Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸ್ವಾತಂತ್ರ್ಯವೆಂದರೆ ಕೇವಲ ಸ್ಟೇಟಸ್ ಹಾಕುವುದಲ್ಲ, ಅದು ರಾಷ್ಟ್ರ ನಿರ್ಮಾಣದ ಜವಾಬ್ದಾರಿ : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

---Advertisement---

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 15 : ನೆನ್ನೆಯ ರಕ್ತತರ್ಪಣ, ಇಂದಿನ ಚೈತನ್ಯ. ಮಹಾ ತ್ಯಾಗಗಳ ನೆನಪಿನಲ್ಲಿ ಯುವಜನತೆಯ ನವ ಜಾಗೃತಿಯಾಗಬೇಕು ಹಿಂದಿನ ಹಿರಿಯರು ರಕ್ತ ಸುರಿಸಿ ತಂದುಕೊಟ್ಟ ಈ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು, ದೇಶವನ್ನು ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನಕ್ಕೇರಿಸುವ ಮಹತ್ತರ ಜವಾಬ್ದಾರಿ ಇಂದಿನ ಯುವಕರ ಮೇಲಿದೆ. ತ್ಯಾಗ-ಬಲಿದಾನಗಳ ಸ್ಮರಣೆ ಬರಿ ಒಂದು ದಿನದ ಆಚರಣೆಯಾಗದೆ, ಪ್ರತಿಕ್ಷಣದ ಕರ್ತವ್ಯ ಪ್ರಜ್ಞೆಯಾಗಲಿ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದಲ್ಲಿರುವ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದ ಆವರಣದಲ್ಲಿ ಜರುಗಿದ ಎಸ್ ಜೆ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡ 80ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪೂಜ್ಯರು ಆಗಸ್ಟ್ 15 ಬಂತೆಂದರೆ ಸಾಕು ಪ್ರತಿಯೊಬ್ಬ ಭಾರತೀಯನ ಧಮನಿಗಳಲ್ಲೂ ದೇಶಭಕ್ತಿಯ ನವ ಉನ್ಮಾದ ಹರಿಯುತ್ತದೆ. ಶಾಲಾ-ಕಾಲೇಜುಗಳು, ಸರಕಾರಿ ಕಚೇರಿಗಳು ಮತ್ತು ರಾಜಬೀದಿಗಳಲ್ಲಿ ತ್ರಿವರ್ಣ ಧ್ವಜ ಗಗನಕ್ಕೇರಿ ಹಾರಾಡುತ್ತದೆ. ಆದರೆ, ಈ ಸಂಭ್ರಮದ ವಾತಾವರಣದ ನಡುವೆ ಇಂದಿನ ಯುವ ಪೀಳಿಗೆಗೆ ಬಿಡುಗಡೆಯ ಹಿಂದಿನ ರಕ್ತಸಿಕ್ತ ಇತಿಹಾಸ ಮತ್ತು ಬಲಿದಾನಗಳ ನೈಜ ಅರ್ಥ ಮನವರಿಕೆಯಾಗುತ್ತಿದೆಯೇ? ಎಂಬ ಪ್ರಶ್ನೆ ಸದ್ಯ ಪ್ರಮುಖವಾಗಿ ಕೇಳಿಬರುತ್ತಿದೆ. ಇಂದು ನಾವು ಉಸಿರಾಡುತ್ತಿರುವ ಸ್ವತಂತ್ರ ಗಾಳಿ ಸುಲಭವಾಗಿ ಸಿಕ್ಕಿದ್ದಲ್ಲ. ಅದು ಲಕ್ಷಾಂತರ ಕ್ರಾಂತಿಕಾರಿಗಳ ಬೆವರು, ಸತ್ಯಾಗ್ರಹಿಗಳ ತ್ಯಾಗ ಮತ್ತು ವೀರ ಯೋಧರ ನೆತ್ತರಿನ ಫಲ. ತ್ಯಾಗ-ಬಲಿದಾನಗಳ ಐತಿಹಾಸಿಕ ನೆನಪು ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ, ನೆನಪಾಗುವುದು ಕೇವಲ ಬೆರಳೆಣಿಕೆಯ ನಾಯಕರಲ್ಲ; ನಾಡಿನ ಮಣ್ಣಿಗಾಗಿ ಜೀವ ತೇತ ಸಾವಿರಾರು ಅನಾಮಧೇಯ ವೀರರು.

ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ: ಬ್ರಿಟಿಷರ ’ದತ್ತು ಮಕ್ಕಳಿಗೆ ಹಕ್ಕಿಲ್ಲ’ ನೀತಿಯ ವಿರುದ್ಧ ಸಿಡಿದೆದ್ದು, ಕನ್ನಡ ಮಣ್ಣಿನ ಗಂಡುಗಲಿತನವನ್ನು ಜಗತ್ತಿಗೆ ಸಾರಿದವರು. ಭಗತ್ ಸಿಂಗ್, ಸುಖ್‌ದೇವ್, ರಾಜಗುರು: “ಇಂಕ್ವಿಲಾಬ್ ಜಿಂದಾಬಾದ್” ಎಂದು ಕುತ್ತಿಗೆಗೆ ನೇಣಿನ ಹಗ್ಗವನ್ನು ಹೂಮಾಲೆಯಂತೆ ಧರಿಸಿ ನಗುನಗುತ್ತಾ ಪ್ರಾಣಾರ್ಪಣೆ ಮಾಡಿದ ಇಪ್ಪತ್ತರ ಹರೆಯದ ಯುವ ಕ್ರಾಂತಿಕಾರಿಗಳು. ಮಹಾತ್ಮ ಗಾಂಧೀಜಿ ಮತ್ತು ಸರದಾರ್ ಪಟೇಲ್: ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅಡಿಪಾಯವನ್ನೇ ಅಲ್ಲಾಡಿಸಿದ ಧುರೀಣರು.
ನಮ್ಮ ಪ್ರಾಣ ಹೋದರೂ ಚಿಂತೆಯಿಲ್ಲ, ನಮ್ಮ ಮಾತೃಭೂಮಿ ಸ್ವತಂತ್ರವಾಗಬೇಕು” — ಎಂಬ ಒಂದೇ ಧ್ಯೇಯದೊಂದಿಗೆ ಹೋರಾಡಿದ ಆ ಮಹಾತ್ಮರ ತ್ಯಾಗವನ್ನು ನೆನೆಯುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ.

ಇಂದಿನ ಯುವಜನತೆ ಜಾಗೃತಿಯೇ, ರಾಷ್ಟ್ರ ಜಾಗೃತಿಯಾಗಿದೆ. ಇಂದಿನ ತಂತ್ರಜ್ಞಾನ ಹಾಗೂ ಡಿಜಿಟಲ್ ಯುಗದಲ್ಲಿ ಯುವಪೀಳಿಗೆಗೆ ಸ್ವಾತಂತ್ರ್ಯದ ಮೌಲ್ಯವನ್ನು ತಲುಪಿಸುವುದು ಅತ್ಯಂತ ಅಗತ್ಯವಾಗಿದೆ. ಸ್ವಾತಂತ್ರ್ಯವೆಂದರೆ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕುವುದು ಅಥವಾ ರಜೆ ಆಚರಿಸುವುದಲ್ಲ; ಅದು ರಾಷ್ಟ್ರ ನಿರ್ಮಾಣದ ಜವಾಬ್ದಾರಿ.

ಯುವತರು ಭ್ರಷ್ಟಾಚಾರ ನಿರ್ಮೂಲನೆ, ಸಾಮಾಜಿಕ ಜಾಗೃತಿ ಮತ್ತು ದೇಶದ ಪ್ರಗತಿಗೆ ಶಪಥ ಮಾಡುವ ಸಂಕಲ್ಪಿತರಾಗಬೇಕು. ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಗೊಳ್ಳಲು ದೇಶದ ಕೃಷಿ, ತಂತ್ರಜ್ಞಾನ ಹಾಗೂ ಉದ್ಯಮಶೀಲತೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಯುವಕರ ಮುಂಚೂಣಿ ಜವಾಬ್ದಾರಿಗಳಾಗಬೇಕೆಂದು ಹೇಳಿದರು.

ಸಭೆಯಲ್ಲಿ ಭೋವಿ ಗುರುಪೀಠದ ಕಾರ್ಯನಿರ್ವಾಹಣಾಧಿಕಾರಿ ಗೋವಿಂದಪ್ಪ, ವಿದ್ಯಾಸಂಸ್ಥೆಯ ನಿರ್ದೇಶಕ ಎಸ್ ಎ ಸ್ವಾಮಿ, ರಾಮಕೃಷ್ಣ ಪ್ರೌಢಶಾಲೆಯ ಮುಖ್ಯೋಪಧ್ಯಾಯರಾದ ಶ್ರೀಧರ, ಸಿದ್ಧರಾಮೇಶ್ವರ ಪ್ರೌಢಶಾಲೆಯ ಮುಖ್ಯೋಪಧ್ಯಾಯರಾದ ಆನಂದ, ಪ್ರೌಢಶಾಲೆಯ ಮುಖ್ಯೋಪಧ್ಯಾಯರಾದ ಹನುಮಂತಪ್ಪ, ಬೋಧಕ-ಬೋಧಕೇತರ ಸಿಬ್ಬಂಧಿ ವರ್ಗ ಪೋಷಕರು ಉಪಸ್ಥಿತಿಯಿದ್ದರು. ಶಾಲಾ ಮಕ್ಕಳು ದೇಶಭಕ್ತಿ ಮೂಡಿಸುವ ಸಂಗೀತ, ನೃತ್ಯ, ರೂಪಕ, ನಾಟಕ ವೇಷಭೂಷಣ, ಏಕಪಾತ್ರಾಭಿನಯ, ಆಶುಭಾಷಣ ನಡೆಸಿಕೊಟ್ಟರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now