ಶುಕ್ರವಾರ ಸಂಜೆ ಇದ್ದಕ್ಕಿದ್ದಂತೆ ಬಸ್ತಿಹಳ್ಳಿ ಗ್ರಾಮದ ತಿಪ್ಪೆಯ ಬಳಿ ಒಂದು ವಿಚಿತ್ರ ಪ್ರಾಣಿ ಕಾಣಿಸಿಕೊಂಡಿದೆ. ಉದ್ಯವಾದ ಬಾಲ, ಚೂಪಾದ ಮೂತಿ, ತೀಕ್ಷ್ಮವಾದ ನೋಟವನ್ನು ಇದು ಹೊಂದಿದ್ದು, ತಕ್ಷಣ ನೋಡಿದರೆ ಬೆಕ್ಕನ್ನು ಹೋಲುವಂತೆ ಕಾಣಿಸಿದರೂ ಇದು ಬೆಕ್ಕಲ್ಲ! ಹಾಗಾದರೆ ಯಾವ ಪ್ರಾಣಿ?
ಈ ವಿಚಿತ್ರ ಜೀವಿಯನ್ನು ನೋಡಿದ ನಾಯಿಗಳು ಗಾಬರಿಗೊಂಡು ಬೊಗಳಿ ದಾಳಿ ಮಾಡಲು ಪ್ರಯತ್ನಿಸಿವೆ. ಈ ಜೀವಿಯನ್ನು ನೋಡಿದ ಊರಿನ ಹೆಂಗಸರು, ಜನ ಯಾವುದೋ ಅಪಾಯಕಾರಿ ಪ್ರಾಣಿ ಇರಬಹುದೇ ಎಂದು ಹೆದರಿದ್ದಾರೆ. ಅದನ್ನು ಹೊಡೆದು ಕೊಲ್ಲಲು ಹೋಗಿದ್ದಾರೆ.

ಹತ್ತನೇ ತರಗತಿ ವಿದ್ಯಾರ್ಥಿಯಾದ ತೇಜಸ್ ಬಿ ಎಸ್ ಎಂಬ ಹುಡುಗನ ಕಣ್ಣಿಗೆ ಈ ಪ್ರಾಣಿ ಬಿದ್ದಿದು, ಅವನು ಗಮನಿಸಿದಾಗ ಇದು ಪ್ರಾಣಿಯಲ್ಲ ಎಂದು ಅವನಿಗೆ ಖಾತ್ರಿಯಾಗಿದೆ. ಅದು ಕೇವಲ ತನ್ನ ರಕ್ಷಣೆಗೋಸ್ಕರ ನಾಯಿಗಳ ಮೇಲೆ ಬೆಕ್ಕಿನಂತೆ ಗುರುಗುಟ್ಟುತ್ತಿದ್ದು ಮನುಷ್ಯರಿಗೆ ಯಾವುದೇ ರೀತಿಯ ತೊಂದರೆ ಕೊಡುತ್ತಿಲ್ಲ ಎಂಬುದನ್ನು ತೇಜಸ್ ಗಮನಿಸಿದ್ದಾನೆ. ಅಲ್ಲದೆ ಅದು ಅವನ ಹಿಂದೆ-ಹಿಂದೆ ಬರತೊಡಗಿದೆ.
ತೇಜಸ್ ತನ್ನ ಅಣ್ಣಂದಿರ ಜೊತೆಗೂಡಿ ಅದನ್ನು ರಕ್ಷಿಸಲು ಮುಂದಾಗಿದ್ದಾನೆ. ಒಂದು ಚೀಲವನ್ನು ತಂದು ಅದರ ಮುಂದೆ ಹಿಡಿದು ಅದನ್ನು ಹಿಂದಿನಿಂದ ಡಬ್ಬಿ ಒಳಗೆ ಸೇರಿಸಿದ್ದಾರೆ. ನಂತರ ತನ್ನ ಮನೆಯ ಪಕ್ಕದಲ್ಲಿದ್ದ ಹಾಳು ಮನೆಯೊಂದಕ್ಕೆ ಅದನ್ನು ತೆಗೆದುಕೊಂಡು ಹೋಗಿ ಬಚ್ಚಲ ಮನೆಯಲ್ಲಿ ಚೀಲವನ್ನಿಟ್ಟು ಹೊರಗಿನಿಂದ ಬಾಗಿಲು ಹಾಕಿಕೊಂಡಿದ್ದಾರೆ.
ನಂತರ ಏನು ಮಾಡಬೇಕೆಂದು ತೋಚದಾಗಿ, ತೇಜಸ್ ಚಾಟ್ GPT ಯಲ್ಲಿ ಆ ಪ್ರಾಣಿಯ ಫೋಟೋ,ಅದು ದೊರೆತ ತಮ್ಮ ಊರಿನ ವಿವರವನ್ನು ಹಾಕಿದ್ದಾನೆ. ಅದರ ಮೂಲಕ ಅರಣ್ಯ ಇಲಾಖೆಯ ಸಂಪರ್ಕ ಸಂಖ್ಯೆಯನ್ನು ಪಡೆದು ಅವರಿಗೆ ಕರೆ ಮಾಡಿದ್ದಾನೆ.
