ನಾಳೆ ತುರುವನೂರಿನ ಕವಿ, ತತ್ವಜ್ಞಾನಿ ಕೆ. ಲಿಂಗಯ್ಯ ಅವರ ಕೃತಿಗಳು ಬಿಡುಗಡೆ

6 Min Read

ಚಿತ್ರದುರ್ಗ ನ. 07 : ಚಿತ್ರದುರ್ಗ ಜಿಲ್ಲೆಯ ತುರುವನೂರಿನ ಕವಿ, ತತ್ವಜ್ಞಾನಿ ಕೆ. ಲಿಂಗಯ್ಯ ಅವರು ಭಕ್ತ ಕನಕದಾಸರ ಕುರಿತಂತೆ ಭಾಮಿನಿ ಷಟ್ಪದಿ ಕಾವ್ಯ, ಗದ್ಯಾನುವಾದ ಸಹಿತ ರಚಿಸಿರುವ “ಶ್ರೀ ಕನಕದಾಸರ ಚರಿತ್ರೆ” ಹಾಗೂ “ಜ್ಞಾನಾಮೃತ ಸಾರ” ಎಂಬ ಕೃತಿಗಳು ನ. 08 ರಂದು ನಗರದಲ್ಲಿ ಏರ್ಪಡಿಸಲಾಗಿರುವ ಕನಕದಾಸರ ಜಯಂತಿ ಸಮಾರಂಭದಲ್ಲಿ ಬಿಡುಗಡೆ ಆಗಲಿವೆ.

ಕನಕದಾಸರ ಚರಿತ್ರೆ, ಜ್ಞಾನಾಮೃತ ಸಾರ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿರುವ ತುರುವನೂರಿನ ಕವಿ, ತತ್ವಜ್ಞಾನಿ ಪೂಜ್ಯ ಲಿಂಗಯ್ಯನವರ ಕುರಿತು ಕೆಲವು ಅಂಶಗಳನ್ನು ಇಲ್ಲಿ ಪರಿಚಯಿಸಲಾಗುತ್ತಿದೆ. ತುರುವನೂರು ಕೆಚ್ಚೆದೆಯ ನೂರಾರು ಸ್ವಾತಂತ್ರ್ಯ ಹೋರಾಟಗಾರರಿಗೆ, ಉತ್ತಮದಾರ್ಶನಿಕರಿಗೆ, ಸಮಾಜ ಸೇವಕರಿಗೆ, ಕವಿಗಳಿಗೆ ಜನ್ಮ ನೀಡಿದೆ. ಇಂತಹ ಪುಣ್ಯ ಭೂಮಿಯಲ್ಲಿ ನೆಲೆಸಿ  ವ್ಯವಸಾಯ ಹಾಗೂ ಕಂಬಳಿ ನೇಕಾರಿಕೆ ವೃತ್ತಿಯಿಂದ ಜೀವಿಸುತ್ತಿದ್ದ  ವೀರಪ್ಪ ಮತ್ತು ಮಲ್ಲಮ್ಮನವರ ಪುತ್ರನಾಗಿ 1905 ರ ನವೆಂಬರ್ 06 ರಂದು ಜನಿಸಿದ ಲಿಂಗಯ್ಯ ನವರು,  ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲಿಯೇ ಪ್ರತಿಭಾವಂತರಾಗಿದ್ದರು. ಆಗಿನ ಕೆ.ಎಲ್.ಎಸ್. ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್‍ಗಳಿಸಿ ಜಿಲ್ಲಾ-ವಿದ್ಯಾಧಿಕಾರಿಗಳು ಹಾಗು ಸುತ್ತಮುತ್ತಲ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾದರು. ಬಡತನ ಮುಂದಿನ ವಿದ್ಯಾಭ್ಯಾಸಕ್ಕೆ ಅವಕಾಶ ನೀಡಲಿಲ್ಲ. ವಿದ್ಯಾಧಿಕಾರಿಗಳ ಒತ್ತಾಸೆಯಂತೆ ಉಪಾಧ್ಯಾಯ ವೃತ್ತಿಗೆ ಪಾದಾರ್ಪಣ ಮಾಡಿದರು.

