Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

“ವಿಧಿಯ ಆಟ”ದಲ್ಲಿ ಕಾಲು ಕಳೆದುಕೊಂಡರೂ ಕಾಲ”ಚಕ್ರಕ್ಕೆ ಪಂಚರ್” ಹಾಕಿದ ಅಬ್ದುಲ್ ರಜಾಕ್!

---Advertisement---

ಸುದ್ದಿಒನ್, ಚಿತ್ರದುರ್ಗ, ಮೇ.20 : ಬದುಕು ಕೆಲವೊಮ್ಮೆ ಕ್ರೂರವಾಗಿ ಪರೀಕ್ಷೆ ಒಡ್ಡುತ್ತದೆ. ಇದ್ದಕ್ಕಿದ್ದಂತೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿ, ಮುಂದಿನ ದಾರಿ ಕಾಣದೆ ಕತ್ತಲಲ್ಲಿ ತಡಕಾಡುವಂತೆ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಬಹುತೇಕರು ಹಣೆಬರಹವನ್ನು ದೂಷಿಸುತ್ತಾ ಮಂಡಿಯೂರಿ ಕೂತುಬಿಡುತ್ತಾರೆ.

ಆದರೆ, ಚಿತ್ರದುರ್ಗದ ಈ 66 ವರ್ಷದ ವೃದ್ಧ ಮಾತ್ರ ವಿಧಿಯ ಆಟಕ್ಕೆ ಮಣಿಯಲಿಲ್ಲ. ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡರೂ, ಬೇರೆಯವರ ಮುಂದೆ ಕೈಚಾಚದೆ, ಸ್ವಾವಲಂಬನೆಯಿಂದ ಬದುಕಿನ ಕಾಲ’ಚಕ್ರ’ಕ್ಕೆ ‘ಪಂಚರ್’ ಹಾಕುತ್ತಾ ಸಾಗುತ್ತಿರುವ ಇವರ ಕಥೆ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ.ಅವರೇ ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯ ಮುಖ್ಯ ರಸ್ತೆಯಲ್ಲಿರುವ DKH ಪಂಚರ್ ಶಾಪ್.

 

1960 ರಲ್ಲಿ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿಯಲ್ಲಿ ಜನಿಸಿದ ಅಬ್ದುಲ್ ರಜಾಕ್ ಅವರಿಗೆ ಬಾಲ್ಯದಿಂದಲೇ ಬಡತನದ ಒಡನಾಟ. ಬಡತನದ ಕಾರಣದಿಂದಾಗಿ ಅವರಿಗೆ ಸಿಕ್ಕಿದ್ದು ಕೇವಲ ಮೂರನೇ ತರಗತಿಯವರೆಗಿನ ಓದು ಮಾತ್ರ. ತದನಂತರ ಕುಟುಂಬ ನಿರ್ವಹಣೆಗಾಗಿ ಕೂಲಿ ಕೆಲಸಕ್ಕೆ ಇಳಿದ ರಜಾಕ್, 1980 ರಲ್ಲಿ ಇವರ ವಿವಾಹವಾಯಿತು. ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ದೊಡ್ಡ ಕುಟುಂಬದ ಜವಾಬ್ದಾರಿ ಇವರ ಹೆಗಲೇರಿತು. ಕುಟುಂಬವನ್ನು ಸಾಕೋ ಕಷ್ಟದಲ್ಲೇ ಲಾರಿ ಡ್ರೈವರ್ ವೃತ್ತಿಯನ್ನು ಕಲಿತು ಮುನ್ನಡೆದರು.

ಎಲ್ಲವೂ ಸುಗಮವಾಗಿ ಸಾಗುತ್ತಿದೆ ಎನ್ನುವಾಗಲೇ ವಿಧಿ ಇವರ ಬದುಕಿನಲ್ಲಿ ಕ್ರೂರ ಆಟವಾಡಿತು. 1989 ರಲ್ಲಿ ಹಿರಿಯೂರಿನಲ್ಲಿ ನಡೆದ ಒಂದು ಭೀಕರ ರಸ್ತೆ ಅಪಘಾತ ರಜಾಕ್ ಅವರ ಬದುಕನ್ನು ಸಂಪೂರ್ಣವಾಗಿ ಬದಲಿಸಿಬಿಟ್ಟಿತು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಇವರನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ದುರದೃಷ್ಟವಶಾತ್ ವೈದ್ಯರು ಇವರ ಜೀವ ಉಳಿಸಲು ಬಲಗಾಲನ್ನು ಕತ್ತರಿಸಿ ತೆಗೆಯಬೇಕಾಯಿತು. ಒಂದೇ ಕ್ಷಣದಲ್ಲಿ ಇಡೀ ಕುಟುಂಬದ ಆಧಾರಸ್ತಂಭವಾಗಿದ್ದ ವ್ಯಕ್ತಿ ವಿಕಲಚೇತನರಾಗಿದ್ದರು. ಕಣ್ಣಮುಂದೆ ನಾಲ್ಕು ಮಕ್ಕಳ ಭವಿಷ್ಯ, ಪತ್ನಿಯ ಮುಖ. ಒಂದು ಕಾಲು ಇಲ್ಲದೆ ಹೇಗೆ ಬದುಕುವುದು ಎಂಬ ಯಕ್ಷಪ್ರಶ್ನೆ ಎದುರಾದಾಗಲೂ ರಜಾಕ್ ಧೃತಿಗೆಡಲಿಲ್ಲ. ಬಲಗಾಲು ಕಳೆದುಕೊಂಡು ತೀವ್ರ ನೋವಿನಲ್ಲಿದ್ದ ಅಬ್ದುಲ್ ರಜಾಕ್ ಅವರಿಗೆ ಕೆಲವು ಸ್ನೇಹಿತರು ಬೆಂಗಳೂರಿನ ಭಗವಾನ್ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ಉಚಿತವಾಗಿ ಕೃತಕ ಕಾಲು ಜೋಡಣೆ ಬಗ್ಗೆ ತಿಳಿಸುತ್ತಾರೆ.

