ಉಪಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಪ್ರಚಾರ ನಡೆಸಿದ ಮಾಜಿ ಸಂಸದ ಪ್ರತಾಪ ಸಿಂಹ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಾಗಲಕೋಟೆಯಲ್ಲಿ ಖಾಸಗಿ ವಾಹಿನಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರದ ಆಡಳಿತವನ್ನು ತೀವ್ರವಾಗಿ ಟೀಕಿಸಿದರು.
ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಪ್ರತಾಪ ಸಿಂಹ, “ಈಗಿನ ಸರ್ಕಾರದ ಲೂಟಿ ನೋಡಿದ ಮೇಲೆ ಅವರು ಮಾತಾಡಲು ಸಾಧ್ಯವಾಗದೇ ಹೋದರು” ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವರ ಕುರಿತು ಮಾತನಾಡಿದ ಅವರು, “ಹೆಸರಷ್ಟೇ ಹಿಂದೂ, ಆದರೆ ಅವರ ನಡೆ-ನುಡಿಗಳಲ್ಲಿ ಹಿಂದೂ ಧರ್ಮದ ಲಕ್ಷಣಗಳು ಕಾಣುತ್ತಿಲ್ಲ” ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷವು ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದರೂ, ಕಾರ್ಯಪ್ರವೃತ್ತಿಯಲ್ಲಿ ಅದನ್ನು ಅನುಸರಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
ನಾಗಮಂಗಲದಲ್ಲಿ ಗಣೇಶ ಶೋಭಾಯಾತ್ರೆ ವೇಳೆ ಕಲ್ಲುತೂರಾಟ ನಡೆದಾಗ ಮುಖ್ಯಮಂತ್ರಿ ಅದನ್ನು ಸಣ್ಣ ಘಟನೆ ಎಂದು ಹೇಳಿ ಸ್ಥಳಕ್ಕೆ ಭೇಟಿ ನೀಡದಿರುವುದನ್ನು ಅವರು ಪ್ರಶ್ನಿಸಿದರು. ಇದೇ ರೀತಿಯಾಗಿ ಮದ್ದೂರಿನ ಮಸೀದಿ ಘಟನೆ, ಅಣ್ಣಮ್ಮ ಜಾತ್ರೆ ಹಾಗೂ ಶಿವಾಜಿ ಜಯಂತಿ ಸಂದರ್ಭಗಳಲ್ಲಿ ನಡೆದ ಕಲ್ಲುತೂರಾಟ ಪ್ರಕರಣಗಳ ಕುರಿತು ಸರ್ಕಾರದ ನಿಲುವು ಏನು ಎಂಬುದನ್ನೂ ಪ್ರಶ್ನಿಸಿದರು.
“ಕಾಂಗ್ರೆಸ್ ನಿಜವಾದ ಹಿಂದುಗಳ ಪರವಾಗಿದ್ದರೆ ಇಂತಹ ಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿತ್ತು,” ಎಂದು ಪ್ರತಾಪ ಸಿಂಹ ಅಭಿಪ್ರಾಯಪಟ್ಟರು.
ಇದೇ ವೇಳೆ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೂ ಅವರು ಟೀಕೆ ವ್ಯಕ್ತಪಡಿಸಿ, “ಹಿಂದಿನ ಎಲ್ಲಾ ಮುಖ್ಯಮಂತ್ರಿಗಳು ಮಾಡಿದ ಸಾಲಕ್ಕಿಂತ ಸಿದ್ದರಾಮಯ್ಯ ಅವಧಿಯಲ್ಲಿ ಹೆಚ್ಚು ಸಾಲವಾಗಿದೆ. ಆದ್ದರಿಂದ ಅವರನ್ನು ‘ಸಾಲರಾಮಯ್ಯ’ ಎಂದು ಕರೆಯಬಹುದು,” ಎಂದು ವ್ಯಂಗ್ಯವಾಡಿದರು.ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಗಮನಾರ್ಹ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳಲ್ಲಿಯೂ ಸುಧಾರಣೆ ಕಂಡುಬಂದಿಲ್ಲ ಎಂದು ಅವರು ಆರೋಪಿಸಿದರು.

















