ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಚಿತ್ರದುರ್ಗ ತಾಲೂಕು ಹಿರೇಗುಂಟನೂರು ಹೋಬಳಿಯ ವಿಜಾಪುರ ಗ್ರಾಮದ ಪರಿಚಯ. ವಿಜಾಪುರ ಗ್ರಾಮವು ಲಕ್ಷ್ಮೀಸಾಗರ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ 15 ಕಿಲೋಮೀಟರ್ ದೂರ ಪಶ್ಚಿಮಕ್ಕೆ,
ಚಿತ್ರದುರ್ಗ- ದಾವಣಗೆರೆ ರಾ. ಹೆ.4 ರ ಮಾರ್ಗದಲ್ಲಿದೆ.

ಗ್ರಾಮದ ದಕ್ಷಿಣಕ್ಕೆ ಹಳೆಗ್ರಾಮ ನಿವೇಶನವಿದ್ದು ಅದು ಈಗ ಬೇಚರಾಕ್ ಆಗಿದೆ. ಅಲ್ಲಿಂದ ಈಗಿನ ಗ್ರಾಮದ ಜಾಗಕ್ಕೆ ಸ್ಥಳಾಂತರಗೊಂಡಿದೆ. ಹಳೆ ಗ್ರಾಮದ ನಿವೇಶನದಲ್ಲಿ ಹೊನ್ನೆಕೇರಮ್ಮ ದೇವಿಯ ಶಿಲ್ಪವಿದ್ದು, ಪೂಜಿಸಲಾಗುತ್ತದೆ. ಭಗ್ನ ಶಿಲ್ಪಗಳು,ಲಿಂಗವಿಲ್ಲದ ಪಾನವಟ್ಟ ಮಾತ್ರ ಇರುವ ಲಿಂಗದ ಶಿಲ್ಪಗಳು, ಭಗ್ನಾವಶೇಷಗಳು ಇಂದಿಗೂ ಕಂಡುಬರುತ್ತದೆ.
ಹಳೆಯ ಗ್ರಾಮ ನಿವೇಶನದ ಹೆಸರು ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ. ಹಿಂದಿನಿಂದಲೂ ಇದು ಸೇನಾ ನೆಲೆ ಹಾಗೂ ಸೇನಾ ಬಿಡಾರ ಹೊಂದಿತ್ತು.
ಹಿಂದೆ ಯುದ್ಧಗಳನ್ನು ಗೆದ್ದಾಗ ಇಲ್ಲಿ ಸೈನಿಕರು ವಿಜಯವನ್ನು ಆಚರಿಸುತ್ತಿದ್ದ ಕಾರಣಕ್ಕೆ ಇದು ವಿಜಯಪುರ ಮುಂದುವರೆದು ವಿಜಾಪುರ ಆಗಿದೆ ಎನ್ನಲಾಗುತ್ತದೆ. ಇದಕ್ಕೆ ಸಾಕ್ಷಿಯೆಂಬಂತೆ ಗ್ರಾಮದ ಪ್ರವೇಶದ್ವಾರದಲ್ಲಿಯೇ ಬಂದೂಕು ಹಿಡಿದುಕೊಂಡಿರುವ ವೀರಮಾಸ್ತಿಕಲ್ಲು ಇದೆ. ಇದರಲ್ಲಿ ಬಂದೂಕು ಹಿಡಿದುಕೊಂಡಿರುವ ವೀರ ಹಾಗೂ ಆತನ ಜೊತೆಗೆ ಸತಿ ಆದ ಆತನ ಹೆಂಡತಿಯ ಕೆತ್ತನೆಯಿದೆ. ಇದು ವಿಜಯನಗರೋತ್ತರ ಕಾಲದ 16-17 ನೇ ಶತಮಾನಕ್ಕೆ ಸೇರಿದ ವೀರಮಾಸ್ತಿಗಲ್ಲಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ. ಇದೊಂದು ವಿಶಿಷ್ಟ /ವಿಶೇಷ ವೀರಗಲ್ಲು ಆಗಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ದೊರಕಿರುವ ಕೆಲವೇ ಕೆಲವು ಬಂದೂಕು ಹಿಡಿದುಕೊಂಡಿರುವ ವೀರನ ವೀರಗಲ್ಲುಗಳಲ್ಲಿ ಇದೂ ಒಂದಾಗಿದೆ.