 

ಲಿಂಗಯ್ಯ ನವರು ಕಂದಾಚಾರ ಮೌಢ್ಯಗಳನ್ನು  ತಮ್ಮ 14ನೆಯ ಚಿಕ್ಕ ವಯಸ್ಸಿನಲ್ಲಿಯೇ ವಿರೋಧಿಸುತ್ತಿದ್ದರು. ತುರುವನೂರಿನ  ಮಾರಿಜಾತ್ರೆಯಲ್ಲಿ ನಡೆಯುತ್ತಿದ್ದ ಪ್ರಾಣಿಬಲಿಯನ್ನು ಖಂಡಿಸಿ ಜಾತ್ರೆ ನಿಲ್ಲಿಸುವಲ್ಲಿ  ಯಶಸ್ವಿಯಾದರು. ನಾಲ್ಕಾರು ವರ್ಷಗಳ ಅವಧಿಯಲ್ಲಿ ಪುರ ಪ್ರಮುಖರ  ಮನವೊಲಿಸಿ ಸಾತ್ವಿಕ ಸಿಹಿ ಭೋಜನದ ಮೂಲಕ ಮಾರಿಜಾತ್ರೆ ಆಚರಿಸುವುದನ್ನು ರೂಢಿಗೆತಂದರು. ‘ಮಾರಿಜಾತ್ರೆ’ ಎಂಬ ಕೃತಿಯನ್ನು ರಚಿಸುವ ಮೂಲಕ ಆಗಿನ ಮೈಸೂರು ರಾಜ್ಯದ ಗಮನವನ್ನು ಸೆಳೆದಿದ್ದರು. ಪ್ರಾಣಿಬಲಿಯನ್ನು ನಿಲ್ಲಿಸುವಲ್ಲಿ ಲಿಂಗಯ್ಯನವರದು ಆ ಕಾಲಕ್ಕೆ ಸಾಮಾಜಿಕ ಕ್ರಾಂತಿಕಾರಿ ಹೆಜ್ಜೆಯಾಗಿತ್ತು.

 

ಆದರ್ಶ ಶಿಕ್ಷಕರಾಗಿ ಸೇವೆ :
1920ರಲ್ಲಿ ಶಾಲಾ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದ ಲಿಂಗಯ್ಯನವರು, ಚಿತ್ರದುರ್ಗ ಜಿಲ್ಲೆಯ ನಾನಾ ಗ್ರಾಮಗಳಲ್ಲಿ 38 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದರು. ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರುಗಳಾಗಿದ್ದರು. ಕನ್ನಡ ಭಾಷೆ-ಸಾಹಿತ್ಯ-ವ್ಯಾಕರಣ-ಗಣಿತ-ವಿಜ್ಞಾನ-ಸಮಾಜ-ಇತಿಹಾಸ-ಕಲೆ-ಸಂಸ್ಕøತಿಗಳ ಬಗ್ಗೆ ಸುದೀರ್ಘವಾಗಿ ಮನಮುಟ್ಟುವಂತೆ ಪಾಠ ಮಾಡುತ್ತಿದ್ದರೆಂದು ಅವರ ವಿದ್ಯಾರ್ಥಿಗಳು ಈಗಲೂ ನೆನಪಿಸಿಕೊಳ್ಳುತ್ತಾರೆ. ಲಿಂಗಯ್ಯನವರು ತನ್ಮಯರಾಗಿ ಹೃದಯ ಸ್ಪರ್ಶಿಯಾಗಿ ಪಾಠ ಮಾಡುತ್ತಿದ್ದರು. ಅವರು ಗೋವಿನಗೀತೆ ಯನ್ನು ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿಗಳ ಕಣ್ಣುಗಳೆಲ್ಲ ಒದ್ದೆಯಾಗಿರುತ್ತಿತ್ತಂತೆ. ಹೀಗೆ ಲಿಂಗಯ್ಯನವರುತಮ್ಮ ಪಾಠ ಪ್ರವಚನ ವೈಖರಿಯಿಂದ ವಿದ್ಯಾರ್ಥಿಗಳ ಮತ್ತು ಮೇಲಧಿಕಾರಿಗಳ ಮನಸ್ಸನ್ನುಗೆದ್ದಿದ್ದರು. ಇದನ್ನು ಮೆಚ್ಚಿದ ಅಂದಿನ ಜಿಲ್ಲಾ ಶಿಕ್ಷಣಾಧಿಕಾರಿಗಳು ಲಿಂಗಯ್ಯನವರಿಗೆ ಸರಕಾರದಿಂದ ವಿಶೇಷ ಬಡ್ತಿಯನ್ನು ಸಹ ನೀಡಿ ಗೌರವಿಸಿದ್ದರು.

