ವಿದ್ಯಾ ವಿಕಾಸ ಶಾಲೆಯಲ್ಲಿ ವಿಶ್ವ ಬಾಹ್ಯಾಕಾಶ ಸಪ್ತಾಹ ಕಾರ್ಯಕ್ರಮ : ಇಸ್ರೋದ ಐವರು ವಿಜ್ಞಾನಿಗಳು ಭಾಗಿ

3 Min Read

 

 

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 08 : ನಗರದ
ವಿದ್ಯಾ ವಿಕಾಸ ಆಂಗ್ಲ ಪ್ರೌಢಶಾಲೆಯಲ್ಲಿ ಇಂದು ವಿಶ್ವ ಬಾಹ್ಯಾಕಾಶ ಸಪ್ತಾಹ-2025 ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಇಸ್ರೋದ 5 ಹಿರಿಯ ವಿಜ್ಞಾನಿಗಳಾದ ಶಿವಾನಂದ ಕಾಮತ್, ಶ್ರೀಮತಿ ಸುಮಾ ಹಿರೇಮಠ್, ಬಾಲಾಜಿ ಆರ್, ಗೋವಿಂದರಾಜ ಟಿ ಎಸ್, ಶ್ರೀಮತಿ ಸುಮಾ ಎಸ್ ಲೊಂಕಡಿ, ಚಿತ್ರದುರ್ಗ ವಿಜ್ಞಾನ ಫೌಂಡೇಷನ್‍ನ ಹೆಚ್.ಎಸ್.ಟಿ.ಸ್ವಾಮಿ, ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವಿಜಯ ಕುಮಾರ್, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಎಂ.ಪೃಥ್ವೀಶ ಹಾಗೂ ಶಾಲೆಯ ಮುಖ್ಯಸ್ಥರು ಮತ್ತು ಶಿಕ್ಷಕ ವೃಂದದವರು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶಿ ವಿಜ್ಞಾನ ಶಿಕ್ಷಕರು ಭಾಗವಹಿಸಿದ್ದರು.

 

ಕಾರ್ಯಕ್ರಮದ ಉದ್ಘಾಟನೆಯ ನಂತರ ಶ್ರೀಯುತ ಶಿವಾನಂದ ಕಾಮತ್ ಅವರು ಮಾತನಾಡುತ್ತಾ , ವಿಶ್ವ ಬಾಹ್ಯಾಕಾಶ ಸಪ್ತಾಹ ಅಂದರೆ ವಿಶ್ವ ಮಟ್ಟದಲ್ಲಿ ಆಕ್ಟೋಬರ್ 4 ರಿಂದ 10ರವರೆಗೆ ಆಚರಣೆ ಮಾಡಲಾಗುತ್ತದೆ. ಕಾರಣ ಆಕ್ಟೋಬರ್ 4. 1957 ವಿಶ್ವದ ಪ್ರಪ್ರಥಮ ಕೃತಕ ಉಪಗ್ರಹ ರಚನೆ ಮಾಡಲಾಗಿತ್ತು. ಅದೇ ರೀತಿ ಮುಂದೆ 10 ವರ್ಷದಲ್ಲಿ ಉಪಗ್ರಹ ಉಡಾವಣೆ ಮಾಡಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಾಹ್ಯಾಕಾಶಕ್ಕೆ ಜನರು ಹೋಗುತ್ತಿದ್ದಾರೆ. ನಮ್ಮ ದೇಶ ಅಥವಾ ಪಕ್ಕದ ದೇಶಕ್ಕೆ ಗಡಿ ಪ್ರದೇಶವಿದೆ ಆದರೆ ಬಾಹ್ಯಾಕಾಶಕ್ಕೆ ಯಾವುದೇ ಗಡಿ ಇಲ್ಲ. ನಾವು ನಮ್ಮ ಗಡಿ ಇಷ್ಟು ಎಂದು ಗುರುತು ಮಾಡಲು ಸಾಧ್ಯ. ಬಾಹ್ಯಾಕಾಶಕ್ಕೆ ಗಡಿ, ಗುರುತು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ SPACE TREATY S ಯನ್ನು ವಿಶ್ವದ ಒಟ್ಟಾರೆ 99 ದೇಶಗಳಲ್ಲಿ ಒಪ್ಪಂದವಾಗಿದ್ದು, ನಮ್ಮ ದೇಶವು ಒಂದಾಗಿದೆ. ಅದರ ಪ್ರಕಾರ ಪ್ರತಿಯೊಂದು ದೇಶವು ಈ ಒಪ್ಪಂದದ ಪ್ರಕಾರವೇ ನಡೆದುಕೊಳ್ಳಬೇಕು ಎಂದರು.

ನಂತರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಸ್ ಎಂ ಪೃಥ್ವೀಶ ಅವರು ಮಾತನಾಡುತ್ತಾ ನಮಗೆ ದಿನ ನಿತ್ಯದ ಜೀವನದಲ್ಲಿ ವಿಜ್ಞಾನವು ಅತ್ಯಂತ ಅವಶ್ಯಕವಾಗಿ ಬೇಕಾಗಿದೆ. ವಿಜ್ಞಾನವಿಲ್ಲದೇ ಮಾನವನ ಜೀವನವೇ ನಶ್ವರ ಹಾಗೂ ಅಂತರಿಕ್ಷದ ಅಧ್ಯಯನ ಸಂವಹನ ಮಾಧ್ಯಮಗಳು ಕಾರ್ಯನಿರ್ವಹಿಸಲು ವಿಜ್ಞಾನ ಅತೀ ಅವಶ್ಯಕ. ವಿದ್ಯಾರ್ಥಿಗಳು ಬೆಳೆದು ಮುಂದೆ ಒಂದು ದಿನ ದೊಡ್ಡ ವಿಜ್ಞಾನಿಗಳಾಗಿ ಎಂದು ಆಶಿಸಿದರು.

ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವಿಜಯ ಕುಮಾರ್ ಅವರು ಮಾತನಾಡುತ್ತಾ ಇಸ್ರೋ ಸಂಸ್ಥೆಯ ಈ ದಿನದ ಕಾರ್ಯಕ್ರಮದಲ್ಲಿ ಚಂದ್ರಯಾನ ಮತ್ತು ಉಪಗ್ರಹ ಹಾಗೂ ಇತ್ಯಾದಿಗಳ ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸಿ ತುಂಬಾ ಉಪಯುಕ್ತವಾಗಿ ಬಳಸಿಕೊಳ್ಳಲು ಸಲಹೆ ನೀಡಿದರು.

ಬೆಂಗಳೂರಿನ ಇಸ್ರೋ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡವು ಬಾಹ್ಯಾಕಾಶ ವಿಜ್ಞಾನ ಮಾದರಿಗಳ ಪ್ರದರ್ಶನ ಹಾಗೂ ವಿಜ್ಞಾನ ಮತ್ತು ಬಾಹ್ಯಕಾಶಕ್ಕೆ ಸಂಬಂಧಿಸಿದ ಮೆಮೋರಿ ಟೆಸ್ಟ್ (5, 6, 7ನೇ ತರಗತಿ ಮಕ್ಕಳಿಗೆ), ಪಿಕ್ & ಸ್ಪೀಚ್ (8, 9, 10ನೇ ತರಗತಿ ಮಕ್ಕಳಿಗೆ) ಮತ್ತು ವಿಜ್ಞಾನ ಮತ್ತು ಬಾಹ್ಯಕಾಶ ರಸಪ್ರಶ್ನೆ ಸ್ಪರ್ಧೆ (8, 9, 10ನೇ ತರಗತಿ ಮಕ್ಕಳಿಗೆ) ನಡೆಸಿಕೊಡಲಾಯಿತು.

ಈ ಮೇಲ್ಕಂಡ ಸ್ಪರ್ಧೆಗಳಿಗೆ ಪ್ರತಿ ಶಾಲೆಯಿಂದ ರಸಪ್ರಶ್ನೆ ಸ್ಪರ್ಧೆಗೆ ಮೂರು ವಿದ್ಯಾರ್ಥಿಗಳ ಒಂದು ತಂಡ ಮತ್ತು ಪಿಕ್ & ಸ್ಪೀಚ್ ಗರಿಷ್ಠ 3 ವಿದ್ಯಾರ್ಥಿಗಳು ಮತ್ತು ಮೆಮೋರಿ ಟೆಸ್ಟ್ ವೈಯಕ್ತಿಕ ಸ್ಪರ್ಧೆಗೆ ಪ್ರತಿ ಶಾಲೆಯಿಂದ ಗರಿಷ್ಠ 3 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬೆಳಗ್ಗೆ 9.00 ಕ್ಕೆ ಪ್ರಾರಂಭವಾಗುವ ದಿನದ ಕಾರ್ಯಕ್ರಮದ ಮೊದಲಿಗೆ ವಿಜ್ಞಾನ ವಸ್ತು ಪ್ರದರ್ಶನ, ನಂತರ ಮುಖ್ಯ ವೇದಿಕೆಯ ಸಭಾ ಕಾರ್ಯಕ್ರಮ, ನಂತರ ಮೇಲ್ಕಂಡ ಸ್ಪರ್ಧೆಗಳು ಶಾಲೆಯ ವಿವಿಧ ವೇದಿಕೆಗಳಲ್ಲಿ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಇಸ್ರೋ ಸಂಸ್ಥೆಯ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ತಿಪ್ಪೇಸ್ವಾಮಿ ಎನ್ ಜಿ ಸ್ವಾಗತಿಸಿದರು, ಶಿಕ್ಷಕಿ ದೀಪಿಕಾ ಎಂ ನಿರೂಪಿಸಿದರು, ಶಿಕ್ಷಕಿ ಶ್ರೀನಿಧಿ ವಂದಿಸಿದರು.

Share This Article
Enable Notifications OK No thanks