ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ಲೂಟಿ ಆಗಿರುವ ಆರೋಪ ಕೇಳಿ ಬಂದಿದ್ದು, ಇಂದಿನ ಸದನದಲ್ಲಿ ಬಿಜೆಪಿ ನಾಯಕರು ಈ ಸಂಬಂಧ ಆರ್.ಬಿ.ತಿಮ್ಮಾಪುರ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಇಂದು ರಾಜೀನಾಮೆ ನೀಡಲಿ, ತನಿಖೆಯಲ್ಲಿ ಆರೋಪ ಮುಕ್ತರಾದ ಬಳಿಕ ಮತ್ತೆ ಸಂಪುಟ ಸೇರಿಕೊಳ್ಳಲಿ ಎಂಬ ಮಾತನ್ನ ಹೇಳಿದ್ದಾರೆ.
ಇದಕ್ಕೆ ಆರ್.ಬಿ ತಿಮ್ಮಾಪುರ ಕೂಡ ಪ್ರತಿಕ್ರಿಯೆ ನೀಡಿದ್ದು, ಇಂಥ ರಾಜಕೀಯ ಷಡ್ಯಂತ್ರ ರೂಪಿಸಿ, ಸರ್ಕಾರದ್ದು ಹಾಗೂ ನನ್ನ ತೇಜೋವಧೆ ಮಾಡುವುದಕ್ಕೆ ನಾನು ಅವಕಾಶ ಮಾಡಿಕೊಡುವುದಿಲ್ಲ. ಈ ಸಂಬಂಧ ಭಾರೀ ತಪ್ಪು ಮಾಡ್ತಾ ಇದ್ದಾರೆ. ಏನೋ ಒತ್ತಡ ಇದ್ದಂತೆ ಕಾಣಿಸ್ತಾ ಇದೆ. ಆ ಒತ್ತಡದಿಂದ ಈ ರೀತಿ ಮಾಡ್ತಾ ಇದ್ದಾರೆ ಅಂತ ಕಾಣುತ್ತದೆ.
ಅಂಥದ್ದೇನು ನಡೆದಿಲ್ಲ, ರಾಜೀನಾಮೆ ಕೊಡುವ ಪ್ರಮೇಯವೂ ಇಲ್ಲ, ಅಂಥ ತಪ್ಪು ಏನು ನಡೆದಿಲ್ಲ, ಯಾವುದೇ ಸಾಕ್ಷ್ಯ ಪುರಾವೆಗಳು ಇಲ್ಲ. ಅಸೆಂಬ್ಲಿಯಲ್ಲಿ ಕೂತಿದ್ದಾರಲ್ಲ ಏನು ತಪ್ಪು ಮಾಡಿದ್ದೀವಿ ಅಂತ ಹೇಳ್ತಾರೆ. ಏನದು ಸಾಕ್ಷಿ ಏನು ನಾನು ಮಾತನ್ನಾಡಿದ್ದೀನಾ..? ಯಾರೋ ಅಧಿಕಾರಿ ಮಾತಾಡಿದ ತಕ್ಷಣ ನಾನು ತಪ್ಪು ಮಾಡಿದಂತೆ ಆಗುತ್ತಾ..? ಅಧಿಕಾರಿಗಳು ಅದ್ಯಾರು ತಪ್ಪು ಮಾಡಿದ್ದಾನೋ ಅವನು ಅನುಭವಿಸ್ತಾನೆ. ನಿಮ್ಮ ಹೆಸರೇಳಿ ದುಡ್ಡು ಕಲೆಕ್ಟ್ ಮಾಡಿದರೆ ಏನು ಮಾಡ್ತೀರಾ..? ಅಂತವರ ಮೇಲೆ ತಕ್ಷಣವೇ ಕ್ರಮ ಕೈಗೊಂಡಿದ್ದೀನಿ. ಸಿಎಂ ಈ ಬಗ್ಗೆ ಏನು ಕೇಳಿಲ್ಲ, ನಾನೇನು ಹೇಳಿಲ್ಲ. ಈಶ್ವರಪ್ಪ ಅವರ ರಾಜೀನಾಮೆಗೂ ಇದಕ್ಕೂ ಯದಕ್ಕ್ ಹೋಲಿಕೆ ಮಾಡ್ತೀರಿ. ಡೆತ್ ನೋಟ್ ಬರೆದಿಟ್ಟಿದ್ದ ಕೇಸ್ ಗೂ ನನಗೂ ಯಾವ ಸಂಬಂಧ ಇದೆ. ಸುಳ್ಳು ಸುದ್ದಿಗಳು, ಸುಳ್ಳು ಆಪಾದನೆಗಳು ತರವಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.





