ಮತ್ತೊಂದು ಐತಿಹ್ಯದ ಪ್ರಕಾರ ಇಲ್ಲಿನ ಭೌಗೋಳಿಕ ಲಕ್ಷಣ ಪಕ್ಷಿ ಸಂಕುಲಕ್ಕೆ ಅನುಕೂಲಕರವಾಗಿದ್ದು ವಿಜಾ
(ತಿ )ಎಂದರೆ ಪಕ್ಷಿಸಂಕುಲ ಎಂಬ ಅರ್ಥವಿದ್ದು, ಪಕ್ಷಿಸಂಕುಲದ ಊರು ವಿಜಾಪುರ ಆಗಿದೆ ಎನ್ನಲಾಗುತ್ತದೆ.
ಬ್ರಿಟಿಷ್ ಸರ್ಕಾರ ಇದ್ದಾಗ ಹಿಂದೆ ಸೇನಾ ತುಕಡಿಗಳು ಪ್ರಯಾಣ ಮಾಡುವಾಗ ಅಲ್ಲಲ್ಲಿ ಸೇನಾ ತಂಗುದಾಣವನ್ನು ನಿರ್ಮಿಸಲಾಗುತ್ತಿತ್ತು.
ಅಂತಹ ಸೇನಾ ತಂಗುದಾಣ ಈ ಗ್ರಾಮದಲ್ಲಿ ನಿರ್ಮಿಸಲಾಗಿದ್ದು,ಗ್ರಾಮದ ಈಗಿನ ಶಾಲೆ ಇರುವ ಸ್ಥಳವನ್ನು ಮಿಲಿಟರಿ ಮೈದಾನ ಎಂದೇ ಹೇಳಲಾಗುತ್ತಿತ್ತು. ಅಂದು ನಿರ್ಮಿಸಿದ ಕೆಲವೇ ಕೆಲವು ಕಟ್ಟಡಗಳು ಇಂದಿಗೂ ಕಾಣಬಹುದು. ಅಂದು ನಿರ್ಮಿಸಿದ ಬ್ರಿಟಿಷರ ಪ್ರವಾಸಿ ಮಂದಿರ ಇಂದಿಗೂ ಇಲ್ಲಿ ಉಳಿದುಕೊಂಡಿದೆ.
ಭೌಗೋಳಿಕ ಲಕ್ಷಣ :
ಭೌಗೋಳಿಕವಾಗಿ ಗ್ರಾಮವು ಲಕ್ಷ್ಮೀಸಾಗರದ ಕೆರೆಯ ಪಶ್ಚಿಮದ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ಗ್ರಾಮದ ಸುತ್ತಮುತ್ತಲಿನ ಸಮತಟ್ಟು ಮೈದಾನ ಪ್ರದೇಶವು ಸಂಪೂರ್ಣ ಒಣಭೂಮಿಯಾಗಿದೆ.
ಕಿಟ್ಟದಹಟ್ಟಿ,ಲಕ್ಷ್ಮಿಸಾಗರ,
ಬಳೇಗಟ್ಟೆ … ಹತ್ತಿರದ ಗ್ರಾಮಗಳಾಗಿವೆ.
*ಗ್ರಾಮದಲ್ಲಿರುವ ದೇವಾಲಯಗಳು* :
1.ಸಿದ್ದೇಶ್ವರ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯವು ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಿಸಲಾಗಿದೆ.
ಗರ್ಭಗೃಹ, ಅಂತರಾಳ ಹಾಗೂ ಸಭಾಮಂಟಪಗಳಿರುವ
ದೇವಾಲಯವಿದು.
ಗರ್ಭಗೃಹದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿರುವರು. ಅಂತರಾಳದಲ್ಲಿ ನಂದಿ ಇದೆ.
ಈ ದೇವಾಲಯದ ಉತ್ಸವವನ್ನು ಕಾರ್ತಿಕ ಮಾಸದಲ್ಲಿ ಹಾಗೂ ಶಿವರಾತ್ರಿಯಂದು ಪ್ರತಿವರ್ಷ ವಿಜೃಂಭಣೆಯಿಂದ ನಡೆಸಲಾಗುತ್ತದೆ.
2. ಆಂಜನೇಯ ಸ್ವಾಮಿ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಆಂಜನೇಯಸ್ವಾಮಿ ದೇವಾಲಯವು ದಕ್ಷಿಣಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ 16-17 ನೇ ಶತಮಾನದ ಪಾಳೆಯಗಾರರ ಕಾಲದ ಶಿಲ್ಪವಿದ್ದು ಪೂಜಿಸಲಾಗುತ್ತದೆ. ಗರ್ಭಗೃಹ ಹಾಗೂ ಸಭಾಮಂಟಪಗಳಿಂದ ಕೂಡಿರುವ ದೇವಾಲಯ ಇದಾಗಿದ್ದು,7 ಅಡಿಗಳ ಎತ್ತರದ ಆಂಜನೇಯನ ಉಬ್ಬುಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ.
