Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತುರುವನೂರು ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವದ ವೈಭವ : ಇಲ್ಲಿದೆ ಮಾಹಿತಿ

---Advertisement---

 

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್, ಚಿತ್ರದುರ್ಗ, ಜನವರಿ. 30 : ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ಜಾತ್ರೆ ಫೆಬ್ರವರಿ 03 ರಂದು ನಡೆಯಲಿದೆ.

ತುರುವನೂರಿನ ಶ್ರೀ ಆಂಜನೇಯ ಸ್ವಾಮಿ ದೇವರು ಮಹಾಮಹಿಮೆಯುಳ್ಳ ದೇವರಾಗಿದ್ದು ಒಂದು ಜಾಗೃತ ಕ್ಷೇತ್ರವಾಗಿದೆ. ಅಪಾರ ಭಕ್ತರು ಈ ದೇವರಿಗೆ ನಡೆದುಕೊಳ್ಳುತ್ತಾರೆ. ತಮ್ಮ ಮನೆಗಳ ಮಕ್ಕಳಲ್ಲಿ ಒಬ್ಬರಿಗಾದರೂ ಈ ದೇವರ ಹೆಸರನ್ನು ಇಡುವ ರೂಢಿ, ಪ್ರತೀತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಈ ದೇವರ ಅಪ್ಪಣೆಯಿಂದ ಇಲ್ಲದೆ ಯಾವುದೇ ಕೆಲಸ ಕಾರ್ಯಗಳು ಜರುಗುವುದಿಲ್ಲ. ಅಪಾರ ಭಕ್ತವೃಂದ ಈ ದೇವರಿಗೆ ನಡೆದುಕೊಳ್ಳುತ್ತಾರೆ.

 

ಜಾತ್ರೆಯ ಸಮಯದಲ್ಲಿ ಈ ಊರಿನ ಗ್ರಾಮಸ್ಥರು ಬೇರೆಬೇರೆ ಊರಿನಲ್ಲಿ ಎಲ್ಲಿಯೇ ಇದ್ದರೂ ಈ ಜಾತ್ರೆ ಹಾಗೂ ರಥೋತ್ಸವಕ್ಕೆ ತಪ್ಪದೇ ಆಗಮಿಸುತ್ತಾರೆ.
ರಥೋತ್ಸವಕ್ಕೆ 9 ದಿನ ಮುಂಚೆಯೇ ಉತ್ಸವಕ್ಕೆ ಸಂಬಂಧಿಸಿದ ಪೂರ್ವ ಸಿದ್ಧತಾ ಕಾರ್ಯಗಳನ್ನು ಪ್ರಾರಂಭವಾಗುತ್ತದೆ.

ಆ ದಿನ ಮುರುಡಪ್ಪ (ದಾಸಪ್ಪನವರು) ಮನೆಯ ಶುದ್ಧೀಕರಣ ಮಾಡಿಕೊಂಡು ಶ್ರೀ ಆಂಜನೇಯ ಸ್ವಾಮಿ ದೇವಾಲಯದಿಂದ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವರ ಭಾವಚಿತ್ರದ ಹಲಗೆಯನ್ನು ತಂದು ದೇವರ ಜಗಲಿಯ ಮೇಲಿರಿಸಿ ಪೂಜೆ ಸಲ್ಲಿಸುತ್ತಾರೆ.
ಮುರುಡಪ್ಪನವರು ಬ್ರಹ್ಮಚಾರ್ಯ ದೊಂದಿಗೆ ಉಪವಾಸ ಕೈಗೊಂಡು 9 ದಿನ ಕಟ್ಟುನಿಟ್ಟಾಗಿ ಉಪವಾಸ ವ್ರತ ಪಾಲಿಸುತ್ತಾರೆ.‌ಈ ದಿನಗಳಲ್ಲಿ ಮಿತವಾಗಿ ಸ್ವಲ್ಪ ಹಾಲು ಹಣ್ಣುಗಳನ್ನು ಮಾತ್ರವೇ ಸೇವಿಸುತ್ತಾರೆ.
ಮೊದಲ ಎಂಟು ದಿನ ಒಂಬತ್ತು ಜನ ದಾಸಪ್ಪಗಳು ಸೇರಿ ಸುತ್ತಮುತ್ತಲಿನ ಹಳ್ಳಿಗಳಾದ ಕಡಬನಕಟ್ಟೆ, ಕೂನಬೇವು, ಬಂಗಾರಕ್ಕನಹಳ್ಳಿ ನಂತರ ತುರುವನೂರಿನಲ್ಲಿ ಹೀಗೆ ರಥೋತ್ಸವ ಹಿಂದಿನ ದಿನದವರೆಗೂ ಭಿಕ್ಷಾಟನೆ ಮಾಡುತ್ತಾರೆ.

