ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಬ್ಬರಿಸಿದ್ದಾರೆ. ನಾನೇ ವಿರೋಧ ಪಕ್ಷದ ನಾಯಕ ಎಂದು ಅಬ್ಬರಿಸಿದ್ದಾರೆ. ವಿಧಾನಸಭೆಯಲ್ಲಿ ಕುರ್ಚಿ ಬದಲಿಸಿದ್ದಕ್ಕೆ ಗರಂ ಆದ ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ್, ನಾವೆಲ್ಲರೂ ಹಿರಿಯ ಶಾಸಕರು, ಆದರೆ ನಮ್ಮನ್ನು ಹಿಂದಕ್ಕೆ ಹಾಕಿದ್ದೀರಾ. ಇದು ಯಾವ ನ್ಯಾಯ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್ ಶಾಸಕ ರಂಗನಾಥ್ ಮಾತನಾಡಿ, ಯತ್ನಾಳ್ ಅವರನ್ನ ಬಿಜೆಪಿಯವರು ಅನಾಥರನ್ನಾಗಿ ಮಾಡಿದ್ದಾರೆ. ಅವರ ಜೊತೆ ನಾವು ನಿಲ್ಲುತ್ತೇವೆ ಎಂದು ಕಾಲೆಳೆದರು.
ಇದೆ ವೇಳೆ ಸ್ಪೀಕರ್ ಯುಟಿ ಖಾದರ್ ಸ್ಪಷ್ಟನೆ ನೀಡಿ, ರಾಜಕೀಯದಲ್ಲಿ ಸೀನಿಯರ್, ಜೂನಿಯರ್ ಅಂತಿಲ್ಲ. ಅಧಿಕಾರದಲ್ಲಿದ್ದಾಗ ಸೀನಿಯರ್, ಇಲ್ಲದಿದ್ದಾಗ ಜೂನಿಯರ್, ಶಾಸಕರ ಸಂಖ್ಯಾಬಲ ನೋಡಿಕೊಂಡು ಸೀಟು ಕೊಡೋದು. ನಿಮಗೆ ಬೇಕಾದಾಗ ಇಲ್ಲಿ ಇರುತ್ತೀರಾ, ಬೇಡ ಅಂದಾಗ ಅಲ್ಲಿಗೆ ಹೋಗ್ತೀರಿ ಎಂದರು. ಬಳಿಕ ಮಾತನಾಡಿದ ಯತ್ನಾಳ್, ಬೇಕಾದಾಗ ಅಂತ ಅಲ್ಲ ನಾನೊಬ್ಬ ನಿಷ್ಠಾವಂತ ಕಾರ್ಯಕರ್ತ. ಈ ಸದನದಲ್ಲಿ ನಿಜವಾದ ವಿರೋಧ ಪಕ್ಷದ ನಾಯಕ ಅಂದರೆ ನಾನೇ. ನಾನು ಅಡ್ಜೆಸ್ಟ್ಮೆಂಟ್ ರಾಜಕಾರಣಿ ಅಲ್ಲ. ನಾನೇನು ಸಿಎಂ ಮನೆಗೆ ಹೋಗಿಲ್ಲ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಎದುರಲ್ಲೇ ನಾನೇ ನಿಜವಾದ ವಿರೋಧ ಪಕ್ಷದ ನಾಯಕ ಎಂದು ಟಾಂಗ್ ಕೊಟ್ಟರು.
ಒಟ್ಟಾರೆ ಇಂದಿನ ಸದನದಲ್ಲಿ ವಿರೋಧ ಪಕ್ಷದ ನಾಯಕನ ಬಗ್ಗೆಯೇ ಜೋರು ಚರ್ಚೆಯಾಗಿದೆ. ಸದ್ಯ ವಿರೋಧ ಪಕ್ಷದ ನಾಯಕರಾಗಿ ಆರ್.ಅಶೋಕ್ ಅವರು ಇದ್ದಾರೆ. ಆಡಳಿತ ಪಕ್ಷವನ್ನು ಎಲ್ಲಾ ವಿಚಾರದಲ್ಲೂ ತರಾಟೆ ತೆಗೆದುಕೊಳ್ಳುತ್ತಾರೆ. ಇದೀಗ ಶಾಸಕ ಯತ್ನಾಳ್ ಅವರು ನಾನೇ ವಿರೋಧ ಪಕ್ಷದ ನಾಯಕ ಎಂದಿದ್ದಾರೆ.


