Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜೂನ್ 21ರಂದು ಕೋಟೆನಾಡಿನಲ್ಲಿ 12ನೇ ಅಂತರರಾಷ್ಟೀಯ ಯೋಗ ದಿನಾಚರಣೆ : ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಒತ್ತಡ ಮುಕ್ತ ಜೀವನಕ್ಕೆ ಯೋಗ ಪ್ರಸ್ತುತ

---Advertisement---

 

ಚಿತ್ರದುರ್ಗ. ಜೂನ್10:   ಬದಲಾದ ಆಧುನಿಕ ಜೀವನಶೈಲಿ, ತೀವ್ರ ಮಾನಸಿಕ ಒತ್ತಡ ಹಾಗೂ ವಯೋಸಹಜ ದೌರ್ಬಲ್ಯಗಳನ್ನು ಮೀರಿ, ಶಾರೀರಿಕ ಮತ್ತು ಮಾನಸಿಕ ಸದೃಢತೆ ಕಾಯ್ದುಕೊಳ್ಳಲು ಯೋಗ ಇಂದಿನ ದಿನಗಳಲ್ಲಿ ಎಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ ತಿಳಿಸಿದ್ದಾರೆ.

 

ಜೂನ್ 21ರಂದು ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಅವರು ಯೋಗದ ಮಹತ್ವ ಹಾಗೂ ಜಿಲ್ಲೆಯಲ್ಲಿ ನಡೆಯಲಿರುವ ಸಿದ್ಧತೆಗಳ ಕುರಿತು ಸಾರ್ವಜನಿಕರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
2014ರಲ್ಲಿ ಭಾರತದ ಪ್ರಧಾನಮಂತ್ರಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗದ ಅವಶ್ಯಕತೆಯನ್ನು ಪ್ರಸ್ತಾಪಿಸಿದಾಗ, ಸದಸ್ಯ ರಾಷ್ಟ್ರಗಳು ಸರ್ವಾನುಮತದಿಂದ ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವಾಗಿ ಘೋಷಿಸಿದವು. ಉತ್ತರಾರ್ಧಗೋಳದಲ್ಲಿ ಈ ದಿನದಂದು ಸುದೀರ್ಘವಾದ ಹಗಲು ಇರಲಿದ್ದು, ಸೂರ್ಯನ ಶಕ್ತಿ ಭೂಮಿಗೆ ಅತ್ಯಧಿಕ ಪ್ರಮಾಣದಲ್ಲಿ ಸಿಗುತ್ತದೆ. ಈ ವೈಜ್ಞಾನಿಕ ಹಿನ್ನೆಲೆಯಲ್ಲಿ ಜೂನ್ 21 ಅನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, 2015 ರಿಂದ ಪ್ರಪಂಚದಾದ್ಯಂತ ನಿರಂತರವಾಗಿ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷವೂ ಯೋಗದ ಸಾಧ್ಯತೆಗಳನ್ನು ಜಗತ್ತಿಗೆ ಸಾರಲು ವಿಶೇಷ ಧ್ವೇಯವಾಕ್ಯ ಬಳಸಲಾಗುತ್ತಿದ್ದು, ಈ ಬಾರಿ ‘Yoga for Healthy Aging’ ಅಂದರೆ ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ. ಮನುಷ್ಯನ ಆಯಸ್ಸು ಕ್ಷೀಣಿಸುತ್ತಿದ್ದಂತೆ ವಯೋಸಹಜ ದೌರ್ಬಲ್ಯಗಳು ಕಾಣಿಸಿಕೊಳ್ಳುತ್ತವೆ. ವಯಸ್ಸಾಗುವ ಪ್ರಕ್ರಿಯೆಯನ್ನು ಆರೋಗ್ಯಕರವಾಗಿ ಎದುರಿಸಲು ಮತ್ತು ವೃದ್ಧಾಪ್ಯದ ಲಕ್ಷಣಗಳನ್ನು ಮುಂದೂಡಲು ಯೋಗವೇ ಏಕೈಕ ಸರಳ ಮತ್ತು ಸುರಕ್ಷಿತ ಮಾರ್ಗ.
ಇತ್ತೀಚಿನ ಸಂಶೋಧನೆಗಳ ಪ್ರಕಾರ ಬಹುತೇಕ ಕಾಯಿಲೆಗಳು ‘ಸೈಕೋಸೊಮ್ಯಾಟಿಕ್’ (ಮನೋದೈಹಿಕ), ಅಂದರೆ ಮನಸ್ಸಿನ ಒತ್ತಡದಿಂದಲೇ ಉಂಟಾಗುತ್ತಿವೆ. ಸೋಂಕು ರೋಗಗಳನ್ನು ಔಷಧಿಗಳಿಂದ ಗುಣಪಡಿಸಬಹುದು, ಆದರೆ ಅಸಮರ್ಪಕ ಜೀವನಶೈಲಿಯಿಂದ ಬರುವ ಬೊಜ್ಜು, ಮಧುಮೇಹ, ರಕ್ತದೊತ್ತಡ, ಗ್ಯಾಸ್ಟ್ರಿಟಿಸ್‍ನಂತಹ ಸಮಸ್ಯೆಗಳಿಗೆ ಕೇವಲ ಔಷಧಿಗಳಿಂದ ಮುಕ್ತಿ ಸಿಗದು. ಜಿಮ್, ಜಾಗಿಂಗ್‍ಗಳಿಂದ ಕೇವಲ ಶಾರೀರಿಕ ಆರೋಗ್ಯ ಸಿಕ್ಕರೆ, ಯೋಗದ ಅಷ್ಟಾಂಗಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ ಮತ್ತು ಸಮಾಧಿಗಳ ಪಾಲನೆಯಿಂದ ದೈಹಿಕ ಮತ್ತು ಮಾನಸಿಕ ಎರಡೂ ಆರೋಗ್ಯ ಲಭಿಸುತ್ತದೆ. ಯೋಗದಲ್ಲಿ ಉಸಿರಾಟಕ್ಕೆ ಹೆಚ್ಚಿನ ಮಹತ್ವವಿದ್ದು, ದೀರ್ಘ ಉಸಿರಾಟದಿಂದ ದೇಹಕ್ಕೆ ಆಮ್ಲಜನಕ ದೊರೆತು ಹಾರ್ಮೋನ್ ಏರುಪೇರುಗಳು ನಿಯಂತ್ರಣಕ್ಕೆ ಬರುತ್ತವೆ. ಸುಮಾರು 5000 ವರ್ಷಗಳ ಹಿಂದೆ ಬದುಕಿದ್ದ ಪತಂಜಲಿ ಮಹರ್ಷಿಗಳು ಈ ಯೋಗ ಪದ್ಧತಿಯ ಪ್ರವರ್ತಕರಾಗಿದ್ದು, ಇದು ಭಾರತ ಜಗತ್ತಿಗೆ ನೀಡಿದ ಹೆಮ್ಮೆಯ ಕೊಡುಗೆಯಾಗಿದೆ.