ಈ ದೇವರ ಉತ್ಸವವನ್ನು ರಾಮನವಮಿಯಂದು ನಡೆಸಲಾಗುತ್ತದೆ .
ಪ್ರತಿ ವರ್ಷ ಶ್ರಾವಣಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ.
3.ಉಡುಸುಲೇಶ್ವರಿ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಗ್ರಾಮದೇವತೆ ಉಡುಸುಲೇಶ್ವರಿ ದೇವಾಲಯವು ಪೂರ್ವಾಭಿಮುಖವಾಗಿದ್ದು,ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಗರ್ಭಗೃಹದಲ್ಲಿ ದೇವಿಯ ಶಿಲ್ಪವಿದ್ದು ಪೂಜಿಸಲಾಗುತ್ತದೆ. ಪ್ರತಿ 3/5 ವರ್ಷಕ್ಕೆ ಈ ದೇವಿಯ ಜಾತ್ರೆ ವಿಜೃಂಭಣೆಯಿಂದ ನಡೆಸಲಾಗುತ್ತದೆ.ಆಯಕಟ್ಟಿನ ಕುಲಸ್ಥರು ಹಾಗೂ ಗ್ರಾಮಸ್ಥರು ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಸಗ್ಗದ ಜಾತ್ರೆಯೆಂದೇ ಈ ವಿಶೇಷ ಉತ್ಸವವನ್ನು ಕರೆಯಲಾಗುತ್ತದೆ.ಆಗ ಗ್ರಾಮದ ಸುತ್ತಲೂ ಚರಗ ಚೆಲ್ಲುವುದು, ಬೇಲಿ ಹಾಕುವ ಸಂಪ್ರದಾಯಗಳು ಮಾಡಲಾಗುತ್ತದೆ.ಜಾತ್ರೆಯ ನಿರ್ದಿಷ್ಟ ಸಮಯದವರೆಗೆ ಗ್ರಾಮದಿಂದ ಹೊರಗೆ ಹೋಗುವುದಾಗಲಿ, ಗ್ರಾಮದ ಒಳಗೆ ಇತರರು ಪ್ರವೇಶ ಮಾಡುವುದು ನಿಷೇಧವಿರುತ್ತದೆ.
4.ದುರ್ಗಾಂಬಿಕಾದೇವಿ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀ ದುರ್ಗಾಂಬಿಕಾ ದೇವಿ ದೇವಾಲಯವು ಸ್ಥಳೀಯ ಶೈಲಿಯಲ್ಲಿದ್ದು,
ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ.
ದೇವಾಲಯದ ಗರ್ಭಗೃಹದಲ್ಲಿ ದುರ್ಗಾಂಬಿಕಾ ದೇವಿಯನ್ನು ಪೂಜಿಸಲಾಗುತ್ತದೆ.
ಈ ದೇವಿಯ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷ ನೆರವೇರಿಸಲಾಗುತ್ತದೆ.
5.ಗೌರಸಂದ್ರ ಮಾರಮ್ಮ ದೇವಸ್ಥಾನ:
ಗ್ರಾಮದ ಶಾಲೆಯ ಹಿಂಭಾಗದಲ್ಲಿರುವ ಮಾರಮ್ಮದೇವಿ ದೇವಾಲಯವು ಪೂರ್ವಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಈ ದೇವರ ಜಾತ್ರೆ- ಉತ್ಸವವನ್ನು ಪ್ರತಿವರ್ಷ ಸೆಪ್ಟಂಬರ್ ತಿಂಗಳಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಇದರ ಜೊತೆಯಲ್ಲಿ ಚೌಡೇಶ್ವರಿ ದೇವಿಯ ಬಯಲು ಆಲಯ, ಶಾಲೆಯ ಬಳಿಯಲ್ಲಿ ಈ ಮಾರ್ಗದಲ್ಲಿ ಸಾಗುವ ಜೈನಮುನಿಗಳ ವಾಸ್ತವ್ಯಕ್ಕಾಗಿ ಜೈನ ವಿಹಾರಧಾಮಗಳಿವೆ.
