 

ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಕರಾಗಿದ್ದ ಲಿಂಗಯ್ಯನವರು ಹಳ್ಳಿಗಳ ಬಡ ಮಕ್ಕಳನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡುಅಭ್ಯಾಸ ಮಾಡಿಸಿದ್ದುಂಟು. ಅವರ ಮನೆಯಲ್ಲಿದ್ದುಕೊಂಡು ಓದಿದ ಎನ್.ಟಿ.ಎರ್ರಿಸ್ವಾಮಿಯವರು ಈಗ ಕೆನರಾ ಬ್ಯಾಂಕಿನ ವಿಭಾಗೀಯ ಪ್ರಬಂಧಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರ ಕೈಯಲ್ಲಿ ಓದಿದ ವಿದ್ಯಾರ್ಥಿಗಳಲ್ಲಿ ಶಿಕ್ಷಕರ ಸಂಖ್ಯೆಯೇ ಹೆಚ್ಚು. ಕೆಲವರು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.
ಲಿಂಗಯ್ಯನವರು ಸಂಸಾರಿಕ ಬದುಕಿನೊಟ್ಟಿಗೆ ಆಧ್ಯಾತ್ಮಿಕ ಸಾಧನೆಗೈದಿದ್ದಾರೆ. ಲಿಂಗಯ್ಯನವರು ಜೀವನದಲ್ಲಿ ಉಂಡ ನೋವು ಅಪಾರ. ಬೇಸಾಯ ಹಾಗೂ ಶಿಕ್ಷಕ ವೃತ್ತಿಯಿಂದ ಬರುತ್ತಿದ್ದ ಆದಾಯವು ಜೀವನಕ್ಕೆ ಸಾಲುತ್ತಿರಲಿಲ್ಲ. ಎಷ್ಟೇ ಕಷ್ಟ-ನಷ್ಟಗಳು ಎದುರಾದರೂ ಅವುಗಳನ್ನು ಸಂಯಮದಿಂದ ನಿಭಾಯಿಸುತ್ತಿದ್ದರು. ಕಿತ್ತು ತಿನ್ನುವ ಬಡತನ ಅವರ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಯಿತು. ಪುಟವಿಟ್ಟ ಬಂಗಾರದಂತಾದರು. ಸರಳ ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿದ್ದ ಲಿಂಗಯ್ಯನವರು ಸಂಸಾರದ ಲೌಕಿಕ ಎಡರು-ತೊಡರುಗಳನ್ನು ತಾಳ್ಮೆಯಿಂದ ಎದುರಿಸುತ್ತ, ಸುಜ್ಞಾನವೆಂಬ ನಾವೆಯ ಮೂಲಕ ಸಂಸಾರವೆಂಬ ಭವಸಾಗರವನ್ನುದಾಟಿದ ನಿಷ್ಕಾಮ ಕರ್ಮಯೋಗಿಯಾಗಿದ್ದಾರೆ.

 