 

ವಿಶ್ವದಾದ್ಯಂತ ಸುಮಾರು 190 ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಯೋಗ ದಿನ ಆಚರಿಸಲಾಗುತ್ತಿದ್ದು, ಈ ಬಾರಿಯ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪಶ್ಚಿಮ ಬಂಗಾಳದ ಕಲ್ಕತ್ತಾದಲ್ಲಿ ನಡೆಯಲಿದೆ. ಚಿತ್ರದುರ್ಗ ಜಿಲ್ಲಾ ಕೇಂದ್ರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಜೂನ್ 21 ರಂದು ಮುಂಜಾನೆ 7 ರಿಂದ 7.45 ರವರೆಗೆ ರಾಷ್ಟ್ರೀಯ ನಿಯಮಾವಳಿ ‘Common Yoga Protocol’ ನಂತೆ 45 ನಿಮಿಷಗಳ ಸರಳ ಯೋಗಾಭ್ಯಾಸ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಜಿಲ್ಲೆಯ ವಿವಿಧ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳು ಹಾಗೂ ಯೋಗಾಸನ ಸಂಸ್ಥೆಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಉಪನ್ಯಾಸ ಹಾಗೂ ಜಾಥಾಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಯೋಗ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ಎಂಬ ಉದ್ದೇಶದಿಂದ ಆಯುಷ್ ಇಲಾಖೆ ವತಿಯಿಂದ ಪ್ರತಿದಿನ ಮುಂಜಾನೆ 5.30 ರಿಂದ 6.30 ರವರೆಗೆ ವರ್ಷಪೂರ್ತಿ ಆನ್‍ಲೈನ್ ಲಿಂಕ್ ಮೂಲಕ ಉಚಿತ ‘ನಿತ್ಯ ಯೋಗ’ ತರಬೇತಿ ನೀಡಲಾಗುತ್ತದೆ. ಇದರಲ್ಲಿ 45 ನಿಮಿಷ ಯೋಗಾಭ್ಯಾಸ ಹಾಗೂ 15 ನಿಮಿಷ ವೈದ್ಯರಿಂದ ಆರೋಗ್ಯ ಸಲಹೆ ಇರಲಿದ್ದು, ರಾಜ್ಯದ ಜನತೆ ಇದರ ಸದುಪಯೋಗ ಪಡೆಯಬಹುದು. ಇದರೊಂದಿಗೆ ಜಿಲ್ಲೆಯ 10 ಆಯುಷ್ ಚಿಕಿತ್ಸಾಲಯಗಳನ್ನು  ರಾಷ್ಟ್ರೀಯ ಆಯುಷ್ ಅಭಿಯಾನದಡಿ ‘ಆಯುಷ್ಮಾನ್ ಆರೋಗ್ಯ ಮಂದಿರ’ಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಇಲ್ಲಿ ತಲಾ ಇಬ್ಬರು ಯೋಗ ತರಬೇತುದಾರರಿದ್ದು, ಸಾರ್ವಜನಿಕರಿಗೆ ಉಚಿತವಾಗಿ ಕಾಯಿಲೆಗೆ ಪೂರಕವಾದ ಯೋಗಾಸನಗಳನ್ನು ಕಲಿಸಿಕೊಡುತ್ತಿದ್ದಾರೆ.

 

ಸುಖಕರ ಹಾಗೂ ಹಿತಕರ ಜೀವನಕ್ಕಾಗಿ ಪ್ರತಿಯೊಬ್ಬರೂ ಯೋಗ, ಧ್ಯಾನ ಮತ್ತು ಪ್ರಾಣಾಯಾಮವನ್ನು ಜೀವನದ ಅಂಗವಾಗಿಸಿಕೊಳ್ಳಬೇಕು. ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ನಡೆಯುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಜಿಲ್ಲೆಯ ಯೋಗಾಸಕ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ ಕೋರಿದ್ದಾರೆ.
============

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now