ಸುದ್ದಿಒನ್, ವಿಜಯಪುರ, ಮೇ.07 : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯು ಕೇವಲ ಕುಟುಂಬ ನಿರ್ವಹಣೆಗೆ ಸೀಮಿತವಾಗದೆ, ಬಡ ಮಹಿಳೆಯರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸುತ್ತಿದೆ. ಇದಕ್ಕೆ ಜ್ವಲಂತ ಉದಾಹರಣೆಯಾಗಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬರಗುಡಿ ಗ್ರಾಮದ ರತ್ನಾಬಾಯಿ ಕೋಳಿ ಅವರು ಹೊರಹೊಮ್ಮಿದ್ದಾರೆ.
ಸರ್ಕಾರ ನೀಡುವ ಮಾಸಿಕ ₹2,000 ಹಣವನ್ನು ವ್ಯರ್ಥ ಮಾಡದ ರತ್ನಾಬಾಯಿ, ಕಳೆದ 20 ತಿಂಗಳಿಂದ ಬಂದ ಮೊತ್ತವನ್ನು ಅಚ್ಚುಕಟ್ಟಾಗಿ ಉಳಿತಾಯ ಮಾಡಿದ್ದಾರೆ. ಸಂಗ್ರಹವಾದ ಆ ಹಣಕ್ಕೆ ತಾವು ಕೂಡಿಟ್ಟಿದ್ದ ಒಂದಿಷ್ಟು ಮೊತ್ತವನ್ನು ಸೇರಿಸಿ, ಇಂದು ಸ್ವಂತವಾಗಿ ಹಿಟ್ಟಿನ ಗಿರಣಿಯನ್ನು ಪ್ರಾರಂಭಿಸಿದ್ದಾರೆ.

ನಾಡಿನ ಪ್ರತಿಯೊಬ್ಬ ಮಹಿಳೆಯೂ ಆರ್ಥಿಕ ಸಂಕಷ್ಟದಿಂದ ಮುಕ್ತರಾಗಿ ಗೌರವದ ಜೀವನ ನಡೆಸಬೇಕು ಎಂಬ ಸರ್ಕಾರದ ಉದ್ದೇಶವನ್ನು ರತ್ನಾಬಾಯಿ ಸಾರ್ಥಕಗೊಳಿಸಿದ್ದಾರೆ.