ಸಾಹಿತ್ಯ ಕೃಷಿ :
ಮಕ್ಕಳಿಗೆ ಪಾಠ ಹೇಳುತ್ತ, ಜನರಿಗೆ ವೇದಾಂತ ಪ್ರವಚನ ಮಾಡುತ್ತಿದ್ದ ಲಿಂಗಯ್ಯನವರು ರಾಮಾಯಣ, ಮಹಾಭಾರತ, ಉಪನಿಷತ್ತುಗಳು, ಪುರಾಣ ಪುಣ್ಯಕಥೆಗಳನ್ನು ಓದಿ ಕರಗತ ಮಾಡಿಕೊಂಡಿದ್ದರು. ಇವರು ಶ್ರೀ.ಶಾಂಕರ    ಅದ್ವೈತ ಪರಂಪರೆಯ ಶ್ರೀ ನರಹರಿ ಸದ್ಗುರುಗಳ ಪರಮಶಿಷ್ಯರಾಗಿದ್ದರು. ಸನಾತನಅದ್ವೈತ ಸಿದ್ಧಾಂತದಲ್ಲಿ ಆಳವಾಗಿ ಕೃಷಿಮಾಡಿಆತ್ಮಜ್ಞಾನಾನುಭವದ ಸಾಧನೆ ಮಾಡಿದರು. ಹೀಗಾಗಿ ಅಪರೂಪದ ಕಾವ್ಯಸಿರಿಯು ಲಿಂಗಯ್ಯನವರಿಂದಒಡ ಮೂಡಿಬಂದಿದೆ.  “ಆಡು ಮುಟ್ಟದಗಿಡವಿಲ್ಲ” ಎಂಬಂತೆ ಅವರು ಕೈ ಆಡಿಸದ ಸಾಹಿತ್ಯ ಕ್ಷೇತ್ರವಿಲ್ಲ. ಶ್ರೀಯುತರು ಸಾವಿರಾರು ತತ್ವಪದಗಳು, ಷಟ್ಪದಿ ಕಾವ್ಯ, ತ್ರಿಪದಿ ಕಾವ್ಯ, ಲಾವಣಿ, ಕಂದ ಪದ್ಯ, ನಾಟಕ, ಹರಿಕಥೆ, ವೇದಾಂತ ಕಥೆ-ಕವನಗಳನ್ನು ಒಳಗೊಂಡ 30ಕ್ಕೂ ಅಧಿಕಕಾವ್ಯ ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತ ಗೊಳಿಸಿರುವರು. ಇವರು ಸರಳ ಕನ್ನಡದಲ್ಲಿ ಜನ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಕಾವ್ಯ ರಚಿಸಿರುವುದೊಂದು ವಿಶೇಷವೇ ಸರಿ. ಮೋಕ್ಷಾಪೇಕ್ಷೆಯಿಂದ ಸತ್ಯಾನ್ವೇಷಣೆಯಲ್ಲಿ ತೊಡಗಿದ ಸಾಧಕರಿಗೆ ಇವರ ಸಾಹಿತ್ಯವು ದಾರಿದೀಪವಾಗಬಲ್ಲದು ಎಂಬುದಕ್ಕೆ ಅವರು ಬರೆದ ಗ್ರಂಥಗಳೇ ದಿವ್ಯ ಸಾಕ್ಷಿಯಾಗಿವೆ.

ತತ್ವಪದಗಳ ರಚನೆಕಾರ  :
ಮಧ್ಯಕಾಲೀನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ರಚನೆಯಾದ ತತ್ವಪದಗಳಿಗೆ ಇತ್ತೀಚೆಗೆ ವಿಶೇಷ ಜನಮನ್ನಣೆ ಪ್ರಾಪ್ತವಾಗುತ್ತಿದೆ. ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗದೇ ಉಳಿದಿದ್ದ ಅದೆಷ್ಟೋ ಕವಿಗಳ ತತ್ವಪದಗಳು ಈಗ ಬೆಳಕು ಕಾಣುತ್ತಿರುವುದು ಸಂತಸದ ಸಂಗತಿ. ಅಂಥತತ್ವಪದ ಕವಿಗಳಲ್ಲಿ ಲಿಂಗಯ್ಯನವರು ಪ್ರಮುಖರು. ಸಾವಿರಾರು ತತ್ವಪದಗಳನ್ನು “ನರಹರಿ” ಎಂಬ ಅಂಕಿತನಾಮದ ಮೂಲಕ ರಚನೆ ಮಾಡಿದ್ದಾರೆ. ಅವುಗಳಲ್ಲಿ ಸುಮಾರು 800 ತತ್ವಪದಗಳನ್ನು ಸಂಗ್ರಹಿಸಿ “ತುರುವನೂರು ಲಿಂಗಾರ್ಯರ ತತ್ವಪದಗಳು” ಸಂಪುಟ-8 ರಲ್ಲಿಎರಡು ಭಾಗಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ರಾಷ್ಟ್ರೀಯ ಸಂತಕವಿ ಕನಕದಾಸಅಧ್ಯಯನ ಮತ್ತು ಸಂಶೋಧನಕೇಂದ್ರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರವು ಜಂಟಿಯಾಗಿ ಪ್ರಕಟಿಸಿವೆ.  ರಾಜ್ಯದಲ್ಲಿ ಪ್ರಕಟವಾಗಿರುವ ತತ್ವಪದಕಾರರ 32 ಸಂಪುಟಗಳಲ್ಲಿ ಲಿಂಗಾರ್ಯರ ಸಂಪುಟ ಮಾತ್ರ 2 ಭಾಗಗಳಲ್ಲಿ ಪ್ರಕಟವಾಗಿರುವುದು ಅವರ ಪ್ರಬುಧ್ಧ ಸಾಹಿತ್ಯಕ್ಕೆ ಸಂದ ಗೌರವವಾಗಿದೆ.

