ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 22 : ಚಳ್ಳಕೆರೆ ತಾಲ್ಲೂಕು ಮೀರಾಸಾಬಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕರಿಕೆರೆ ಗ್ರಾಮದಲ್ಲಿ ಸುಮಾರು ಹತ್ತು ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತ ಶಾಂತಿ ಕದಡುತ್ತಿರುವವರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘದೊಂದಿಗೆ ಸ್ವಸಹಾಯ ಸಂಘಗಳ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಹಗಲು-ರಾತ್ರಿ ಎನ್ನದೆ ಮದ್ಯ ಸೇವಿಸಿ ಬರುವ ಪುರುಷರು ಮನೆಯಲ್ಲಿ ಹೆಂಡತಿ ಮಕ್ಕಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿರುವುದರಿಂದ ಶಾಂತಿ ಇಲ್ಲದಂತಾಗಿದೆ. ಶಾಲಾ-ಕಾಲೇಜುಗಳಿಗೆ ಹೋಗುವ ಯುವಕರು ಮದ್ಯದ ಚಟಕ್ಕೆ ಬಲಿಯಾಗಿದ್ದಾರೆ. ದಿನವಿಡಿ ಕೂಲಿ ಮಾಡಿ ಸಂಪಾದಿಸುವ ಹಣವನ್ನೆಲ್ಲಾ ಮದ್ಯ ಸೇವನೆಗೆ ಬಳಸುತ್ತಿರುವುದರಿಂದ ಊಟಕ್ಕೂ ಪರದಾಡುವಂತಾಗಿದೆ. ಹಾಗಾಗಿ ಕರಿಕೆರೆ ಗ್ರಾಮದ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರನ್ನು ಮಟ್ಟ ಹಾಕಿ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕೆಂದು ಮಹಿಳೆಯರು ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದರು.
ಚಿದಾನಂದೇಶ್ವರ ಮಹಿಳಾ ಸ್ವಸಹಾಯ ಸಂಘ, ಒನಕೆ ಓಬವ್ವ ಮಹಿಳಾ ಸ್ವಸಹಾಯ ಸಂಘ, ಶಾರದಾಂಬ ಮಹಿಳಾ ಸ್ವಸಹಾಯ ಸಂಘ, ಕನಕ ಮಹಿಳಾ ಸ್ವ-ಸಹಾಯ ಸಂಘ, ಮಾಯಮ್ಮದೇವಿ ಮಹಿಳಾ ಸ್ವ-ಸಹಾಯ ಸಂಘ ಸೇರಿದಂತೆ ಒಟ್ಟು ಹನ್ನೆರಡು ಸ್ವ-ಸಹಾಯ ಸಂಘಗಳ ಮಹಿಳೆಯರಾದ ಅಶ್ವಿನಿ, ರತ್ನಮ್ಮ, ಸುಬ್ಬಮ್ಮ, ಪಾರ್ವತಮ್ಮ, ಅನುಸೂಯಮ್ಮ, ಗಂಗಮ್ಮ, ಲಕ್ಷ್ಮಿ, ಅನಿತ, ಲಕ್ಷ್ಮಿದೇವಿ, ಮಂಜಮ್ಮ, ಓಂಕಾರಮ್ಮ, ಜಯಲಕ್ಷ್ಮಿ, ಮಾರಕ್ಕ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಇವರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.










