ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 15 : ನಮ್ಮ ದೇಶದ ಯುವಜನತೆಯಲ್ಲಿ ರಾಷ್ಟ್ರಪ್ರೇಮ, ರಾಷ್ಟ್ರಗೌರವ ಭಾವನೆ ಹೆಚ್ಚಾಗಬೇಕು. ಹೆತ್ತ ತಾಯಿಯನ್ನು ಗೌರವಿಸುವಷ್ಟೇ, ಈ ಭರತ ಭೂಮಿಯನ್ನು ಪ್ರೀತಿಸಿ ಗೌರವಿಸಿ ಎಂದು ಖ್ಯಾತ ಯುವ ವಾಗ್ಮಿಗಳಾದ ಕು. ಹಾರಿಕ ಮಂಜುನಾಥ್ ಹೇಳಿದರು.
ನಗರದ ಎಸ್ ಆರ್ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸಡಗರ ಸಂಭ್ರಮದಿಂದ ನಡೆದ 79 ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಲಸಿಕೆ ಕಂಡುಹಿಡಿದು ವಿಶ್ವದಲ್ಲೇ 5ನೇ ಸ್ಥಾನಕ್ಕೆ ಏರಿದ ಗೌರವ ನಮ್ಮ ದೇಶಕ್ಕಿದೆ. ಭಾರತದ ಯೋಗ ದಿನಾಚರಣೆಯನ್ನು ಇಡೀ ವಿಶ್ವವೇ ಅನುಸರಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯ. ನಮ್ಮ ಋಷಿ ಮುನಿಗಳು ನೀಡಿದ ಜ್ಞಾನದ ಕಾಣಿಕೆ ಅವಿಸ್ಮರಿಣಿಯ. ಇವತ್ತಿನ ಯುವ ಪೀಳಿಗೆ ದೇಹಬಲ, ಆತ್ಮಬಲ ಹಾಗೂ ಮನೋಬಲ ಸದೃಢವಾಗುವುದರೊಂದಿಗೆ ಈ ದೇಶವನ್ನು ನನ್ನ ದೇಶವೆಂಬ ಅಭಿಮಾನದೊಂದಿಗೆ ಗೌರವಿಸಬೇಕು ಎಂದರು.
ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಎಸ್ ಆರ್ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತಲಿಂಗಾರೆಡ್ಡಿ ಇವರು ಆಗಸ್ಟ್ 15 ಪ್ರತಿಯೊಬ್ಬ ಭಾರತೀಯನ ಸಂತೋಷದ ಸುದಿನ. ಏಕೆಂದರೆ ಮೂವತ್ತು ದಶಕಗಳ ಹಿಂದೆ ಭಾರತಿಯರೆಂದರೆ ತುಂಬಾ ಕೀಳಿರಿಮೆಯಿಂದ ನೋಡುತ್ತಿದ್ದ ಜಗ್ತತ್ತು ಈಗ ತುಂಬಾ ಗೌರವದಿಂದ ಕಾಣುತ್ತಿರುವುದಕ್ಕೆ ಕಾರಣ ಭಾರತ ಪ್ರಗತಿಪಥದತ್ತ ಸಾಗುತ್ತಿರುವುದು. “ಮಕ್ಕಳು ಈ ದೇಶದ ಸಂಪತ್ತು” ಎಂದು ಗಾಂಧೀಜಿಯವರು ಹೇಳಿದರು. ಇತ್ತೀಚಿನ ದಿನಗಳಲ್ಲಿ ಯುವಕರು ಒಟ್ಟಾಗಿ ಈ ದೇಶದ ಘನತೆ ಗೌರವವನ್ನು ಕಾಪಾಡುವುದರೊಂದಿಗೆ ಈ ಮಣ್ಣಿಗೆ ಹಾಗೂ ತಂದೆ ತಾಯಿಗಳಿಗೆ ಗೌರವವನ್ನು ತರಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಬಿ ಎಲ್ ಅಮೋಘ್, ಆಡಳಿತಾಧಿಕಾರಿಗಳಾದ ಡಾ. ರವಿ ಟಿ ಎಸ್, ಎಲ್ಲಾ ವಿಭಾಗಗಳ ಪ್ರಾಂಶುಪಾಲರುಗಳು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
