 

ಲಿಂಗಯ್ಯನವರ ತತ್ವಪದಗಳು ಭಕ್ತಿ, ಜ್ಞಾನ, ವೈರಾಗ್ಯ ಯೋಗಗಳ ಬಗ್ಗೆ ಹೆಚ್ಚಾಗಿ ಗಮನಹರಿಸುತ್ತವೆ. ಜೊತೆಗೆ ಸಮಾಜದ ಒಳಿತು-ಕೆಡುಕು, ಅಂಕು-ಡೊಂಕುಗಳನ್ನು ವಿಶ್ಲೇಷಣೆಗೊಳಪಡಿಸುತ್ತವೆ. ಜೀವಪರವಾದ ನಿಲುವುಗಳಿಗೆ ಲಿಂಗಯ್ಯನವರು ಹೆಚ್ಚು ಒತ್ತು ನೀಡಿದ್ದಾರೆ.
ಲಿಂಗಾರ್ಯರ ಭಕ್ತಿಗೀತೆ/ತತ್ವಪದಗಳು ವ್ಯಾಕರಣ, ಛಂದೋಬದ್ಧವಾಗಿದ್ದು  ರಾಗ, ತಾಳ, ಲಯಗಳಿಂದ ಕೂಡಿದ್ದು ಸುಶ್ರಾವ್ಯವಾಗಿ ಹಾಡಬಹುದಾಗಿದೆ. ಕಂಚಿನ ಕಂಠ-ಸಿರಿಯ ಹಿಂದುಸ್ತಾನಿ ಸುಪ್ರಸಿದ್ಧ ಗಾಯಕರಾದ ಪಂ:ಕುಮಾರದಾಸರು ಗದುಗಿನ ಪರಮಪೂಜ್ಯ ಪದ್ಮಭೂಷಣ ಡಾ:ಪಂ.ಪುಟ್ಟರಾಜ ಗವಾಯಿಗಳ ಪರಮಶಿಷ್ಯರು. ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ‘ಏ’ ಶ್ರೇಣಿ ಕಲಾವಿದರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಕನ್ನಡರಾಜ್ಯೋತ್ಸವ ಪ್ರಶಸ್ತಿಯನ್ನೊಳಗೊಂಡಂತೆ ದೇಶದಾದ್ಯಂತ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇವರು ಲಿಂಗಯ್ಯನವರು ರಚಿಸಿದ ‘ಕಡಲದಾಂಟಿದ ವೀರ ಹನುಮಾ’ ಎಂಬ ಧ್ವನಿ ಸುರುಳಿಯಲ್ಲಿ ರಾಗ ಸಂಯೋಜಿಸಿ ಗಾಯನ ಮಾಡಿ ಜನಮನ ಸೂರೆಗೊಂಡಿದ್ದಾರೆ. ಅಲ್ಲದೆ ಭಜನಾಮೃತದಲ್ಲಿರುವ ನೂರಾರು ಗೀತೆಗಳಿಗೆ ರಾಗ ಸಂಯೋಜನೆ ಮಾಡಿ, ಅನೇಕ ದೊಡ್ಡ ವೇದಿಕೆಗಳಲ್ಲಿ ಹಾಡಿ ಜನಮನ್ನಣೆ ಗಳಿಸಿದ್ದಾರೆ.

