ಬೆಂಗಳೂರು: ಆನ್ಲೈನ್ ಬೆಟ್ಟಿಂಗ್ ಆಪ್ ಗಳಿಗೆ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಜೈಲು ಪಾಲಾಗಿದ್ದಂತ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಅವರು ಇಂದು ಪರಪ್ಪನ ಅಗ್ರಹಾರದಿಂದ ರಿಲೀಸ್ ಆಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗೆ ಬಂದ ಕೂಡಲೇ ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಸಂಭ್ರಮಿಸಿದ್ದಾರೆ.
ಬಿಡುಗಡೆಯಾದ ವೀರೇಂದ್ರ ಪಪ್ಪಿ ಅವರನ್ನು ಹೂವಿನ ಹಾರ ಹಾಕಿ ಸ್ವಾಗತ ಮಾಡಿದ್ದಾರೆ. ವೀರೇಂದ್ರ ಪಪ್ಪಿ ಅವರು ಬರುವುದನ್ನೇ ಅಭಿಮಾನಿಗಳು ಕಾಯುತ್ತಿದ್ದರು. ಬಂದೊಡನೆ ಅವರನ್ನ ಸ್ವಾಗತಿಸಿ, ಸಂಭ್ರಮಿಸಿದ್ದಾರೆ. ಪಟಾಕಿ ಸಿಡಿಸಿ, ಹಾರ ಹಾಕಿ ಕುಣಿದು ಕುಪ್ಪಳಿಸಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ.
ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ (PMLA) ವೀರೇಂದ್ರ ಪಪ್ಪಿಯನ್ನ ಜಾರಿ ನಿರ್ದೇಶನಾಲಯ (ED) ಬಂಧಿಸಿತ್ತು. ಚಿತ್ರದುರ್ಗ, ಬೆಂಗಳೂರು ಸೇರಿದಂತೆ ವೀರೇಂದ್ರ ಪಪ್ಪಿ ಮನೆ, ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಹಲವು ದಾಖಲೆಗಳನ್ನ ವಶಕ್ಕೆ ಪಡೆದು, ವೀರೇಂದ್ರ ಪಪ್ಪಿಯ ಖಾತೆಗಳನ್ನು ಫ್ರೀಜ್ ಮಾಡಲಾಗಿತ್ತು. ಕಳೆದ ನಾಲ್ಕು ತಿಂಗಳಿನಿಂದ ಜೈಲಿನಲ್ಲಿದ್ದ ಪಪ್ಪಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. 5 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿ, ಸಾಕ್ಷಿನಾಶ ಮಾಡಬಾರದು, ದೇಶಬಿಟ್ಟು ತೆರಳಬಾರದೆಂಬ ಷರತ್ತಿನೊಂದಿಗೆ ಜಾಮೀನು ನೀಡಿದೆ.
















