕು ವ್ಯಕ್ತಿಯಲ್ಲಿ ಒಂದು ರೀತಿಯ ಪರಿಹಾರ ಕ್ರಮವಾಗಿದೆ ಎಂಬ ಭ್ರಮೆ ಮೂಡಿಸುತ್ತದೆ. ಪದೇಪದೇ ನೋವು ಬಂದಾಗ ವ್ಯಕ್ತಿ ತಂಬಾಕು ಬಳಕೆ ಹೆಚ್ಚು ಮಾಡುತ್ತಾ ಸಾಗಿ ಕೊನೆಗೆ ಅದರ ದಾಸನಾಗಿ ಬಿಡುತ್ತಾನೆ. ತಂಬಾಕು ನರಮಂಡಲವನ್ನು ಶಾಶ್ವತವಾಗಿ ಹಾನಿಮಾಡಿ ಕೊನೆಗೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿ ಬಿಡುತ್ತದೆ.

 

5. ವಸಡಿನಿಂದ ರಕ್ತವು ಬಂದರೆ ಕೆಟ್ಟ ರಕ್ತ ಹೋದಂತೆ. ಇದರಿಂದ ದಂತ ಆರೋಗ್ಯ ಸುಧಾರಿಸಿ ಹಲ್ಲುಗಳು ಗಟ್ಟಿಗೊಳ್ಳುತ್ತವೆ.
ಉ: ಬ್ರಷ್ ಮಾಡಿದಾಗ ಅಥವಾ ರಕ್ತ ತಾನೇ ತಾನಾಗಿ ಬರುತ್ತಿದ್ದಾಗ ಇದು ದಂತ ರೋಗದ ಹಾಗೂ ವಸಡುಗಳು ಸಡಿಲಗೊಳ್ಳುವ ಲಕ್ಷಣವಾಗಿದೆ. ಇದರಿಂದ ಹಲ್ಲುಗಳು ಗಟ್ಟಿಯಾಗುವುದಿಲ್ಲ. ಬದಲಾಗಿ ಹಲ್ಲುಗಳು ಸಡಿಲಗೊಂಡು ಶಾಶ್ವತ ಉದುರುವ ಸಾಧ್ಯತೆ ಇರುತ್ತದೆ. ಬಾಯಿಯಲ್ಲಿ,ವಸಡಿನಲ್ಲಿ ರಕ್ತ ಕಾಣಿಸಿದ ತಕ್ಷಣ ದಂತ ವೈದ್ಯರನ್ನು ಕಂಡು ಅದರ ಚಿಕಿತ್ಸೆ ಪಡೆಯಬೇಕು. ರಕ್ತಸ್ರಾವವು ಸೋಂಕು ಇರುವ ಲಕ್ಷಣವಾಗಿದ್ದು ಇದು ತೀವ್ರಗೊಂಡಿರುವ ವಸಡು ರೋಗದ ಲಕ್ಷಣವಾಗಿದೆ. ರಕ್ತಸ್ರಾವ ಎಂದಿಗೂ ನಿರ್ಲಕ್ಷ ಮಾಡಬಾರದು.

 