ಪಾರಮಾರ್ಥಿಕ ಗುರು :-
ಲೌಕಿಕ ಗುರುವಿನ ವೃತ್ತಿಯ ಜೊತೆಗೆ ಪಾರಮಾರ್ಥಿಕ ಗುರುವೂ ಆಗಿ ಲಿಂಗಯ್ಯನವರು ಎಲ್ಲೆಡೆ ಬೆಳಗಿದವರು. ಕಾವಿ ಧರಿಸದೆ, ಸನ್ಯಾಸಿ ಆಗದೇ, ವೇಷಭೂಷಣಗಳಿಗೆ ದಾಸನಾಗದೇ, ಸಂಸಾರಿಯಾಗಿದ್ದುಕೊಂಡೇ ವೇದಾಂತ ಪಂಡಿತರಾಗಿ ಹೆಸರಾದವರು.
“ನಿತ್ಯವೂ ಆನಂದವಾಗಿರುವುದೇ ನಿಜವಾದ ಆಧ್ಯಾತ್ಮಿಕತೆ” ಎನ್ನುವ ಲಿಂಗಯ್ಯನವರು ತಮ್ಮ ಶಿಷ್ಯರೊಡಗೂಡಿ ಪ್ರತಿದಿನ ಸಂಜೆ ತಮ್ಮ ಮನೆಯಲ್ಲಿ ತಾವು ರಚಿಸಿದ ತತ್ವಪದಗಳ ಭಜನೆ ನಂತರ ಪುರಾಣ ಪ್ರವಚನಗಳನ್ನು ಮಾಡುತ್ತಿದ್ದರು. ರಾಮಾಯಣ, ಮಹಾಭಾರತ, ಭಗವದ್ಗೀತೆ, ಭಾಗವತ, ದೇವಿ ಮಹಾತ್ಮೆ, ರೇವಣ ಸಾಂಗತ್ಯ, ಶನಿಮಹಾತ್ಮೆ ಮುಂತಾದ ಗ್ರಂಥಗಳಲ್ಲಿ ಅಡಗಿರುವ ಗೌಪ್ಯವಾದ ತಾತ್ವಿಕ ವಿಚಾರಗಳನ್ನು ಅತ್ಯಂತ ಸುಲಲಿತವಾಗಿ ಜನರಿಗೆ ಬೋಧಿಸುತ್ತಿದ್ದರು.
ವಿದಾಯ : ಲಿಂಗಯ್ಯನವರು ಶಿಕ್ಷಕರಾಗಿ, ಪ್ರವಚನ ಪ್ರವೀಣರಾಗಿ, ವೇದಾಂತತತ್ವಜ್ಞಾನಿಯಾಗಿ ಸಮಾಜಸೇವೆ ಸಲ್ಲಿಸುತ್ತ, ಶ್ರೀ ಲಿಂಗಾರ್ಯ ಎಂಬ ಕಾವ್ಯನಾಮದಿಂದ ಗುರುತಿಸಿಕೊಂಡು, ವೈವಿಧ್ಯಮಯ ಕೃತಿಗಳನ್ನು ರಚನೆ ಮಾಡುವುದರ ಮೂಲಕ ಕನ್ನಡ ಸಾಹಿತ್ಯದಲ್ಲಿ ಕವಿಯಾಗಿ ತತ್ವಪದಕಾರರಾಗಿ ನೇಪಥ್ಯದಲ್ಲಿದ್ದಾರೆ. ದೈಹಿಕವಾಗಿ ಲಿಂಗಯ್ಯನವರು ಈಗ ನಮ್ಮೊಂದಿಗಿಲ್ಲ (ನಿಧನ-08-04-1978). ಆದರೆ ಅವರು ರಚನೆ ಮಾಡಿದ ಜ್ಞಾನ ಭಂಡಾರದಂತಿರುವ ಸಾಹಿತ್ಯ ನಮ್ಮ ಕಣ್ಣ ಮುಂದಿದೆ. ಆ ಸಾಹಿತ್ಯದಲ್ಲಿ ಕೆಲವು ಕೃತಿಗಳು ಮಾತ್ರ ಪ್ರಕಟಣೆಯ ಭಾಗ್ಯಕಂಡಿವೆ.  ಇನ್ನುಳಿದಂತೆ ಲಿಂಗಯ್ಯನವರ ಸಾಹಿತ್ಯವನ್ನು ಸಂಪುಟಗಳಲ್ಲಿ ಸಮಗ್ರವಾಗಿ ಬೆಳಕಿಗೆ ತರಬೇಕಾದ ಜವಾಬ್ದಾರಿ ಸರಕಾರ-ಸಮಾಜ-ಕುಟುಂಬ ವರ್ಗದ ಮೇಲಿದೆ. ಸರ್ವಧರ್ಮ ಸಮನ್ವಯತೆಯನ್ನು ಸಾರುವಇವರ ಕೃತಿಗಳು ನಿಂತ ನೀರಿನಂತೆ ಮಡುಗಟ್ಟಿ ನಿಲ್ಲಬಾರದು. ಇವರ ಕೃತಿಗಳು ಶ್ರೀ ಸಾಮಾನ್ಯನನ್ನು ತಲುಪಿ ಜನಮನದಲ್ಲಿ ಪ್ರವಹಿಸಿದಾಗಲೇ ಲಿಂಗಯ್ಯನವರ ತತ್ವ ಚಿಂತನೆಯು ಸಾಕಾರಗೊಳ್ಳುತ್ತದೆ.

ಶ್ರೀ.ಎಂ.ಎಲ್.ತಿಪ್ಪೇಸ್ವಾಮಿ
ಪೂಜ್ಯ ಲಿಂಗಯ್ಯನವರ ಪುತ್ರ
9844140793/9008166000

Share This Article