ಮಧ್ಯರಾತ್ರಿ ಸುಮಾರು 12.30 ರ ಸುಮಾರಿಗೆ ಅರಣ್ಯ ಇಲಾಖೆಯ ಮೂವರು ಸಿಬ್ಬಂದಿ ಜೀಪಿನಲ್ಲಿ ಬಂದು ಆ ಪ್ರಾಣಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ತೇಜಸ್ ಕುತೂಹಲಕ್ಕಾಗಿ ಬಂದಿದ್ದ ಪ್ರಾಣಿ ತಜ್ಞರಾದ ಗೋವಿಂದರಾಜು ಎನ್ನುವವರನ್ನು ವಿಚಾರಿಸಿದಾಗ ಅವರು ಇದೊಂದು ಅಪರೂಪದ ಜೀವಿಯಾಗಿದ್ದು, ಸಾಮಾನ್ಯವಾಗಿ ಚಿಕ್ಕಮಂಗಳೂರಿನ ಕಡೆ ಕಂಡುಬರುತ್ತದೆ ಎಂದು ತಿಳಿಸಿದ್ದಾರೆ. ಅದನ್ನು ಮೃಗಾಲಯದಲ್ಲಿ ಬಿಡುವುದಾಗಿ ತಿಳಿಸಿದ್ದಾರೆ. ಅದನ್ನು ತಾವು ತಂದಿದ್ದ ಪಂಜರದಲ್ಲಿ ಹಾಕಿಕೊಂಡು ಹೋಗಿದ್ದಾರೆ. ತಕ್ಷಣ ಕರೆ ಮಾಡಿ ವಿಷಯ ತಿಳಿಸಿದ್ದಕ್ಕೆ ತೇಜಸ್ ಎಂಬ ವಿದ್ಯಾರ್ಥಿ ಮತ್ತು ಜೊತೆಯವರಿಗೆ ಧನ್ಯವಾದ ತಿಳಿಸಿದ್ದಾರೆ. ಈ ರೀತಿ ವಿದ್ಯಾರ್ಥಿಯೊಬ್ಬನ ಸಮಯಪ್ರಜ್ಞೆಯಿಂದಾಗಿ ಅಳಿವಿನ ಅಂಚಿನಲ್ಲಿದ್ದು, ದಿನಗಳೆದಂತೆ ಸಂತತಿ ಕಡಿಮೆಯಾಗುತ್ತಿರುವ ಒಂದು ಜೀವಿಯ ರಕ್ಷಣೆಯಾಗಿದೆ.

ಜೀವಿಯ ವಿವರವನ್ನು ಕೆದಕಿದಾಗ ಇದು ಇಂಡಿಯನ್ ಪಾಮ್ ಸಿವೆಟ್ (Indian Palm Civet) ಎಂದು ಕರೆಯಲ್ಪಡುವ ಪ್ರಾಣಿಯಾಗಿದ್ದು, ಇದರ ವೈಜ್ಞಾನಿಕ ಹೆಸರು ಪ್ಯಾರಡಾಕ್ಷುರಸ್ ಹರ್ಮಾಫೋಡ್ರೈಟಸ್ (Paradoxurus hermaphroditus) ಎಂದಾಗಿದೆ. ಇದು ಸಿವೆಟ್ ಪ್ರಾಣಿವರ್ಗಕ್ಕೆ ಸೇರಿದೆ. ಇದೊಂದು ನಿಶಾಸಂಚಾರಿ ಪ್ರಾಣಿಯಾಗಿದ್ದು, ಹೋಲಿಕೆಯಲ್ಲಿ ಸ್ವಲ್ಪ ಬೆಕ್ಕಿನಂತೆ ಕಾಣಿಸುತ್ತದೆ. ಜನರ ಆಡುಮಾತಿನಲ್ಲಿ ಸಾಮಾನ್ಯವಾಗಿ ಮರಪತ್ತಿ ಕಾಡು ಬೆಕ್ಕು ಎಂದು ಕರೆಯಲ್ಪಡುವ ಇದು ಮುಖ್ಯವಾಗಿ ರಾತ್ರಿ ಸಮಯದಲ್ಲಿ ಮಾತ್ರ ಹೊರಗೆ ಬರುತ್ತದೆ. ಹಗಲು ಹೊತ್ತು ಮರಗಳಲ್ಲಿ ಅಥವಾ ಸುರಕ್ಷಿತ ಸ್ಥಳಗಳಲ್ಲಿ ವಿಶ್ರಾಂತಿ ಪಡೆಯುತ್ತದೆ. ಇದು ಬಹಳ ಜಾಗರೂಕ ಮತ್ತು ಹೆದರುವ ಸ್ವಭಾವವುಳ್ಳದ್ದಾಗಿರುತ್ತದೆ. ಇವು ಉಭಯಾಹಾರಿಯಾಗಿದ್ದು (Omnivorous): ಹಣ್ಣುಗಳು, ಕೀಟಗಳು, ಇಲಿ, ಸಣ್ಣ ಪ್ರಾಣಿಗಳು ಕೋಳಿ ಮೊಟ್ಟೆ. ಮನೆ ಸುತ್ತಮುತ್ತ ಉಳಿದ ಆಹಾರ ಎಲ್ಲವನ್ನೂ ತಿನ್ನುತ್ತದೆ.












