ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಪಡೆದಿರುವ ಶಾಸಕ ಜಮೀರ್ ಅಹ್ಮದ್ ಖಾನ್ ಅವರು, ಮೊದಲ ಪಟ್ಟಿಯಲ್ಲಿ ತಮ್ಮ ಹೆಸರು ಕೈತಪ್ಪಲು ಆಡಿಯೋ ಬಿಡುಗಡೆ ವಿವಾದವೇ ಪ್ರಮುಖ ಕಾರಣವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಚಾರವನ್ನು ತಾವು ಈ ಹಿಂದೆಯೇ ಹೇಳಿದ್ದೆ ಎಂದು ಅವರು ನೆನಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ ಅವಕಾಶ ಸಿಗದಿದ್ದರೂ ಯಾವುದೇ ಅಸಮಾಧಾನ ಹೊಂದಿರಲಿಲ್ಲ. ಎರಡನೇ ಪಟ್ಟಿಯಲ್ಲಿ ಅವಕಾಶ ಸಿಗುವ ನಿರೀಕ್ಷೆ ಇದ್ದರೂ, ಹೈಕಮಾಂಡ್ ಯಾವ ನಿರ್ಧಾರ ಕೈಗೊಂಡರೂ ಅದನ್ನು ಗೌರವಿಸುವ ಮನೋಭಾವದಲ್ಲೇ ಇದ್ದೆ ಎಂದರು.

“ಪಕ್ಷ 2028ರ ವಿಧಾನಸಭೆ ಚುನಾವಣೆಗೆ ಸಂಘಟನಾ ಕೆಲಸ ಮಾಡುವಂತೆ ಸೂಚಿಸಿದ್ದರೂ ಅದಕ್ಕೂ ಸಿದ್ಧನಿದ್ದೆ. ಆದರೆ ಇದೀಗ ಪಕ್ಷ ನನ್ನ ಮೇಲೆ ವಿಶ್ವಾಸ ಇಟ್ಟು ಸಚಿವ ಸ್ಥಾನ ನೀಡಿದೆ. ಈ ಜವಾಬ್ದಾರಿಯನ್ನು ಜನರ ನಿರೀಕ್ಷೆಗೆ ತಕ್ಕಂತೆ ಪ್ರಾಮಾಣಿಕವಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸುತ್ತೇನೆ” ಎಂದು ಜಮೀರ್ ಹೇಳಿದರು.ತಮ್ಮ ವಿರುದ್ಧ ನಡೆದ ರಾಜಕೀಯ ಬೆಳವಣಿಗೆಗಳು ಮತ್ತು ವಿರೋಧಿಗಳ ಪ್ರಯತ್ನಗಳ ಕುರಿತು ಈಗ ಪ್ರತಿಕ್ರಿಯಿಸಲು ಇಚ್ಛಿಸುವುದಿಲ್ಲ. ಸದ್ಯ ಪಕ್ಷ ನೀಡಿರುವ ಜವಾಬ್ದಾರಿಯೇ ಮುಖ್ಯವಾಗಿದ್ದು, ಅದರ ಯಶಸ್ವಿ ನಿರ್ವಹಣೆಯತ್ತ ಸಂಪೂರ್ಣ ಗಮನ ಹರಿಸುವುದಾಗಿ ಅವರು ತಿಳಿಸಿದರು.

ಜಮೀರ್ ಅಹ್ಮದ್ ಖಾನ್ ಅವರು ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದು, ಅಲ್ಪಸಂಖ್ಯಾತ ಸಮುದಾಯದಲ್ಲಿ ಪ್ರಭಾವಿ ಮುಖಂಡರೆಂದು ಗುರುತಿಸಿಕೊಂಡಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಮತ್ತೆ ಸಚಿವ ಸ್ಥಾನ ದೊರೆತಿರುವುದು ಕಾಂಗ್ರೆಸ್ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.