ನೆನಪಿಡಿ

* ದಂತ ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ಅಂಶಗಳನ್ನು ಎಂದಿಗೂ ಮರೆಯಬಾರದು.
* ಯಾವ ಹಲ್ಲು ತೆಗೆಸುವುದರಿಂದ, ಉದುರುವುದರಿಂದ ಅಥವಾ ಕೀಳಿಸುವುದರಿಂದ ಕಣ್ಣಿಗೆ ಅಥವಾ ಪಕ್ಕದ ಹಲ್ಲಿಗೆ ತೊಂದರೆ ಆಗುವುದಿಲ್ಲ.
* ಹಲ್ಲುಗಳನ್ನು ದಂತವೈದ್ಯರಿಂದ ಸ್ವಚ್ಛ ಮಾಡಿಸಿದರೆ ಅವು ಸಡಿಲ ಗೊಳ್ಳುವುದಿಲ್ಲ.
* ಯಾವುದೇ ಬೀಜದ ಹೊಗೆ ತೆಗೆದುಕೊಂಡರೆ ಹುಳುಕು ಹೋಗುವುದಿಲ್ಲ.ಅದು ಕೇವಲ ಮೂಢನಂಬಿಕೆಯಷ್ಟೇ.ಹೊಗೆಯಿಂದ ಹಲ್ಲುಗಳಿಂದ ಹುಳುಗಳು ಸಾಯುವುದಿಲ್ಲ. ಕಣ್ಣಿಗೂ ಕಾಣಿಸುವುದಿಲ್ಲ.
* ತಂಬಾಕು ನೋವಿರುವ ಅಥವಾ ಹುಳುಕು ಹಲ್ಲುಗಳ ನಡುವೆ ಇಟ್ಟುಕೊಂಡರೆ ಅದರಿಂದ ತೊಂದರೆಯೇ ಹೆಚ್ಚು ಹೊರತು ಅದರಿಂದ ಯಾವುದೇ ಉಪಯೋಗಗಳಿಲ್ಲ. ಅದು ಕೇವಲ ತಾತ್ಕಾಲಿಕ ನೋವು ನಿವಾರಕ ಜೊತೆಗೆ ಇದೊಂದು ಅಪಾಯಕಾರಿ ಕ್ರಮವಷ್ಟೇ.
* ಕಿತ್ತ ಹಲ್ಲನ್ನು ಮಣ್ಣಿನಲ್ಲಿ ಹೂಳುವುದರಿಂದ ಅಥವಾ ಉದುರಿದ ಹಲ್ಲು ಸಗಣಿಯಲ್ಲಿ ಕಲಸಿ ಮನೆ ಮೇಲೆ ಹಾಕುವುದರಿಂದ ಯಾವುದೇ ಪ್ರಯೋಜನಗಳಿಲ್ಲ.
* ಕೃತಕ ಹಲ್ಲುಗಳನ್ನು ಯಾಕ್ರಲಿಕ್ ಮತ್ತು ಲೋಹವನ್ನು ಬಳಸಿ ಮಾಡಲಾಗುತ್ತದೆಯೇ ಹೊರತು ಇತರರ, ಪ್ರಾಣಿಗಳ ಸತ್ತ ಮನುಷ್ಯರ ಹಲ್ಲುಗಳನ್ನು ಉಪಯೋಗಿಸಿ ಕಟ್ಟುವುದಿಲ್ಲ.
* ಹುಳುಕಾದ ಹಲ್ಲುಗಳಲ್ಲಿ ಎಂದಿಗೂ ಹುಳಗಳು ಕಣ್ಣಿಗೆ ಕಾಣುವುದಿಲ್ಲ. ನೀವು ಸೂಕ್ಷ್ಮಾತಿ ಸೂಕ್ಷ್ಮ ಜೀವಿಗಳಾಗಿದ್ದು ಇವು ಕೇವಲ ಸೂಕ್ಷ್ಮ ದರ್ಶಕದಲ್ಲಿ (ಮೈಕ್ರೋಸ್ಕೋಪ್ನಲ್ಲಿ) ನೋಡಿದಾಗ ಮಾತ್ರ ಕಂಡು ಬರುತ್ತವೆ.
* ಯಾವುದೇ ಕೆಮಿಕಲ್ ದ್ರಾವಣ, ಕೃತಕ ಪುಡಿ, ತಂಬಾಕು ನಶ್ಯ ಗುಟ್ಕಾ ಹೊಗೆ ಸೊಪ್ಪು.. ಗಳಿಂದ ದಂತ ಸಮಸ್ಯೆಗಳು ಶಾಶ್ವತವಾಗಿ ದೂರವಾಗುವುದಿಲ್ಲ. ಇದಕ್ಕೆ ದಂತ ವೈದ್ಯರ ಸಲಹೆ ಚಿಕಿತ್ಸೆ ಅಗತ್ಯವಿರುತ್ತದೆ.
* ದಂತ ಚಿಕಿತ್ಸೆಯು ಅತ್ಯಂತ ನೋವುದಾಯಕ ಎಂಬ ಭ್ರಮೆಯಲ್ಲಿ ಇದ್ದು ದಂತ ಚಿಕಿತ್ಸೆಯನ್ನು ಪಡೆಯದೆ ದಂತ ಸಮಸ್ಯೆಯನ್ನು ಹೆಚ್ಚು ಮಾಡಿಕೊಂಡರೆ ಮುಂದೆ ಮತ್ತಷ್ಟು ಸಮಸ್ಯೆಗೆ ಈಡಾಗಬಹುದು. ಯಾವುದೇ ದಂತ ಚಿಕಿತ್ಸೆಯನ್ನು ಸ್ಥಳೀಯ ಆರಿವಳಿಕೆ, ಮರಗಟ್ಟುವ ಇಂಜೆಕ್ಷನ್ ಕೊಟ್ಟು ಸರಿಪಡಿಸಲಾಗುತ್ತದೆ, ಹೊರತು ನೇರವಾಗಿ ಯಾವುದೇ ಚಿಕಿತ್ಸೆಗಳನ್ನು ಮಾಡಲು ಯಾರಿಂದಲೂ ಸಾಧ್ಯವಿಲ್ಲ.

Share This Article
Enable Notifications OK No thanks