ಆಗ ರಜಾಕ್ ಅವರು ಕೃತಕ ಕಾಲು ಜೋಡಣೆ ಮಾಡಿಸಿಕೊಂಡು ವಿಧಿಗೇ ಸವಾಲು ಹಾಕಿ,
” ನೀ‌ ಏನೇ ಮಾಡು ಹೆದರುವೆನೇನು”
“ಬಾಳುವೆನು‌ ನೋಡು, ಬದುಕುವೆನು ನೋಡು ”
ಎಂದು ಪ್ರತಿ ಸವಾಲು ಹಾಕಿ ಜೀವನದಲ್ಲಿ ಸಾಧಿಸಿ ತೋರಿಸಿದರು.

DKH ಪಂಚರ್ ಶಾಪ್ ಮೂಲಕ ಹೊಸ ಬದುಕು :
ಕಾಲು ಹೋದರೂ ಕೈಯಲ್ಲಿದ್ದ ಕಾಯಕದ ನಂಬಿಕೆ ಸಾಯಲಿಲ್ಲ. ಅಪಘಾತದ ನಂತರ ಕೆಲಕಾಲ ಜೀವನೋಪಾಯಕ್ಕಾಗಿ ಬೇರೆ ಕಡೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿದರು. ಆದರೆ, ಸ್ವಂತವಾಗಿ ಏನಾದರೂ ಸಾಧಿಸಬೇಕು, ಯಾರಿಗೂ ಹೊರೆಯಾಗಬಾರದು ಎಂದು ನಿರ್ಧರಿಸಿದ ಅಬ್ದುಲ್ ರಜಾಕ್, 2000 ನೇ ಇಸವಿಯಲ್ಲಿ ಚಿತ್ರದುರ್ಗದಲ್ಲಿ ಸ್ವತಃ ತಾವೇ ಒಂದು ಪಂಚರ್ ಅಂಗಡಿಯನ್ನು ಪ್ರಾರಂಭಿಸಿದರು. ಅದೇ ‘DKH ಪಂಚರ್ ಶಾಪ್’. ಇವರ ಜೊತೆಯಲ್ಲಿ ಮಕ್ಕಳು ಕೂಡಾ ಇದೇ ವೃತ್ತಿಯಲ್ಲಿ ಮುಂದುವರೆದಿದ್ದಾರೆ.

ಒಂದು ಕಾಲಿಲ್ಲದಿದ್ದರೂ ನೆಲದ ಮೇಲೆ ಕುಳಿತುಕೊಂಡು ಬೈಕ್, ಕಾರು, ಸೇರಿದಂತೆ ಭಾರಿ ಗಾತ್ರದ ವಾಹನಗಳ ಟೈರ್ ಗಳನ್ನು ಬಿಚ್ಚುವುದು, ಪಂಚರ್ ಹಾಕುವುದು ಇವರಿಗೆ ಸಲೀಸು. ಕಳೆದ 26 ವರ್ಷಗಳಿಂದ ಇದೇ ಪಂಚರ್ ಅಂಗಡಿಯಿಂದ ಬರುವ ಆದಾಯದಲ್ಲೇ ಇವರು ತಮ್ಮ ಇಡೀ ಕುಟುಂಬವನ್ನು ಗೌರವಯುತವಾಗಿ ಮುನ್ನಡೆಸುತ್ತಿರುವ ಅಬ್ದುಲ್ ರಜಾಕ್ ಇಂದಿನ ಯುವ ಪೀಳಿಗೆಗೆ ದೊಡ್ಡ ಪಾಠ. ದಣಿವರಿಯದ ಈ ಕಾಯಕ ಯೋಗಿಗೆ ನಮ್ಮದೊಂದು ಸಲಾಂ! ಅಬ್ದುಲ್ ರಜಾಕ್ ಅವರ ಮೊಬೈಲ್ ಸಂಖ್ಯೆ : 94486 56524

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now