ಮನೆ ಮನೆಗೆ ಹೋಗಿ ಭಿಕ್ಷಾಟನೆ ಮಾಡುವಾಗ ಆಯಾ ಮನೆಯವರು ಭಕ್ತಿಯಿಂದ ದೇವರನ್ನು ಸ್ವಾಗತಿಸಿ ಪೂಜಿಸಿ ಗೌರವಿಸುತ್ತಾರೆ. ಮನೆ ಮುಂದೆ ಕಂಬಳಿ ಮಡಚಿ ಉದ್ದವಾಗಿ ಹಾಸಿ ಅದರ ಮೇಲೆ ಆಯಾ ಮನೆಯವರು ಕೊಟ್ಟ ಬೆಲ್ಲ, ಬಾಳೆಹಣ್ಣುಗಳನ್ನು ಅನುಸರಿಸಿ ಮೂರು ಕಡೆ,ಐದು ಕಡೆ ಹೆಚ್ಚು ಕೊಟ್ಟಿದ್ದರೆ 9 ಕಡೆ ಇಟ್ಟು ಪೂಜಿಸುತ್ತಾರೆ.

 

ದಾಸಪ್ಪಗಳು ಇದರ ಸುತ್ತ ಪ್ರದಕ್ಷಿಣೆ ಮಾಡುತ್ತಾ ಗೋವಿಂದ ಜಪಿಸಿ ಜಾಗಟೆ ಬಾರಿಸುತ್ತಾರೆ.
ಮೂರು ಬಾರಿ ಪ್ರದಕ್ಷಿಣೆ ಮಾಡಿ ಪ್ರಸಾದವನ್ನು ಮನೆಯವರಿಗೆ ಸ್ವಲ್ಪ ಕೊಟ್ಟು ಉಳಿದದ್ದನ್ನು ತಮ್ಮ ಜೋಳಿಗೆಗೆ ಹಾಕಿಕೊಳ್ಳುತ್ತಾರೆ. ರೈತರು ಬೆಳೆದ ದವಸ ಧಾನ್ಯಗಳನ್ನು ಕೂಡ ದಾನ ಮಾಡುತ್ತಾರೆ.
ರಥೋತ್ಸವದ ಹಿಂದಿನ ದಿನ ಅರ್ಚಕರು ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿಕೊಂಡು ಪಂಜು ಮತ್ತು ಮಂಗಳ ವಾದ್ಯಗಳ ಜೊತೆಗೆ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ ಕಲ್ಲೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ತುಂಬಿಸಿಕೊಂಡು ಗಂಗಾ ಪೂಜೆಗೆ ತೆರಳುತ್ತಾರೆ. ಊರಿನ ದಕ್ಷಿಣ ಭಾಗದಲ್ಲಿ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಇರುವ ಗಂಗಮ್ಮನ ಬಾವಿಗೆ ಹೋಗಿ 2 ಮೂರ್ತಿಗಳನ್ನು ಶುಚಿಗೊಳಿಸಿ ಗಂಗಾ ಪೂಜೆ ಸಲ್ಲಿಸುತ್ತಾರೆ.

ಮಾರ್ಗ ಬರುವಾಗ ತುರುವಪ್ಪನ ಗುಡಿ ಹಾಗೂ ಬೇಟೆ ರಂಗಪ್ಪನ ಗುಡಿಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ.

