ಚಿತ್ರದುರ್ಗ. ಫೆ.10: ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಶರಣರ ತತ್ವಗಳು ಆದರ್ಶವಾಗಿವೆ. ಇಂದಿನ ಯುವ ಪೀಳಿಗೆ ಕೇವಲ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಮಾರುಹೋಗದೆ, ನಮ್ಮ ಇತಿಹಾಸ ಮತ್ತು ಶರಣರು ಹಾಕಿಕೊಟ್ಟ ಜೀವನದ ದಾರಿಯನ್ನು ಅಳವಡಿಸಿಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕಾಯಕ ಶರಣರಾದ ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರವು ಮಹನೀಯರ ಜಯಂತಿ ಆಚರಿಸುವ ಮೂಲ ಉದ್ದೇಶ ನಮ್ಮ ಇತಿಹಾಸ ಮತ್ತು ಶರಣರ ಕೊಡುಗೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದಾಗಿದೆ. 12ನೇ ಶತಮಾನದ ಶರಣರ ಸಂದೇಶಗಳು ನಮ್ಮ ಸಂವಿಧಾನದ ಆಶಯಗಳಿಗೆ ಪೂರಕವಾಗಿವೆ. ಅವರ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಮೌಲ್ಯಯುತ ಭಾರತ ನಿರ್ಮಾಣ ಸಾಧ್ಯ. ಕಾಯಕವೇ ಕೈಲಾಸ ಎಂಬ ತತ್ವ ಕೇವಲ ಘೋಷಣೆಯಾಗಬಾರದು. ಸ್ವಾರ್ಥ ಜೀವನದ ಜೊತೆಗೆ ಸಮಾಜದ ಏಳಿಗೆಗಾಗಿ ಶ್ರಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸೌಲಭ್ಯಗಳು ತಲುಪಬೇಕು. ಈ ನಿಟ್ಟಿನಲ್ಲಿ ಏನಾದರೂ ಬೇಡಿಕೆಗಳಿದ್ದರೆ ಜಿಲ್ಲಾಡಳಿತ ಅವಗಳನ್ನು ಈಡೇರಿಸಲು ಪ್ರಯತ್ನಿಸಲಿದೆ.ಜಯಂತಿಗಳು ಕೇವಲ ಸಾಂಕೇತಿಕ ಆಚರಣೆಯಾಗಬಾರದು, ಅವು ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಸುಧಾರಣೆ ತರಬೇಕು ಎಂದ ವೆಂಕಟೇಶ್ ನಾಯ್ಕ್ ಆಶಯ ವ್ಯಕ್ತಪಡಿಸಿದರು.
ಶರಣರ ಕಾಯಕ ತತ್ವವೇ ಸಮ ಸಮಾಜಕ್ಕೆ ದಾರಿದೀಪ: ಸಾಹಿತಿ ಆನಂದ

ಜಯಂತಿ ಕಾರ್ಯಕ್ರಮದಲ್ಲಿ ಕಾಯಕ ಶರಣ ಜೀವನ ಕುರಿತು ಉಪನ್ಯಾಸ ನೀಡಿದ ಸಾಹಿತಿ ಆನಂದ, 900 ವರ್ಷಗಳ ಹಿಂದೆಯೇ ಜಾತಿ ವ್ಯವಸ್ಥೆಯ ವಿರುದ್ಧ ಕ್ರಾಂತಿ ಮಾಡಿದ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ ಹಾಗೂ ಸಮಗಾರ ಹರಳಯ್ಯನವರ ವಿಚಾರಧಾರೆಗಳು ಇಂದಿನ ಆಧುನಿಕ ಸಮಾಜಕ್ಕೆ ಅತ್ಯಗತ್ಯ ಎಂದು ಪ್ರತಿಪಾದಿಸಿದರು. ಭಕ್ತಿಯಲ್ಲಿ ಮೇಲು-ಕೀಳಿಲ್ಲ ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸಿದರು.