ರಥೋತ್ಸವದ ವೈಭವ:
ತುರುವನೂರು ಗ್ರಾಮವು ಸಿಂಗಾರಗೊಂಡು ರಥೋತ್ಸವಕ್ಕೆ ಸಿದ್ಧವಾಗುತ್ತದೆ. ರಸ್ತೆಯುದ್ದಕ್ಕೂ ಮನೆಗಳ ಮುಂಭಾಗದಲ್ಲಿ ರಂಗೋಲಿಗಳು ಸಿಂಗರಿಸಿರುತ್ತವೆ. ಮನೆಗಳು ತಳಿರು ತೋರಣ ದೀಪಾಲಂಕಾರ ಗಳಿಂದ ಶೋಭಿಸುತ್ತವೆ. ಮನೆಗಳಿಗೆ ಇಷ್ಟರು ನೆಂಟರು ಸಂಬಂಧಿಕರು ದೂರದ ಊರಿನಿಂದ ಬರುವ ಕುಲಸ್ಥರು ಹಳೆ ಗ್ರಾಮ ನಿವಾಸಿಗಳು ಪರ ಊರಿನಲ್ಲಿ ಇರುವವರು ಎಲ್ಲರೂ ಅವರವರ ಸಂಬಂಧಿಕರ ಮನೆಗಳಿಗೆ ಬಂದಿರುತ್ತಾರೆ. ಮನೆಗಳಲ್ಲಿ ಜನರ ಓಡಾಟ ಮಾತು,ನಗು, ನೋಡುವುದೇ ಖುಷಿ ಸಂಭ್ರಮ ತರುತ್ತದೆ. ಹಳೆ ಮುನಿಸು,ಜಗಳ,ಮಾತು ಬಿಟ್ಟವರೆಲ್ಲ ಈ ಸಂದರ್ಭದಲ್ಲಿ ಒಂದಾಗುತ್ತಾರೆ,ಮನಸ್ಸುಗಳು ಬೆರೆಯುತ್ತವೆ.
ಎಲ್ಲೆಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಆಂಜನೇಯ ಸ್ವಾಮಿ ದೇವಾಲಯವಂತೂ ಸರ್ವ ವಿಧದಲ್ಲಿ ಸಿಂಗಾರಗೊಂಡಿರುತ್ತದೆ ಪೂಜಾ ವಿಧಾನಗಳು ಬೆಳಗಿನಿಂದಲೇ ಶುರುವಾಗಿರುತ್ತದೆ. ತುರುವನೂರು ಆಂಜನೇಯ ಸ್ವಾಮಿಯಂತೂ ಹೂಗಳಿಂದ ಅಲಂಕೃತ ಗೊಂಡು ನೋಡಲು ಎರಡು ಕಣ್ಣು ಸಾಲದೆಂಬಷ್ಟು ಸುಂದರವಾಗಿ ನಯನ ಮನೋಹರವಾಗಿ ಬಂದ ಭಕ್ತರಿಗೆ ದರ್ಶನ ನೀಡುತ್ತಾನೆ.

ಭಕ್ತಾದಿಗಳು ತೇರಿಗಾಗಿಯೇ ವಿಶೇಷವಾಗಿ ದೊಡ್ಡ ದೊಡ್ಡ ಹೂಗಳ ಮಾಲೆಗಳನ್ನು ತಂದು ಅಲಂಕರಿಸಿರುತ್ತಾರೆ. ಬೆಳಗ್ಗೆ 9ರ ಸಮಯದಲ್ಲಿ ಸ್ವಾಮಿಯನ್ನು ಪ್ರತಿಷ್ಠಾಪಿಸಿದ
ನಂತರ ತೇರಿಗೆ ಎಡೆ ಹಾಕಿ ಪೂರ್ವದ ದಿಕ್ಕಿನ ಕಡೆಗೆ ದೇವರ ನಾಮ ಸ್ಮರಣೆಯೊಂದಿಗೆ ಎಳೆಯಲಾಗುತ್ತದೆ.
ಮಂಗಳವಾದ್ಯ,ನಂದಿಧ್ವಜ ಸಾಂಸ್ಕೃತಿಕ ಚಟುವಟಿಕೆ ಗಳ ಸಂಭ್ರಮ ಮೇರೆ ಮೀರುತ್ತದೆ. ತೇರನ್ನು ಪಾದಗಟ್ಟೆವರೆಗೆ ಎಳೆದು ಅಡವಿ ಆಂಜನೇಯ ಸ್ವಾಮಿ ದೇವಾಲಯದ ಬಳಿಯಲ್ಲಿ ತಂದು ನಿಲ್ಲಿಸಲಾಗುತ್ತದೆ. ಬಂದ ಭಕ್ತರಿಗೆ ಪ್ರಸಾದದ ಹಾಗೂ ಊಟದ ವ್ಯವಸ್ಥೆ ಇರುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...