ಚೋಳ ರಾಜನ ವೈಭವದ ನೈವೇದ್ಯಕ್ಕಿಂತ ಶರಣ ಮಾದಾರ ಚೆನ್ನಯ್ಯನವರ ಅಂಬಲಿಗೆ ಶಿವನು ಒಲಿದ ಕಥೆಯೇ ಶರಣರ ಭಕ್ತಿ ಮತ್ತು ಕಾಯಕ ನಿಷ್ಠೆಗೆ ಸಾಕ್ಷಿ. ಉರಿಲಿಂಗ ಪೆದ್ದಿಗಳಂತಹ ಶರಣರು ಅರಿವಿನ ಮೂಲಕ ಅಜ್ಞಾನವನ್ನು ದೂರ ಮಾಡಿದರು. ಶರಣರು ಬೋದಿಸಿದ ಕಾಯಕವೇ ಕೈಲಾಸ ಎನ್ನುವ ತತ್ವ, ಶ್ರಮಜೀವಿಗಳ ಬದುಕು ಮತ್ತು ಪ್ರಾಮಾಣಿಕ ಕಾಯಕವೇ ಶ್ರೇಷ್ಠವೆಂಬುದನ್ನು ಸಾರುತ್ತದೆ. ಭಕ್ತಿಯು ಕೇವಲ ಆಚರಣೆಯಾಗದೆ, ಮೂಢನಂಬಿಕೆಗಳನ್ನು ಪ್ರಶ್ನಿಸುವ ‘ಅರಿವಿನ ಹಾದಿ’ಯಾಗಬೇಕು. ಪ್ರತಿಯೊಬ್ಬರಲ್ಲೂ ವೈಚಾರಿಕ ಮನೋಭವ ಮೂಡಬೇಕು. ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ, ವ್ಯಕ್ತಿಯ ಗುಣ ಮತ್ತು ಸಮಾಜಮುಖಿ ಚಿಂತನೆಗಳು ಅವನನ್ನು ಉನ್ನತ ಸ್ಥಾನಕ್ಕೇರಿಸುತ್ತವೆ. ವಚನ ಸಾಹಿತ್ಯವು ಕೇವಲ ಸಾಹಿತ್ಯವಲ್ಲ, ಅದು ಅಸಮಾನತೆ ಮತ್ತು ಮೂಲಭೂತವಾದಕ್ಕೆ ಇರುವ ಮದ್ದಾಗಿದೆ ಎಂದು ಸಾಹಿತಿ ಆನಂದ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಚಲುವಾದಿ ಮಾತನಾಡಿ, ಶರಣರ ತತ್ವಗಳು ಮತ್ತು ಸಂದೇಶಗಳು ಮುಂದಿನ ಪೀಳಿಗೆಗೆ ತಲುಪಬೇಕಾದರೆ ಅವುಗಳನ್ನು ಲಿಖಿತ ರೂಪದಲ್ಲಿ ದಾಖಲಿಸುವುದು ಅತ್ಯಗತ್ಯವಾಗಿದೆ.ಈ ಹಿನ್ನಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶರಣರ ವಚನಗಳನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ಎಲ್ಲಾ ಕಾಲೇಜು ಹಾಗೂ ಗ್ರಂಥಾಲಯಗಳಿಗೆ ತಲುಪಿಸುವ ಮಹತ್ಕಾರ್ಯಕ್ಕೆ ಮುಂದಾಗಿದೆ. ಶರಣರ ವಚನಗಳು ನಮ್ಮ ಸಂಸ್ಕೃತಿ ಮತ್ತು ಅಸ್ಮಿತೆಯ ಪ್ರತಿಬಿಂಬವಾಗಿದ್ದು, ಅವುಗಳನ್ನು ಸಂರಕ್ಷಿಸಿ ಮುಂದಕ್ಕೆ ಕೊಂಡೊಯ್ಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಜಯಂತಿ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಗುರುನಾಥ್ ಬಿ.ಎಂ. ಸ್ವಾಗತಿಸಿದರು. ಹಿಮಂತರಾಜ್ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು. ಆಕಾಶವಾಣಿಯ ಡಾ.ನವೀನ್ ಮಸ್ಕಲ್ ಕಾಯಕ್ರಮ ನಿರೂಪಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ತಹಶೀಲ್ದಾರ್ ಗೋವಿಂದರಾಜು, ದಲಿತ ಮುಖಂಡರುಗಳಾದ ಹನುಮಂತಪ್ಪದುರ್ಗ, ರಾಜಪ್ಪ, ಎಂ.ತಿಪ್ಪೇಸ್ವಾಮಿ, ಸೇರಿದಂತೆ ಅಧಿಕಾರಿಗಳು ಸಾರ್ವಜನಿಕರು ಇದ್ದರು.














